ಕಾರವಾರ: ಕಳೆದ ಒಂದು ವಾರದಿಂದ ತಾಲೂಕಿನಲ್ಲಿ ಉಷ್ಣಾಂಶ ಭಾರಿಯಾಗಿದ್ದು, ಜನ ಸುಸ್ತಾಗಿದ್ದಾರೆ. ಬುಧವಾರದ ತಾಪಮಾನವು ಗರಿಷ್ಠ 39.2 ಡಿಗ್ರಿ ಸೆಲ್ಶಿಯಸ್ಗೆ ಏರಿಕೆಯಾಗಿ ಭಯ ಹುಟ್ಟಿಸಿತು. ಮಧ್ಯಾಹ್ನದ ಹೊತ್ತಿಗೆ ಬೆಂಕಿಯ ಪಕ್ಕದಲ್ಲಿ ಓಡಾಡಿದ ಅನುಭವ ನೀಡುವಂತಿತ್ತು. ಸತತ ಮೂರನೇ ದಿನವೂ ಕಾರವಾರ ರಾಜ್ಯದಲ್ಲಿ ಅತ್ಯಧಿಕ ತಾಪಮಾನ ಹೊಂದಿದ ಕೇಂದ್ರವಾಗಿದೆ. ಮಾತ್ರವಲ್ಲ ಅಕ್ಟೋಬರ್ ತಿಂಗಳ ಕಾರವಾರ ಕೇಂದ್ರದ ಸಾರ್ವಕಾಲಿಕ ದಾಖಲೆಯ ಉಷ್ಣಾಂಶವಾಗಿದೆ. ಇದೇ ಅವಧಿಯಲ್ಲಿ ಹೊನ್ನಾವರ ಕೇಂದ್ರದಲ್ಲಿ 37.2 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶವನ್ನು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ದಾಖಲಿಸಿದೆ.
ಭಾನುವಾರ 37.4 ಡಿಗ್ರಿ ಸೆಲ್ಶಿಯಸ್ ಇದ್ದ ಉಷ್ಣಾಂಶವು ಸೋಮವಾರ 37.8, ಮಂಗಳವಾರ 38.2 ಕ್ಕೆ ಏರಿಕೆಯಾಗಿದೆ. ಇದು ಕಾರವಾರದ ಅಕ್ಟೋಬರ್ ತಿಂಗಳ ಸಾಮಾನ್ಯ ಉಷ್ಣಾಂಶಕ್ಕಿಂತ 6.9 ಡಿಗ್ರಿ ಸೆಲ್ಶಿಯಸ್ ಹೆಚ್ಚಾಗಿದೆ. ಮಿತಿ ಮೀರಿದ ಸೆಕೆಯಿಂದ ತಂಪು ಪಾನೀಯ, ಎಳನೀರು ಮುಂತಾದ ಪೇಯಗಳಿಗೆ ಜನ ಮುಗಿಬಿದ್ದರು. ಗುರುವಾರ ಉಷ್ಣಾಂಶ ಕೊಂಚ ಇಳಿಕೆಯಾಗಿದ್ದು, 37.2 ಡಿಗ್ರಿ ಸೆಲ್ಶಿಯಸ್ ಇಳಿಕೆಯಾಗಿದೆ.