ಸದಾಶಿವ ಅವರ ಆತ್ಮಕತೆ ಬಿಡುಗಡೆ ಮಾಡಲಾಯಿತು 
ಉತ್ತರ ಕನ್ನಡ

ನಿವೃತ್ತ ಯೋಧನ ರೋಚಕ ಆತ್ಮಕತೆ ಬಿಡುಗಡೆ

ಕಾರವಾರ: ನಿವೃತ್ತ ಕೆಎಎಸ್ ಅಧಿಕಾರಿ ಹಾಗೂ ಮಾಜಿ ಯೋಧ ವೈ.ಜಿ. ಸದಾಶಿವ್ ಅವರ ವೃತ್ತಿ ಮತ್ತು ವೈಯಕ್ತಿಕ ಬದುಕಿನ ರೋಚಕ ಹೆಜ್ಜೆಗುರುತುಗಳನ್ನು ದಾಖಲಿಸಿರುವ 'ಯುದ್ಧದಿಂದ ಸೇವೆಗೆ...' ಆತ್ಮಕಥೆ ಇತ್ತೀಚೆಗೆ ಬೆಂಗಳೂರಿನ ಹಯ್ಯಾಟ್ ಸೆಂಟ್ರಿಕ್ ಹೋಟೆಲ್‌ನಲ್ಲಿ ಲೋಕಾರ್ಪಣೆಗೊಂಡಿತು. ಸದಾಶಿವ ಅವರು ಕಾರವಾರದಲ್ಲಿ ಎಸಿಯಾಗಿ ಕಾರ್ಯ ನಿರ್ವಹಿಸಿದ್ದರು.
ಕೃತಿಯ ಕುರಿತು ಮಾತನಾಡಿದ ವೈ.ಜಿ. ಸದಾಶಿವ್, "ನಾವು ಬದುಕಿದ ಜೀವನ ಹೊಸ ತಲೆಮಾರಿನ ಅನೇಕ ಸವಾಲುಗಳಿಗೆ ಪರಿಹಾರವನ್ನು ನೀಡುತ್ತದೆ. ಕೇವಲ ನನಗಾಗಿ ಬದುಕದೇ, ನನ್ನನ್ನು ಬೆಳೆಸಿದ, ತಮ್ಮವನೆಂದು ಆತುಕೊಂಡ ಈ ಸಮಾಜಕ್ಕೆ ನನ್ನ ಅನುಭವಗಳನ್ನು ಮರಳಿ ಕೊಡುವ ಸಾರ್ಥಕತೆಯ ಭಾವ ನನ್ನಲ್ಲಿದೆ. ನನ್ನ ಬದುಕಿನ ಏಳುಬೀಳುಗಳು, ನಾನು ಇಟ್ಟ ಹೆಜ್ಜೆಗುರುತುಗಳು ಇಂದಿನ ಯುವಜನತೆಗೆ ಸ್ಪರ್ತಿಯೂ, ಶಕ್ತಿಯೂ ಆಗಬಹುದು ಎನ್ನುವ ಉದ್ದೇಶದಿಂದ ನನ್ನ ಜೀವನಾನುಭವವನ್ನು ಈ ಪುಸ್ತಕದ ರೂಪದಲ್ಲಿ ಹೊರತರುತ್ತಿದ್ದೇನೆ ಎಂದರು.
ಪುಸ್ತಕದ ನಿರೂಪಕ ಹಾಗೂ ಪತ್ರಕರ್ತ ನಾಗರಾಜ ವೈದ್ಯ ಮಾತನಾಡಿ, ನೀಟ್‌ರೀಚೇಬಲ್ ಕ್ರಿಯೇಟಿವ್ ಸೊಲ್ಯೂಷನ್ಸ್ ಇದು ಕೇವಲ ಒಬ್ಬ ವ್ಯಕ್ತಿಯ ಕತೆಯಲ್ಲ. ಬದಲಾಗಿ ಊಟಿಯ ಚಹಾ ಎಸ್ಟೇಟ್‌ನಿಂದ ಆರಂಭವಾಗಿ, ದೇಶ ಕಾಯುವ ಯುದ್ಧಭೂಮಿಯ ಸವಾಲುಗಳನ್ನು ದಾಟಿ, ತದನಂತರ ನಾಗರಿಕ ಆಡಳಿತದ ಆಯಕಟ್ಟಿನ ಹುದ್ದೆಗಳನ್ನು ನಿಭಾಯಿಸಿದ ಹೋರಾಟಗಾರನೊಬ್ಬನ ಜೀವನ ದರ್ಶನವಾಗಿದೆ. ಜ್ಞಾನ, ವಯಸ್ಸು ಹಾಗೂ ಅನುಭವಗಳಲ್ಲಿ ಅತ್ಯಂತ ಎತ್ತರದಲ್ಲಿರುವ ಸದಾಶಿವ ಅವರ ಬದುಕಿನ ಕಥೆಯನ್ನು ಆಲಿಸುತ್ತಾ ಅವರ ಟೈಮ್‌ಲೈನ್ ಎದುರಿಗಿಟ್ಟುಕೊಂಡು ಕೂತಾಗ ನಾನೇ ಕ್ರಾಸ್ ಕಂಟ್ರಿ ಓಡಿದಂತೆ, ಸಿಯಾಚಿನ್‌ನ ಮೈಕೊರೆಯುವ ಚಳಿಯಲ್ಲಿ ನಿಂತಂತೆ ಭಾಸವಾಗುತ್ತಿತ್ತು ಎಂದರು.
ಕಾರ್ಯಕ್ರಮದಲ್ಲಿ ಲೇಖಕರ ಪತ್ನಿ ಶಿವಮ್ಮ ಸದಾಶಿವ್, ಸಂಬಂದಿಗಳಾದ ವೈ. ವಿಜಯಕುಮಾರ್, ವೈ. ಲಲಿತಾಕುಮಾರಿ, ವೈ. ಸುಗುಣಾ ಹಾಗೂ ವೈ. ಮುರಳಿಮೋಹನ್ ಇದ್ದರು.

ವೈ.ಜಿ. ಸದಾಶಿವ್ ಅವರ ಪರಿಚಯ:

ಭಾರತೀಯ ಸೈನ್ಯದ ಬಾಯ್ಸ್ ಕಂಪನಿ ಸೇರಿದ ಸದಾಶಿವ್ ಅವರು, ನಂತರ ಭಾರತೀಯ ಸೇನೆಯ ನಿಸ್ತಂತು ಸಿಗ್ನಲ್ಸ್ ವಿಭಾಗದಲ್ಲಿ ಸೇವೆ ಆರಂಭಿಸಿದರು. ಇವರು 1965ರ ಇಂಡೋ-ಪಾಕ್ ಯುದ್ಧ ಹಾಗೂ 1971ರ ಬಾಂಗ್ಲಾ ವಿಮೋಚನಾ ಯುದ್ಧಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಸಿಯಾಚಿನ್‌ನಂತಹ ಕಠಿಣ ಪ್ರದೇಶದಲ್ಲಿಯೂ ಅವರು ಸೇವೆ ಸಲ್ಲಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಸೇನೆಯಿಂದ ನಿವೃತ್ತರಾದ ಬಳಿಕ ಎನ್‌ಎಎಲ್ ನಲ್ಲಿ ಭದ್ರತಾ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ ಅವರು, ಛಲ ಬಿಡದೆ ವ್ಯಾಸಂಗ ಮಾಡಿ ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಬಳಿಕ ಹಾಸನ, ತುಮಕೂರು ಹಾಗೂ ಕಾರವಾರದಲ್ಲಿ ಉಪವಿಭಾಗಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಬಿಡಿಎ ಎನ್‌ಫೋರ್ಸ್ಮೆಂಟ್ ಅಧಿಕಾರಿಯಾಗಿ ಅಕ್ರಮ ಒತ್ತುವರಿಗಳನ್ನು ತೆರವುಗೊಳಿಸಿದ ದಿಟ್ಟತನ ಹಾಗೂ ಕಾರವಾರದಲ್ಲಿ ಪ್ರಪ್ರಥಮ ಬಾರಿಗೆ ಕರಾವಳಿ ಉತ್ಸವ ಆರಂಭಿಸಿದ ಶ್ರೇಯಸ್ಸು ಸದಾಶಿವ್ ಅವರಿಗೆ ಸಲ್ಲುತ್ತದೆ.