ಯಲ್ಲಾಪುರ ತಾಲೂಕಿನ ಕೋಳಿಕೇರಿ ಬಳಿ ರಾಷ್ಟ್ರೀಯ ಹೆದ್ದಾರಿ ಪಕ್ಕ ಆನೆ ಸಂಚರಿಸುತ್ತಿರುವುದು.
ಯಲ್ಲಾಪುರ: ಕಳೆದ ಎರಡು ತಿಂಗಳುಗಳಿಂದ ಹಳಿಯಾಳ ರಸ್ತೆಯಲ್ಲಿ ಕಣ್ಣಿಗೇರಿ ಸುತ್ತಮುತ್ತ ಸಂಚರಿಸುತ್ತಿದ್ದ ಒಂಟಿ ಸಲಗ, ರಾಜ್ಯ ಹೆದ್ದಾರಿಯನ್ನು ಬಿಟ್ಟು ರಾಷ್ಟ್ರೀಯ ಹೆದ್ದಾರಿಗೆ ಲಗ್ಗೆ ಇಟ್ಟಿದೆ. ಕೋಳಿಕೇರಿ ಬಳಿ ರಾಷ್ಟ್ರೀಯ ಹೆದ್ದಾರಿಯ ಅಕ್ಕಪಕ್ಕ ಸಂಚರಿಸುತ್ತ ವಾಹನ ಸವಾರರನ್ನು, ಸ್ಥಳೀಯರನ್ನು ಭಯಗೊಳಿಸುತ್ತಿದೆ.
ಕಳೆದ ಎರಡು ದಿನಗಳಿಂದ ರಾಷ್ಟ್ರೀಯ ಹೆದ್ದಾರಿ 52ರ ಮೇಲೆ ಕೋಳಿಕೇರಿ ಬಳಿಯಲ್ಲಿ ಒಂಟಿಸಲಗ ಸಂಚರಿಸುತ್ತಿದೆ. ವಾಹನ ಸವಾರರು, ಸ್ಥಳೀಯರು ಭಯದಿಂದಲೇ ಓಡಾಡುವ ಪರಿಸ್ಥಿತಿ ಬಂದಿದೆ. ಕೋಳಿಕೇರಿ ಸುತ್ತಮುತ್ತಲಿನ ರೈತರ ತೋಟಗಳು-ಗದ್ದೆಗಳಿಗೂ ಆನೆ ದಾಳಿ ಇಟ್ಟು, ಬೆಳೆ ನಾಶದ ಮುನ್ಸೂಚನೆ ನೀಡಿದೆ.
ಕಳೆದ ಎರಡು ತಿಂಗಳುಗಳಿಂದ ಕಣ್ಣಿಗೇರಿ ಸಮೀಪ ಈ ಆನೆ ಸಂಚರಿಸುತ್ತಿದೆ. ಸಂಜೆ ವೇಳೆ ಹಳಿಯಾಳ ರಸ್ತೆಯಲ್ಲಿ ನಿಂತು ವಾಹನಗಳನ್ನು ಅಡ್ಡಗಟ್ಟಿ, ಜನರನ್ನು ಭಯಗೊಳಿಸುವುದು ಆನೆಯ ನಿತ್ಯದ ಕಾಯಕವಾಗಿತ್ತು. ಆ ಭಾಗದ ರೈತರ ತೋಟಗಳಿಗೆ ನುಗ್ಗಿ ಬಾಳೆ, ಅಡಿಕೆ ಗಿಡಗಳನ್ನು ನಾಶ ಮಾಡಿದ ಘಟನೆಯೂ ನಡೆದಿತ್ತು.
ಇದೀಗ ಅಲ್ಲಿಂದ ಕೋಳಿಕೇರಿಯತ್ತ ಬರಲಾರಂಭಿಸಿದ್ದು, ಹೆದ್ದಾರಿಯಲ್ಲಿ ಸಂಚರಿಸುವವರು ಎಚ್ಚರಿಕೆಯಿಂದಲೇ ಸಾಗಬೇಕಾಗಿದೆ. ಆನೆ ಹಾವಳಿ ನಿಯಂತ್ರಿಸುವಂತೆ ಸ್ಥಳೀಯರು ಎರಡು ತಿಂಗಳಿಂದಲೂ ಅರಣ್ಯ ಇಲಾಖೆಯನ್ನು ಒತ್ತಾಯಿಸುತ್ತಿದ್ದಾರೆ. ಇನ್ನಾದರೂ ಕಾಡಾನೆ ಓಡಾಟ ತಡೆಯುವ ಬಗ್ಗೆ ಇಲಾಖೆ ಗಂಭೀರವಾಗಿ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.