ಶಿರಸಿ ತಾಲೂಕು ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಶಾಸಕ ಭೀಮಣ್ಣ ನಾಯ್ಕ ಭೂಮಿಪೂಜೆ ನೆರವೇರಿಸಿದರು. ಜಗದೀಶ ಗೌಡ, ಎಸ್.ಕೆ. ಭಾಗ್ವತ್ ಇತರರಿದ್ದರು.  
ಉತ್ತರ ಕನ್ನಡ

ಮತಕ್ಷೇತ್ರಕ್ಕೆ ಹೆಚ್ಚು ಅನುದಾನ ತರಲು ಪ್ರಯತ್ನ

ಶಿರಸಿ: ತಾಲೂಕಿನ ವಿವಿಧ ಗ್ರಾಪಂ ವ್ಯಾಪ್ತಿಯಲ್ಲಿ 2025-26ನೇ ಸಾಲಿನ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮಗಳ ಯೋಜನೆಯಡಿ ಮಂಜೂರಾದ 4.50 ಕೋಟಿ ರೂ. ವೆಚ್ಚದ 19 ರಸ್ತೆ ಸುಧಾರಣೆ ಕಾಮಗಾರಿಗಳಿಗೆ ಶಾಸಕ ಭೀಮಣ್ಣ ನಾಯ್ಕ ಗುರುವಾರ ಭೂಮಿಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಯೋಜನೆಯಡಿ ನೂರಾರು ಕೋಟಿ ರೂ. ವೆಚ್ಚದ ಕಾಮಗಾರಿ ಆರಂಭಿಸಲಾಗಿದೆ. ಲೋಕೋಪಯೋಗಿ ಇಲಾಖೆಯಿಂದ ಕಾಲಸುಂಕ, ರಸ್ತೆಗೆ 30 ಕೋಟಿ ರೂ. ಮಂಜೂರು ಆಗಿದ್ದು, ಕಟ್ಟಡ ಹಾಗೂ ಇತರೆ ಕಾರ್ಮಿಕ ಮಕ್ಕಳ ವಸತಿಯುತ ಶಿಕ್ಷಣಕ್ಕಾಗಿ ಶ್ರಮಿಕ ಶಾಲೆಯನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಮಂಜೂರು ಮಾಡಿದ್ದು, ಈಗಾಗಲೇ ಜಾಗ ಗುರುತಿಸಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 16 ಕೋಟಿ ರೂ. ಪ್ರಕೃತಿ ವಿಕೋಪ ನಿರ್ವಹಣೆಯಡಿ ಅನುದಾನ ಬಂದಿದೆ. ಇನ್ನೂ ಹೆಚ್ಚಿನ ಅನುದಾನವನ್ನು ಸರ್ಕಾರದಿಂದ ಬಿಡುಗಡೆಗೊಳಿಸಿ, ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.
ಸ್ವರ್ಣವಲ್ಲೀ ಶ್ರೀಗಳ ನೇತೃತ್ವದಲ್ಲಿ ಶಿರಸಿ-ಸಿದ್ದಾಪುರ ವ್ಯಾಪ್ತಿಯ ಅನೇಕ ಕಡೆಗಳಲ್ಲಿ ನದಿ ತಿರುವು ಯೋಜನೆ ವಿರೋಧಿಸಿ, ಜನಜಾಗೃತಿ ಸಭೆಗಳನ್ನು ನಡೆಸಲಾಗಿದೆ. ನಗರದ ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಮೈದಾನದಲ್ಲಿ ಯೋಜನೆಯನ್ನು ಪಕ್ಷಾತೀತವಾಗಿ ವಿರೋಧಿಸಲಾಗಿದೆ. ಅಲ್ಲದೆ, ವಿಧಾನಸಭೆ ಅಧಿವೇಶನದಲ್ಲಿಯೂ ವಿರೋಧಿಸಿದ್ದೇನೆ. ಜಿಲ್ಲೆಯು ಕೈಗಾ, ಸೀಬರ್ಡ್, ರಾಷ್ಟ್ರೀಯ ಹುಲಿ ಸಂರಕ್ಷಣಾ ಮೀಸಲು ಅರಣ್ಯ, ಅಣೆಕಟ್ಟು ಸೇರಿದಂತೆ ಅನೇಕ ರಾಜ್ಯ ಹಾಗೂ ರಾಷ್ಟ್ರೀಯ ಯೋಜನೆಗಳಿಗೆ ಭೂಮಿ ತ್ಯಾಗ ಮಾಡಿದ್ದು, ಉತ್ತರ ಕನ್ನಡ ಶೇ. 18ರಷ್ಟು ಮಾತ್ರ ಕಂದಾಯ ಭೂಮಿ ಹೊಂದಿದೆ. ವಿವಿಧ ಯೋಜನೆಗೆ ಜಾಗ ಬಿಟ್ಟುಕೊಟ್ಟವರಿಗೆ ಇನ್ನೂ ಸಮರ್ಪಕ ಪರಿಹಾರ ದೊರೆತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಬೇಡ್ತಿಯಲ್ಲಿ ನೀರಿಲ್ಲ. ಅಘನಾಶಿನಿ ಬೇಸಿಗೆಯಲ್ಲಿ ಸಣ್ಣ ಝರಿ ಹೊಂದಿರುವ ನದಿ ತಿರುವು ಮಾಡಿದರೆ ಜಿಲ್ಲೆಯ ಜನರು ಅತಂತ್ರರಾಗುತ್ತಾರೆ. ಅಂಕೋಲಾದಲ್ಲಿ ಭೂ ಕುಸಿತ ಉಂಟಾಗಿ ಹಲವಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ ಅನೇಕ ಕಡೆಯಲ್ಲಿ ಭೂಕುಸಿತ ಉಂಟಾಗಿದೆ. ಆದ್ದರಿಂದ ಜಿಲ್ಲೆಯಲ್ಲಿ ಬೃಹತ್ ಯೋಜನೆಗಳು ಬೇಡ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬಳಿ ನಿಯೋಗ ತೆರಳಿ ಸರ್ಕಾರವನ್ನು ಆಗ್ರಹಪೂರ್ವಕವಾಗಿ ವಿನಂತಿಸಲಾಗಿದೆ ಎಂದರು.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕ ಭೀಮಣ್ಣ, ನಗರ ಸ್ಥಳೀಯ ಸಂಸ್ಥೆಗಳು, ಗ್ರಾಪಂ, ತಾಪಂ ಹಾಗೂ ಜಿಪಂ ಚುನಾವಣೆ ದಿನಾಂಕವನ್ನು ಸರ್ಕಾರ ಹಾಗೂ ಚುನಾವಣಾ ಆಯೋಗ ನಿರ್ಧರಿಸಲಿವೆ. ಅಭಿವೃದ್ಧಿಯ ಜತೆ ನಾವೆಲ್ಲರೂ ಸೇರಿ ಪಕ್ಷ ಸಂಘಟನೆಯ ಜವಾಬ್ದಾರಿ ನಿರ್ವಹಿಸುತ್ತಿದ್ದೇವೆ. ಈ ಎಲ್ಲ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ಗೆಲುವು ಸಾಧಿಸಲು ಒಗ್ಗಟ್ಟಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಪ್ರತಿಕ್ರಿಯಿಸಿದರು.

ಜಿಲ್ಲೆಯ ಜೀವ ನದಿಗಳ ಜೋಡಣೆಯ ಅವೈಜ್ಞಾನಿಕ ಡಿಪಿಆರ್ ರದ್ದುಪಡಿಸಿ, ನದಿ ತಿರುವು ಯೋಜನೆ ಕೈಬಿಡಬೇಕು ಎಂದು ಸರ್ಕಾರವನ್ನು ವಿನಂತಿಸಲಾಗಿದೆ. ಯೋಜನೆ ಯಾವುದೇ ಕಾರಣಕ್ಕೂ ಅನುಷ್ಠಾನಗೊಳ್ಳುವುದಿಲ್ಲ ಎಂಬ ವಿಶ್ವಾಸವಿದೆ.