ವಶಕ್ಕೆ ಪಡೆದ ಇ ಸಿಗರೇಟ್‌ಗಳು  
ಉತ್ತರ ಕನ್ನಡ

ಭಟ್ಕಳದಲ್ಲಿ 1.38 ಲಕ್ಷ ಮೌಲ್ಯದ ಇ-ಸಿಗರೇಟ್‌ ವಶ

ಭಟ್ಕಳ:ನಿಷೇಧಿತ ಎಲೆಕ್ಟ್ರಾನಿಕ್ ಸಿಗರೇಟ್‌ಗಳು ಹಾಗೂ ನಿಕೋಟಿನ್ ಲಿಕ್ವಿಡ್ ವೇಪ್ಸ್ ಮಾರಾಟದ ವಿರುದ್ಧ ಭಟ್ಕಳ ಶಹರ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಹೂವಿನ ಚೌಕ್ ಸಮೀಪದ ದುಬೈ ಮಾರ್ಕೆಟ್‌ನಲ್ಲಿ ದಾಳಿ ನಡೆಸಿದ ಪೊಲೀಸರು 1.38 ಲಕ್ಷ ಮೌಲ್ಯದ ಇ-ಸಿಗರೇಟ್ ಹಾಗೂ ವೇಪ್ಸ್ಗಳನ್ನು ವಶಪಡಿಸಿಕೊಂಡು ಮಾರಾಟಗಾರನನ್ನು ಬಂಧಿಸಿದ್ದಾರೆ.
ಕಾರಗದ್ದೆ 2ನೇ ಕ್ರಾಸ್, ಭಟ್ಕಳದ ನಿವಾಸಿ ಸಿದ್ದಿಕ್ ಅಬ್ದುಲ್ ರೆಹಮಾನ್ ಮಸ್ತಾನ್ ಬಂಧಿತ ಆರೋಪಿ. ಈತನು ಯಾವುದೇ ಪರವಾನಿಗೆ ಇಲ್ಲದೆ ನಿಷೇಧಿತ ವಸ್ತುಗಳನ್ನು ಅಂಗಡಿಯಲ್ಲಿ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ 76,000 ಮೌಲ್ಯದ 38 ಇ-ಸಿಗರೇಟ್‌ಗಳು ಹಾಗೂ 62,500 ಮೌಲ್ಯದ 125 ನಿಕೋಟಿನ್ ಲಿಕ್ವಿಡ್ ರಿಫಿಲ್‌ಗಳು (ವೇಪ್ಸ್) ವಶಪಡಿಸಿಕೊಳ್ಳಲಾಗಿದೆ. ಈ ಸಂಬAಧ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿವೈಎಸ್ಪಿ ಮಹೇಶ ಎಂ.ಕೆ ಅವರ ಮಾರ್ಗದರ್ಶನದಲ್ಲಿ, ಸಿಪಿಐ ದಿವಾಕರ ಪಿ.ಎಂ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಎಸೈ ನವೀನ ನಾಯ್ಕ ಸೇರಿದಂತೆ ಸಿಬ್ಬಂದಿ ಉದಯ ನಾಯ್ಕ, ದೀಪಕ ನಾಯ್ಕ, ಮಹಾಂತೇಶ ಹಿರೇಮಠ, ಕಾಶಿನಾಥ ಕೊಟಗೊಣಸಿ, ಸುರೇಶ ಮರಾಠಿ, ಜಗದೀಶ ನಾಯ್ಕ ಹಾಗೂ ರೇವಣಸಿದ್ದಪ್ಪ ಮಾಗಿ ಪಾಲ್ಗೊಂಡಿದ್ದರು. ನಿಷೇಧಿತ ಇ-ಸಿಗರೇಟ್ ಹಾಗೂ ನಿಕೋಟಿನ್ ಉತ್ಪನ್ನಗಳ ಸಂಗ್ರಹ ಮಾರಾಟದ ವಿರುದ್ಧ ಮುಂದಿನ ದಿನಗಳಲ್ಲೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.