ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ಮತ್ತು ಸಿದ್ದಾಪುರ ಸಿಪಿಐ ಜೆ.ಬಿ. ಸೀತಾರಾಮ ಅವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿ ಸಿದ್ದಾಪುರದಲ್ಲಿ ತಹಸೀಲ್ದಾರ್ ರಮೇಶ ಹೆಗಡೆ ಅವರ ಮೂಲಕ ಮುಖ್ಯಮಂತ್ರಿ, ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು. ವಸಂತ ನಾಯ್ಕ, ಸುಮಂಗಲಾ ನಾಯ್ಕ, ಬೋಜರಾಜ ಇತರರಿದ್ದರು.
- ವಸಂತ ನಾಯ್ಕ ಮನಮನೆ ನೇತೃತ್ವದಲ್ಲಿ ಮನವಿ
- ಸಿದ್ದಾಪುರ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನಾ ಸಭೆ
ಸಿದ್ದಾಪುರ: ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ ಮತ್ತು ಸಿದ್ದಾಪುರ ಸಿಪಿಐ ಜೆ.ಬಿ. ಸೀತಾರಾಮ ಅವರನ್ನು ಅಮಾನತು ಮಾಡಿ ಜಿಲ್ಲೆಯಿಂದ 15 ದಿನದೊಳಗೆ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿ ಹಾಗೂ ರಾಜ್ಯ ಗೃಹ ಸಚಿವರಿಗೆ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮನಮನೆ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಶುಕ್ರವಾರ ತಹಸೀಲ್ದಾರ್ ರಮೇಶ ಹೆಗಡೆ ಅವರ ಮನವಿ ಸಲ್ಲಿಸಿದರು.
ಪಟ್ಟಣದ ರಾಮಕೃಷ್ಣ ಹೆಗಡೆ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಹೊರಟು ತಹಸೀಲ್ದಾರ್ ಕಚೇರಿ ಎದುರು ಸಭೆ ನಡೆಸಿದರು.
ವಸಂತ ನಾಯ್ಕ ಮನಮನೆ ಮಾತನಾಡಿ, ಇಂದಿನ ಪ್ರತಿಭಟನೆ ಪೊಲೀಸ್ ಇಲಾಖೆ ವಿರುದ್ಧ ಅಲ್ಲ. ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ ಹಾಗೂ ಸಿದ್ದಾಪುರ ಸಿಪಿಐ ಜೆ.ಬಿ. ಸೀತಾರಾಮ ಅವರ ವಿರುದ್ಧವಾಗಿದೆ. ತಾಲೂಕಿನಲ್ಲಿ ಒಸಿ, ಮಟ್ಕಾ, ಅಕ್ರಮ ಸಾರಾಯಿ ಹಾಗೂ ಗಾಂಜಾ ಮಾರಾಟ ನಿರಂತರವಾಗಿ ನಡೆಯುತ್ತಿದೆ. ಕಲ್ಲು ಲಾರಿ, ಮರಳು ಲಾರಿಗಳವರಿಂದ ಹಣ ಸಂಗ್ರಹಿಸಿ ಲೂಟಿ ಮಾಡುತ್ತಿದ್ದಾರೆ. ಬೇಲಿಯೇ ಎದ್ದು ಹೊಲಮೇದಂತಾಗುತ್ತಿದೆ. ತಾಲೂಕಿನಲ್ಲಿ ನಡೆದ ಕೊಲೆ, ಸುಲಿಗೆ ಮತ್ತಿತರ ಪ್ರಕರಣಗಳನ್ನು ಸರಿಯಾಗಿ ಇತ್ಯರ್ಥಪಡಿಸದೇ ಕೇವಲ ಹಣ ಮಾಡುವುದರಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದರು.
ಡಿವೈಎಸ್ಪಿ ಅವರು ಎಲ್ಲ ವಿಷಯದಲ್ಲಿಯೂ ನನ್ನನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಇದರಿಂದ ನನಗೆ ಹಾಗೂ ನಮ್ಮ ಕುಟುಂಬಕ್ಕೆ ಮಾನಸಿಕವಾಗಿ ಹಿಂಸೆ ಅಗುತ್ತಿದೆ. ನನಗೇನಾದರೂ ಆದರೆ, ಡಿವೈಎಸ್ಪಿಯವರೇ ನೇರ ಕಾರಣರಾಗುತ್ತಾರೆ ಎಂದರು. ಜಿಪಂ ಮಾಜಿ ಸದಸ್ಯೆ ಸುಮಂಗಲಾ ನಾಯ್ಕ, ಸಾಗರದ ವಕೀಲ ಭೋಜರಾಜ, ಪ್ರಶಾಂತ ನಾಯ್ಕ, ಅಣ್ಣಪ್ಪ ನಾಯ್ಕ ಇತರರು ಮಾತನಾಡಿ, ಡಿವೈಎಸ್ಪಿ ಗೀತಾ ಪಾಟೀಲ ಹಾಗೂ ಸಿಪಿಐ ಜೆ.ಬಿ. ಸೀತಾರಾಮ ಕಾರ್ಯವೈಖರಿ ಕುರಿತು ಆಕ್ಷೇಪ ವ್ಯಕ್ತಪಡಿಸಿದರು.
ತಹಸೀಲ್ದಾರ್ ರಮೇಶ ಹೆಗಡೆ ಅವರ ಮೂಲಕ ಮುಖ್ಯಮಂತ್ರಿ, ಗೃಹ ಸಚಿವರು, ಪೊಲೀಸ್ ಮಹಾ ನಿರೀಕ್ಷಕರು ಪಶ್ಚಿಮವಲಯ, ಜಿಲ್ಲಾಧಿಕಾರಿ ಹಾಗೂ ಕಾರವಾರ ಎಸ್ಪಿ ಅವರಿಗೆ ಮನವಿ ಸಲ್ಲಿಸಲಾಯಿತು. ಕಾಂಗ್ರೆಸ್ ಕಾರ್ಯಕರ್ತರು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳಿದ್ದರು.