ಸಿದ್ದಿ ಮಕ್ಕಳಿಗೆ ರಂಗ ತರಬೇತಿ
- ಸಿದ್ದಿ ಟ್ರಸ್ಟ್‌ನಿಂದ ವಿಶಿಷ್ಟ ಕಾರ್ಯ
- ಕೋಂಕಣಿ ಸಾಹಿತ್ಯ ಅಕಾಡೆಮಿ ನೆರವು
- ಸಿದ್ದಿ ಮಕ್ಕಳಿಗೆ ರಂಗ ಕಲೆಯ ಪಾಠ
ಕಾರವಾರ: ಸಿದ್ದಿ ಹೆಸರು ಕೇಳಿರಬಹುದು. ಇವರು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಹಳಿಯಾಳ, ಅಂಕೋಲಾ,ಕಾರವಾರದ ಕಾಡುಗಳಲ್ಲಿ ವಾಸಿಸುವ ಬುಡಕಟ್ಟು ಜನಾಂಗ. ಕಪ್ಪು ಬಣ್ಣ, ಗುಂಗುರು ಕೂದಲು, ಕಟ್ಟುಮಸ್ತಾದ ದೇಹ. ಆಫ್ರಿಕಾದ ನಿಗ್ರೋಗಳನ್ನು ಹೋಲುವ ಜನಾಂಗ.
ಪೋರ್ಚುಗೀಸರ ಕಾಲದಲ್ಲಿ ಅಲ್ಲಿಂದಲೇ ವಲಸೆ ಬಂದವರು ಎಂದು ಇತಿಹಾಸ ಹೇಳುತ್ತದೆ. ಆದರೆ, ಕಾಲಾಂತರದಲ್ಲಿ ಕಾಡು ಸೇರಿದ ಇವರು ನಾಡಿಗೆ ಬರಲು ಹಿಂಜರಿಯುತ್ತಾರೆ. ಕ್ರೀಡೆ, ಕಲೆಯಲ್ಲಿ ಸಾಕಷ್ಟು ಪ್ರತಿಭೆಗಳಿದ್ದರೂ ಅವರು ಹೊರ ಜಗತ್ತಿಗೆ ಇನ್ನೂ ಅಪರಿಚಿತರೆ.
ಶಾಂತಾರಾಮ ಸಿದ್ದಿ ಅವರು ಎಂಎಲ್‌ಸಿ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿದ್ದಿ ಸಮುದಾಯದ ಪ್ರಶಾಂತ ಸಿದ್ದಿ, ಡಾ.ಗೀತಾ ಸಿದ್ದಿ ಮುಂತಾದ ಕೆಲವರು ಕನ್ನಡ ಸಿನಿಮಾ ರಂಗದಲ್ಲಿ ಹೆಸರು ಮಾಡಿದ್ದಾರೆ. ಕೆಲವು ಯುವಕರು ರಿಯಾಲಿಟಿ ಶೋಗಳಲ್ಲಿ, ಡಿಜಿಟಲ್ ಕಂಟೆAಟ್ ಕ್ರಿಯೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಂಗ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ಹಲವರು ಮಂಚಿಕೇರಿ ಭಾಗದಲ್ಲಿದ್ದಾರೆ.ಆದರೆ, ಇನ್ನೂ ಹಲವು ಕುಟುಂಬಗಳು ಕಾಡಿನ ನಡುವೆಯೇ ಎಲೆಮರೆಯಂತೆ ಉಳಿದಿವೆ. ಅಂಥ ಮಕ್ಕಳಿಗೆ ಕಲೆಯ ಪಾಠ ಹೇಳುವ ಮೂಲಕ ಮುಖ್ಯ ವಾಹಿನಿಗೆ ತರುವ ಕೆಲಸವನ್ನು ಸಿದ್ದಿ ಟ್ರಸ್ಟ್ ಹಲವು ವರ್ಷಗಳಿಂದ ನಡೆಸಿಕೊಂಡು ಬಂದಿದೆ.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಸಹಯೋಗ ಪಡೆದು ಸಿದ್ದಿ ಟ್ರಸ್ಟ್ ಯಲ್ಲಾಪುರ ತಾಲೂಕಿನ ಮಂಚಿಕೇರಿಯ ದೇವರ ಕಲ್ಲಳ್ಳಿಯಲ್ಲಿ ಸಿದ್ದಿ ಮಕ್ಕಳಿಗಾಗಿ `ತೂಗು ತೊಟ್ಟಿಲು' ಎಂಬ ಬೇಸಿಗೆ ಶಿಬಿರವನ್ನು ನಡೆಸಿತು. ಖ್ಯಾತ ಹಾಡುಗಾರ್ತಿ ಡಾ.ಗೀತಾ ಸಿದ್ದಿ ಅವರ ನಿರ್ದೇಶನದಲ್ಲಿ ಸಿದ್ದಿ ಸಮುದಾಯದ 30 ರಷ್ಟು ಮಕ್ಳಳು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಮಕ್ಕಳಿಗೆ ನಟನೆ, ಪ್ರಸಾದನ, ಗಾಯನ ಮುಂತಾದ ರಂಗ ಕಲೆಯನ್ನು ಹೇಳಿಕೊಡಲಾಯಿತು.
ಸಿದ್ದಿ ಮಕ್ಕಳಿಗೆ ರಂಗ ತರಬೇತಿ
ಕಾಡಿನ ಪರಿಸರದಲ್ಲಿಯೇ ಬಯಲು ರಂಗ ಮಂದಿರವೊಂದನ್ನು ನಿರ್ಮಾಣ ಮಾಡಿಕೊಂಡು, ಕಾಡಿನಲ್ಲಿ ಸಿಗುವ ನೈಸರ್ಗಿಕ ಬಣ್ಣ, ಪರಿಕರಗಳನ್ನು ಬಳಸಿಕೊಂಡು ಕಲೆಯನ್ನು ಬಿಂಬಿಸುವ ತರಬೇತಿ ನೀಡಲಾಯಿತು. 15 ದಿನಗಳ ಶಿಬಿರದ ನಂತರ ಏ.28 ರಂದು ಸಮಾರೋಪ ಸಮಾರಂಭ ನಡೆಯಿತು. ಸಿದ್ದಿ ಟ್ರಸ್ಟ್ನ ಡಾ.ಗೀತಾ ಸಿದ್ದಿ ಅವರು ನಿರ್ದೇಶಿಸಿದ `ಸವಣ್ಯಾಚಿ ಗಾಣಿ' ಎಂಬ ಕೊಂಕಣಿ ನಾಟಕವನ್ನು ಮಕ್ಕಳು ಮನೋಜ್ಞವಾಗಿ ಪ್ರದರ್ಶಿಸಿದರು. ಕೊಟಗಾನಹಳ್ಳಿ ರಾಮಯ್ಯ ಅವರ ಹಕ್ಕಿ ಹಾಡು ನಾಟಕದ ಕೊಂಕಣಿ ರೂಪಾಂತರ ಇದಾಗಿದೆ. ಇದಲ್ಲದೇ ಸಿದ್ದಿಗಳ ವಿಶೇಷ ಡುಮಾಮಿ ನೃತ್ಯ, ಪುಗಡಿ ನೃತ್ಯ ಪ್ರದರ್ಶನವೂ ನಡೆಯಿತು.
ಮಂಚಿಕೇರಿ ರಂಗ ಸಮೂಹದ ಅಧ್ಯಕ್ಷ ಆರ್.ಎನ್.ಭಟ್ ಧುಂಡಿ ಅವರು ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಿದರು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟಾ÷್ಯನಿ ಅಲ್ವಾರೀಸ್ ಅವರು ಅಧ್ಯಕ್ಷತೆ ವಹಿಸಿದ್ದರು. ಲೇಖಕ ವಾಸುದೇವ ಶಾನಭಾಗ, ಸಿದ್ದಿ ಟ್ರಸ್ಟ್ ಅಧ್ಯಕ್ಷ ಗಿರೀಶ ಪರಶುರಾಮ ಸಿದ್ದಿ, ಜಿಪಂ ಮಾಜಿ ಸದಸ್ಯ ರಾಘವೇಂದ್ರ ಭಟ್ ಹಾಸಣಗಿ, ರಾಜರಾಜೇಶ್ವರಿ ವಿದ್ಯಾ ಸಂಸ್ಥೆಯ ರಘುಪ್ರಸಾದ ಭಟ್ ಹೊನ್ನಳ್ಳಿ, ಕೊಂಕಣಿ ಅಕಾಡೆಮಿ ಸದಸ್ಯರಾದ ಸುನೀಲ ಸಿದ್ದಿ, ನವೀನ ಲೋಬೋ ಉಪಸ್ಥಿತರಿದ್ದರು. ಪನ್ನಿಕಾ ಸಿದ್ದಿ ಕಾರ್ಯಕ್ರಮ ನಿರೂಪಿಸಿದರು. ದಿವ್ಯಾ ಸಿದ್ದಿ ಸ್ವಾಗತಿಸಿದರು. ಚಲನಾ ಸಿದ್ದಿ ವಂದಿಸಿದರು. ಖ್ಯಾತ ಡುಮಾಮಿ ನೃತ್ಯ ಕಲಾವಿದೆ ಜೂಲಿಯಾನಾ ಸಿದ್ದಿ ಅವರನ್ನು ಸನ್ಮಾನಿಸಲಾಯಿತು.