ಶಿರಸಿಯ ಬೆಟ್ಟಕೊಪ್ಪ ನಮ್ಮನೆ ಹಬ್ಬದಲ್ಲಿ ರಂಗ ಸಾಧಕಿ ಬಿ.ಜಯಶ್ರೀ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಲಾವಿದ ದೊಡ್ಡಣ್ಣ, ಪತ್ರಕರ್ತ ರವೀಂದ್ರ ಭಟ್,ಗಾಯಿತ್ರಿ ರಾಘವೇಂದ್ರ ಇತರರಿದ್ದರು.
ಶಿರಸಿ: ಶುದ್ಧ ಪರಿಸರ ಹೊಂದಿರುವ ಹಳ್ಳಿಗಳು, ಇಲ್ಲಿ ನಡೆಯುವ ಸಾಂಸ್ಕೃತಿಕ ಹಬ್ಬಗಳು ಸ್ವರ್ಗಕ್ಕೆ ಸಮಾನವಾದ ವಾತಾವರಣ ಸೃಷ್ಟಿಸುತ್ತವೆ ಎಂದು ಚಿತ್ರನಟ ಎಸ್. ದೊಡ್ಡಣ್ಣ ಹೇಳಿದರು.
ತಾಲೂಕಿನ ಬೆಟ್ಟಕೊಪ್ಪದ ನಮ್ಮನೆ ವೇದಿಕೆಯಲ್ಲಿ ವಿಶ್ವಶಾಂತಿ ಸೇವಾ ಟ್ರಸ್ಟ್ ಕರ್ನಾಟಕ ಆಯೋಜಿಸಿದ್ದ ವಿಶ್ವಶಾಂತಿ ಸರಣಿಯ 11ನೇ ಯಕ್ಷನೃತ್ಯ ರೂಪಕ ವಂದೇ ಗೋವಿಂದಂ ಲೋಕಾರ್ಪಣೆ, ನಮ್ಮನೆ ಪ್ರಶಸ್ತಿ, ಪುರಸ್ಕಾರ ಪ್ರದಾನ ಕಾರ್ಯಕ್ರಮ ಒಳಗೊಂಡ 14ನೇ ವರ್ಷದ ನಮ್ಮನೆ ಉದ್ಘಾಟಿಸಿ ಅವರು ಮಾತನಾಡಿದರು.
ಬೆಂಗಳೂರಿನಂತಹ ಮಹಾನಗರಗಳು ಸಂಚಾರ ದಟ್ಟಣೆ, ವಾಯಮಾಲಿನ್ಯದ ಕಾರಣಗಳಿಂದ ನರಕವಾಗುತ್ತಿವೆ. ಹಳ್ಳಿಯ ವಾತಾವರಣದಲ್ಲೇ ನೆಮ್ಮದಿ ಲಭ್ಯ ಎಂದರು.
ಜಗತ್ತಿನ ಮೂರೇ ಮೂರು ಸರ್ವಶ್ರೇಷ್ಠ ಭಾಷೆಗಳಲ್ಲಿ ಕನ್ನಡವೂ ಒಂದು. ಮಾತನಾಡಿದಂತೆ ಬರೆಯುವ ಲಿಪಿಯುಳ್ಳ, ಬರೆದಿದ್ದನ್ನು ಯಥಾವತ್ತಾಗಿ ಮಾತನಾಡುವ ಶಕ್ತಿಯುಳ್ಳ, ಸಂಧಿ, ಸಮಾಸ, ವ್ಯಾಕರಣ, ಅಲ್ಪಪ್ರಾಣ, ಮಹಾಪ್ರಾಣ ಇರುವ ಶ್ರೀಮಂತ ಭಾಷೆ ಕನ್ನಡ. ಹೀಗಿರುವಾಗ ಇಂಗ್ಲಿಷ ಹಾವಳಿಯಲ್ಲಿ ನಮ್ಮ ಮಾತಿನಲ್ಲಿ ಕನ್ನಡ ಶಬ್ಧಗಳನ್ನು ಹುಡುಕಾಡುವ ಸಂದರ್ಭ ಬರಬಾರದು ಎಂದರು.
ಪ್ರಸಿದ್ಧ ರಂಗಭೂಮಿ ಕಲಾವಿದೆ, ಗಾಯಕಿ ಬಿ .ಜಯಶ್ರೀ ಮಾತನಾಡಿ, ಹಳ್ಳಿಗರಿಗೆ ಟಿವಿನೇ ಬೇಕು ಅಂತಿಲ್ಲ. ಇಂತಹ ಸಂಸ್ಕೃತಿಯುಕ್ತ ಕಾರ್ಯಕ್ರಮ ಸಂಘಟಿಸಿದರೆ ಮನಃಸ್ಪೂರ್ತಿಯಾಗಿ ಪಾಲ್ಗೊಳ್ಳುತ್ತಾರೆ ಎಂದರು.
ನಂದು ಕೆಮಿಕಲ್ಸ್ ಸಂಸ್ಥಾಪಕ ರಾಮನಂದನ ಹೆಗಡೆ ಮಾತನಾಡಿ, ಯಾವುದೇ ಉದ್ಯಮ ಆರಂಭಿಸಿದಾಗ ಸೋಲು ಬಂದರೆ ಧೈರ್ಯಗೆಡಬಾರದು. ಕ್ಷಮತೆ ಹೆಚ್ಚಿಸಿಕೊಳ್ಳಬೇಕು. ಮೌಲ್ಯ ಆಧಾರಿತವಾಗಿ ಉದ್ಯಮ ನಡೆಸಿದರೆ ಬೆಳವಣಿಗೆ ಹೊಂದಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪತ್ರಕರ್ತ ರವೀಂದ್ರ ಭಟ್ ವಹಿಸಿದ್ದರು. ಕಿಶೋರ ಪುರಸ್ಕಾರ ಪಡೆದ ತೇಜಸ್ವಿ ಗಾಂವಕರ್ ಮಾತನಾಡಿ, ನಮ್ಮನೆ ವೇದಿಕೆ ಅಕ್ಕರೆ, ಅಕ್ಷರ, ಆವಿಷ್ಕಾರದ ಕೇಂದ್ರ. ನಮ್ಮನೆ ಹಬ್ಬ ನನಗೆ ಸ್ಪೂರ್ತಿ, ಪ್ರೇರಣೆಯಾಗಿದೆ ಎಂದರು.
ನಾವು ಮೊಬೈಲ್ ಎಂಬ ಚಕ್ರವ್ಯೆಹದಲ್ಲಿ ಸಿಲುಕಿ ಹಾಕಿಕೊಂಡಿದ್ದೇವೆ. ಅದಿಲ್ಲದೇ ಒಂದು ಕ್ಷಣವೂ ಬದುಕಿಲ್ಲ ಎನ್ನುವ ಸ್ಥಿತಿಗೆ ತಲುಪಿದ್ದೇವೆ. ಅಕ್ಕಪಕ್ಕ ಕುಳಿತರೂ ಮಾತಿಲ್ಲ ಕಥೆಯಿಲ್ಲ ಎನ್ನುವಂತಾಗಿದೆ. ಮೊಬೈಲ್‌ನಿಂದ ದೂರವಾದರೆ ನಮ್ಮ ಇಡೀ ಸಮಾಜ, ದೇಶ ಬಹುತೇಕ ಸರಿ ಹೋಗುತ್ತದೆ.
ಪುರಸ್ಕಾರ ಪ್ರದಾನ
ಹಬ್ಬದಲ್ಲಿ ವಿಶೇಷವಾಗಿ ನಮ್ಮನೆ ಪ್ರಶಸ್ತಿ, ಪುರಸ್ಕಾರ ಪ್ರದಾನ ಆಪ್ತವಾಗಿ ಮೂಡಿಬಂತು. ರಂಗಭೂಮಿ ಕಲಾವಿದೆ ಬಿ.ಜಯಶ್ರೀ, ಹುಬ್ಬಳ್ಳಿಯ ನಂದು ಕೆಮಿಕಲ್ಸ್ ಸಂಸ್ಥಾಪಕ ರಾಮನಂದನ ಹೆಗಡೆ ಅವರಿಗೆ ನಮ್ಮನೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಲಾವಿದ ತೇಜಸ್ವಿ ಗಾಂವಕರಗೆ ನಮ್ಮನೆ ಕಿಶೋರ ಪುರಸ್ಕಾರ ನೀಡಲಾಯಿತು.