ಗೋಕರ್ಣ ಪೊಲೀಸರಿಂದ ಶ್ವಾನದಳದ ಮೂಲಕ ಮಾದಕ ವಸ್ತು ವಿರೋಧಿ ಕಾರ್ಯಾಚರಣೆ ನಡೆಯಿತು.
- ಮಾದಕ ವಸ್ತು ವಿರೋಧಿ ಕಾರ್ಯಾಚರಣೆ
- ಆರೋಪಿತರು, ಸಂಶಯಿತರು ಟಾರ್ಗೆಟ್
ಗೋಕರ್ಣ: ಎಸ್ಪಿಯವರ ಮಾರ್ಗದರ್ಶನದಲ್ಲಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ಗೋಕರ್ಣದ ಮುಖ್ಯ ಬೀಚ್‌ಗಳು, ರೆಸಾರ್ಟ್ ಮತ್ತು ಸಂಶಯಿತ ಸ್ಥಳಗಳಲ್ಲಿ ಮಂಗಳವಾರ ಮಾದಕ ವಸ್ತು ವಿರೋಧಿ ವಿಶೇಷ ಕಾರ್ಯಾಚರಣೆ ನಡೆಸಲಾಯಿತು.
ಬೆಳಗ್ಗೆಯಿಂದ ರಾತ್ರಿಯವರೆಗೂ ನಡೆದ ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಜಿಲ್ಲಾ ಕೇಂದ್ರದಿಂದ ಕರೆಸಲಾದ ಮಾದಕ ವಸ್ತು ಪತ್ತೆಯಲ್ಲಿ ವಿಶೇಷ ತರಬೇತಿ ಪಡೆದ ಸೂಪಾ ಎಂಬ ಶ್ವಾನ ಕೂಡ ಪಾಲ್ಗೊಂಡಿತು.
ಕಾರ್ಯಾಚರಣೆಯ ಮೊದಲ ಹಂತದಲ್ಲಿ ಈಗಾಗಲೇ ಮಾದಕ ವಸ್ತು ಪ್ರಕರಣಗಳಲ್ಲಿ ಆರೋಪಿಗಳಾದವರು ಮತ್ತು ಕೆಲವು ಸಂಶಯಾಸ್ಪದ ವ್ಯಕ್ತಿಗಳ ಮನೆ ಮತ್ತು ಕಾರ್ಯಸ್ಥಾನಗಳನ್ನು ಗುರಿಯಾಗಿಸಲಾಯಿತು. ಇಂತಹ ಜಾಗಗಳ ಜತೆಗೆ ಆಯ್ದ ಬೀಚ್ ರೆಸಾರ್ಟ್, ರೆಸ್ಟೋರೆಂಟ್, ಮನೆ ಮತ್ತು ವಸತಿ ವ್ಯವಸ್ಥೆಗಳಲ್ಲಿ ಅತ್ಯಂತ ಸೂಕ್ಷ್ಮವಾಗಿ ತಪಾಸಣೆ ಮಾಡಲಾಯಿತು.
ಗಂಗೆಕೊಳ್ಳ-ದುಬ್ಬನಸಶಿ ಬೀಚ್‌ನಿಂದ ಪ್ರಾರಂಭವಾದ ಶ್ವಾನದಳ ಪರಿಶೀಲನೆ ಇಲ್ಲಿನ ರುದ್ರಪಾದ, ಮೇನ್‌ಬೀಚ್‌ನಲ್ಲಿ ಮುಂದುವರಿಯಿತು. ದಂಡೆಬಾಗ, ಬೇಲೆಹಿತ್ತಲು, ಬಿಜ್ಜೂರು, ಚೌಡಗೇರಿ, ತಲಗೇರಿ ಮುಂತಾದ ಭಾಗಗಳಲ್ಲಿ ಟೂರಿಸ್ಟ್‌ಗಳಿಗೆ ವಸತಿ ವ್ಯವಸ್ಥೆಯುಳ್ಳ ಮನೆಗಳನ್ನು ಪರಿವೀಕ್ಷಿಸಲಾಯಿತು. ಸ್ಥಳೀಯ ಪೊಲೀಸ್ ಇನ್‌ಸ್ಪೆಕ್ಟರ್ ಶ್ರೀಧರ ಎಸ್.ಆರ್. ನೇತೃತ್ವದ ಈ ವಿಶೇಷವಾದ ಕಾರ್ಯಾಚರಣೆಯಲ್ಲಿ ಇದೇ ಮೊದಲ ಬಾರಿಗೆ ಒಂದು ದಿನದಲ್ಲಿ ನೂರಕ್ಕೂ ಹೆಚ್ಚಿನ ಸ್ಥಳಗಳಲ್ಲಿ ಮಾದಕ ವಸ್ತು ವಿರೋಧಿ ಜಾಗೃತಿ ಪೊಲೀಸರಿಂದ ಆಯೋಜಿತವಾಗಿರುವುದು ಗಮನ ಸೆಳೆಯಿತು. ಪಿಎಸ್‌ಐ ಅನಿಲ್ ಬಿ.ಎಂ., ತನಿಖಾ ಪಿಎಸ್‌ಐ ಸುನೀಲ್ ಮತ್ತು ಸಿಬ್ಬಂದಿ ಕಾರ್ಯ ನಿರ್ವಹಿಸಿದರು.
ಮೂರು ಪ್ರಕರಣ: ಕಾರ್ಯಾಚರಣೆ ವೇಳೆ ಪತ್ತೆಯಾದ ಮಾದಕ ವಸ್ತು ಸೇವಿಸಿದ ಬೇರೆ ಬೇರೆ ಸ್ಥಳಗಳಿಂದ ಇಲ್ಲಿಗೆ ಬಂದಿದ್ದ ಮೂವರನ್ನು ವಶಕ್ಕೆ ಪಡೆದು ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ.