ಜಿಪಂ ಸಿಇಒ ಡಾ.ದಿಲೀಶ್‌ ಶಶಿ ಜಿಲ್ಲಾ ನೀರು ನೈರ್ಮಲ್ಯ ಸಮಿತಿ ಸಭೆ ನಡೆಸಿದರು 
ಉತ್ತರ ಕನ್ನಡ

ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸಿ

ಕಾರವಾರ: ಹರ್ ಘರ್ ಜಲ್ ಹಾಗೂ ಸುಜಲ್ ಗಾಂವ್ ಯೋಜನೆಯಡಿ ಗ್ರಾಮ ಪಂಚಾಯತಿ, ತಾಲೂಕು ಹಾಗೂ ಜಿಲ್ಲಾ ಮಟ್ಟದ ದತ್ತಾಂಶವನ್ನು ನಿಖರವಾಗಿ ಪೋರ್ಟ್ಲ್‌ನಲ್ಲಿ ನಮೂದಿಸಬೇಕು ಎಂದು ಜಿಪಂ ಸಿಇಒ ಡಾ.ದಿಲೀಶ್ ಶಶಿ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗುವ ಅನುದಾನವು ಈ ಪೋರ್ಟಲ್ ಪ್ರಗತಿ ಆಧಾರ ಮೇಲೆ ನಿರ್ಧಾರವಾಗುತ್ತದೆ ಹೀಗಾಗಿ ದತ್ತಾಂಶವನ್ನು ನಿಖರವಾಗಿ ನಮೂದಿಸಲು ಕ್ರಮಕೈಗೊಳ್ಳುವಂತೆ ತಿಳಿಸಿದರು.
ಜಿಲ್ಲೆಯಲ್ಲಿ ಕುಡಿಯುವ ನೀರಿನ ಅಭಾವ ಕಂಡುಬರುವ ಸಂದರ್ಭಗಳಲ್ಲಿ ಮುನ್ನೆಚ್ಚ್ಚರಿಕೆ ಕ್ರಮವಾಗಿ ತಾತ್ಕಾಲಿಕ ವ್ಯವಸ್ಥೆಗಳನ್ನು ಮಾಡುವ ಬದಲು, ಶಾಶ್ವತ ನೀರು ಪೂರೈಕೆ ಕ್ರಮಗಳನ್ನು ಕೈಗೊಳ್ಳಲು ಹೆಚ್ಚಿನ ಆದ್ಯತೆ ನೀಡಿ. ಕುಡಿಯುವ ನೀರು ಪೂರೈಕೆಗಾಗಿ ಈ ಬಾರಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 1 ಕೋಟಿ ರೂ. ಅನುದಾನ ನೀಡಿರುವುದರಿಂದ ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅವಕಾಶವಿದ್ದು, ಪ್ರತಿ ತಾಲೂಕಿನಲ್ಲಿ ಬಾಕಿ ಇರುವ ಕಾಮಗಾರಿಗಳನ್ನು ಗುರುತಿಸಿ, ಶೀಘ್ರವಾಗಿ ಪೂರ್ಣಗೊಳಿಸಲು ಕ್ರಮ ವಹಿಸುವಂತೆ ತಿಳಿಸಿದರು.
ಕುಡಿಯುವ ನೀರಿನ ಕೊರತೆ ಕಂಡು ಬರುವ ಸಂದರ್ಭಗಳಲ್ಲಿ ಟ್ಯಾಂಕರ್ ನೀರು ಅಥವಾ ಖಾಸಗಿ ಬೋರ್‌ವೆಲ್ ಮೂಲಗಳಿಂದ, ಪೈಪ್‌ಲೈನ್ ಮೂಲಕ ನೀರು ಪೂರೈಸಲು ಮುಂಜಾಗ್ರತಾ ಯೋಜನೆ ಸಿದ್ಧಡಿಸುವಂತೆ ಸೂಚಿಸಿದ ಅವರು, ಬೇಸಿಗೆಯಲ್ಲಿ ಹಳಿಯಾಳ, ಮುಂಡಗೋಡು ಮತ್ತು ಕರಾವಳಿ ಭಾಗಗಳಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚಾಗುವ ಸಾಧ್ಯತೆಯಿದೆ. ಕರಾವಳಿ ಭಾಗಗಳಲ್ಲಿ ಉಪ್ಪು ನೀರು ಬರುವ ಸಮಸ್ಯೆಯಿರುತ್ತದೆ. ಸ್ಥಳೀಯವಾಗಿ ನೀರು ಲಭ್ಯವಿಲ್ಲದಿದ್ದರೆ, ದೂರದ ಮೂಲಗಳಿಂದ ಹೊಸ ಪೈಪ್‌ಲೈನ್ ವಿಸ್ತರಣೆ ಮಾಡಲು ಯೋಜನೆ ರೂಪಿಸಬೇಕು ಎಂದರು.
ಮಳೆಯ ಕಾರಣದಿಂದಾಗಿ ಕೆಲವು ಪೈಪ್‌ಲೈನ್ ಕಾಮಗಾರಿಗಳು ಹಾಗೂ ಬೋರ್‌ವೆಲ್ ಕಾಮಗಾರಿಗಳು ವಿಳಂಬವಾಗಿದ್ದು, ಮಳೆ ಕಡಿಮೆಯಾಗುತ್ತಿದ್ದಂತೆ ಮುಂದಿನ ವಾರದಿಂದ ಕಾಮಗಾರಿಗಳನ್ನು ವೇಗಗೊಳಿಸಬೇಕು ಹಾಗೂ ಜಿಯೋ-ಟ್ಯಾಗಿಂಗ್, ಬೋರ್‌ವೆಲ್ ಸ್ಥಳ ಗುರುತಿಸುವಿಕೆ ಮತ್ತು ಫೋಟೋ ಅಪ್‌ಲೋಡ್ ಮಾಡುವ ಜವಾಬ್ದಾರಿಯನ್ನು ಕಾಮಗಾರಿ ಅನುಷ್ಠಾನ ಏಜೆನ್ಸಿಗಳು ಸರಿಯಾಗಿ ನಿರ್ವಹಿಸಬೇಕು. ಗ್ರಾಮ ಪಂಚಾಯಿತಿ ಮತ್ತು ಪಿಡಿಒಗಳಿಗೆ ಮಾಹಿತಿ ನೀಡದೆ ಯಾವುದೇ ಕಾಮಗಾರಿಗಳನ್ನು ಅರ್ಧಕ್ಕೆ ನಿಲ್ಲಿಸಬಾರದು ಹಾಗೂ ಕಾಮಗಾರಿ ಪೂರ್ಣಗೊಂಡು ಫೋಟೋ ಹಾಗೂ ದಾಖಲೆಗಳು ಸರಿಯಿದ್ದಲ್ಲಿ ಮಾತ್ರ ಗುತ್ತಿಗೆದಾರರ ಬಿಲ್‌ಗಳನ್ನು ಪಾವತಿ ಮಾಡಬೇಕು ಎಂದರು.
ಜಿಪಂ ಉಪ ಕಾರ್ಯದರ್ಶಿ ಎಂ.ಎಸ್.ಅಲ್ಲಾಭಕ್ಷ, ಮುಖ್ಯ ಲೆಕ್ಕಾಽಕಾರಿ ಆನಂದಸಾ ಹಬೀಬ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಇಂಜನೀಯರ್ ಸತ್ಯಪ್ಪ ಇದ್ದರು.