ಸುಷ್ಮಾ ಗೋಡಭೋಲೆ ಅವರು ಹೆದ್ದಾರಿಯಲ್ಲಿ ಪರಿಶೀಲನೆ ಡನೆಸಿದರು.
- ಅಪಘಾತದ ಸ್ಥಳ ಪರಿಶೀಲಿಸಿದ ಸುಷ್ಮಾ
- ನೆರೆ, ಬರದ ಪರಿಸ್ಥಿತಿಯ ಕುರಿತು ಪರಿಶೀಲನೆ
ಕಾರವಾರ: ಜಿಲ್ಲೆಯಲ್ಲಿ ಮಳೆಯ ಕೊರತೆ ಇರುವುದರಿಂದ ರೈತರಿಗೆ ಕಡಿಮೆ ಅವಧಿಯಲ್ಲಿ ಇಳುವರಿ ನೀಡುವ ಬೆಳೆಗಳನ್ನು ಬೆಳೆಯಲು ಉತ್ತೇಜಿಸುವಂತೆ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸುಷ್ಮಾ ಗೋಡಬೋಲೆ ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಬರ ಪರಿಸ್ಥಿತಿ ಕುರಿತು ಅಧಿಕಾರಿಗಳ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು. ಈ ವರ್ಷ ಜಿಲ್ಲೆಯಲ್ಲಿ ಶೇ. 24 ರಷ್ಟು ಮಳೆಯ ಕೊರತೆಯಾಗಿದೆ. ಹಳಿಯಾಳ, ಮುಂಡಗೋಡ, ಯಲ್ಲಾಪುರ ಭಾಗದಲ್ಲಿ ನೀರಿನ ಕೊರತೆಯನ್ನು ತಪ್ಪಿಸಲು ಕೃಷಿ ಹೊಂಡಗಳ ನಿರ್ಮಾಣ, ಬಾವಿ ಮತ್ತು ಬೋರ್‌ವೆಲ್ ಗಳಿಗೆ ಅಂತರ್ಜಲ ಮರುಪೂರಣ ವ್ಯವಸ್ಥೆಯನ್ನು ಕಲ್ಪ್ಪಿಸುವಂತೆ ತಿಳಿಸಿದರು.
ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಕೊರತೆಯಾಗದಂತೆ ಸಿದ್ದತೆಗಳನ್ನು ಕೈಗೊಳ್ಳಬೇಕು , ಸಾಂಪ್ರದಾಯಿಕ ನೀರಿನ ಸಂರಕ್ಷಣಾ ವಿಧಾನಗಳನ್ನು ಉತ್ತೇಜಿಸಬೇಕು. ಎಲ್ಲ ಪಂಚಾಯಿತಿ, ಹಾಸ್ಟೆಲ್ ಸೇರಿದಂತೆ ಸರ್ಕಾರಿ ಕಟ್ಟಡಗಳಲ್ಲಿ ಮಳೇ ನೀರು ಸಂರಕ್ಷಣಾ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ, ಜಿಪಂ ಸಿಇಒ ಡಾ.ದಿಲೀಶ್ ಶಶಿ, ಕಾರವಾರ ಡಿಎಫ್‌ಒ ಅಂಥೋನಿ ಮರಿಯಪ್ಪ, ಅಪರ ಜಿಲ್ಲಾಽಕಾರಿ ಸಜಿದ್ ಮುಲ್ಲಾ ಇದ್ದರು.
ಸಭೆಗೂ ಪೂರ್ವದಲ್ಲಿ ಅವರು ಯಲ್ಲಾಪುರ ಕಿರವತ್ತಿ ಗ್ರಾಪಂ ವ್ಯಾಪ್ತಿಯ ಸಮುದಾಯ ಆರೋಗ್ಯ ಕೇಂದ್ರ, ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದರು. ಯಲ್ಲಾಪುರ ಅಂಕೋಲಾ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ಆರತಿಬೈಲ್ ತಿರುವಿನಲ್ಲಿ ಜು.9 ರಂದು ಅಪಘಾತಸಂಭವಿಸಿ 7 ಜನ ಮೃತಪಟ್ಟ ಸ್ಥಳಕಕೆ ಭೇಟಿ ನೀಡಿ ಪರಿಶೀಲಿಸಿದರು, ಅರಬೈಲ್ ಘಟ್ಟ ವ್ಯಾಪ್ತಿಯಲ್ಲಿನ ಭೂಕುಸಿತ ಸಂಭವನೀಯ ಪ್ರದೇಶಗಳಿಗೆ ಹಾಗೂ ಅಪಾಯಕಾರಿ ತಿರುವುಗಳಿಗೆ ಭೇಟಿ ನೀಡಿ ಪರಿಶೀಲಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು