ಮೀನುಗಾರರಿಗೆ ಸೀಮೆಎಣ್ಣೆ kerosene ವಿತರಣೆ ಕುರಿತು ಬೆಂಗಳೂರಿನ ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ಶಾಸಕ ದಿನಕರ ಶೆಟ್ಟಿ ಸಚಿವರ ಗಮನ ಸೆಳೆದರು. 
ಉತ್ತರ ಕನ್ನಡ

kerosene ರಿಯಾಯಿತಿ ದರದಲ್ಲಿ ಸೀಮೆಎಣ್ಣೆ ವಿತರಿಸಿ

ಮಂಜುನಾಥ ಕೆಂಪಸಣ್ಣವರ
ಕುಮಟಾ: ನಾಡದೋಣಿ ಮೀನುಗಾರಿಕೆಗೆ ರಿಯಾಯಿತಿ ದರದಲ್ಲಿ ನೀಡುತ್ತಿದ್ದ ಸೀಮೆಎಣ್ಣೆ kerosene ವಿತರಣೆಯಲ್ಲಿ ಯಾವುದೇ ಅಡೆತಡೆಯಾಗಬಾರದು ಎಂದು ಶಾಸಕ ದಿನಕರ ಶೆಟ್ಟಿ ಕರಾವಳಿ ಭಾಗದ ಮೀನುಗಾರರ ಅಹವಾಲನ್ನು ಬೆಂಗಳೂರಿನ ವಿಕಾಸಸೌಧದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಂಡಿಸಿದರು.
ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳು ವೈದ್ಯ ಅಧ್ಯಕ್ಷತೆಯಲ್ಲಿ ನಾಗರಿಕ ಸರಬರಾಜು ಸಚಿವ ದಿನೇಶ ಗುಂಡೂರಾವ್ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಕರಾವಳಿಯ ಮೀನುಗಾರ ಪ್ರಮುಖರ ಜತೆ ಶಾಸಕ ದಿನಕರ ಶೆಟ್ಟಿ ಪಾಲ್ಗೊಂಡಿದ್ದರು.
ನಾಡದೋಣಿ ಮೀನುಗಾರಿಕೆಯಲ್ಲಿ ಪುರುಷ ಮೀನುಗಾರರಂತೆಯೇ ಮಹಿಳಾ ಮೀನುಗಾರರೂ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ನಾಡದೋಣಿ ಮೀನುಗಾರಿಕೆ ಕರಾವಳಿಯ ಲಕ್ಷಾಂತರ ಕುಟುಂಬಗಳ ಜೀವನಾಡಿಯಾಗಿದೆ.
ಸೀಮೆಎಣ್ಣೆ ಕೊರತೆಯಿಂದಾಗಿ ಮೀನುಗಾರರು ಸಮುದ್ರಕ್ಕೆ ಇಳಿಯಲಾಗದ ಪರಿಸ್ಥಿತಿ ನಿರ್ಮಾಣವಾಗಬಾರದು. ತಕ್ಷಣ ತಾಂತ್ರಿಕ ಅಡಚಣೆಗಳನ್ನು ನಿವಾರಿಸಿ, ರಿಯಾಯಿತಿ ದರದ ಸೀಮೆಎಣ್ಣೆಯನ್ನು ಸಮರ್ಪಕವಾಗಿ ವಿತರಿಸಬೇಕು ಎಂದು ಆಗ್ರಹಿಸಿದರು.
ಶಾಸಕರ ತಾರ್ಕಿಕ ಹಾಗೂ ಪೂರಕ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ಮಂಕಾಳ ವೈದ್ಯ ಹಾಗೂ ಸಚಿವ ದಿನೇಶ ಗುಂಡೂರಾವ್ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಸರ್ಕಾರವು ಮೀನುಗಾರರ ಹಿತರಕ್ಷಣೆಗೆ ಸಂಪೂರ್ಣ ಬದ್ಧವಾಗಿದೆ. ಪ್ರಸ್ತುತ ಸೀಮೆಎಣ್ಣೆ ವಿತರಣೆಯಲ್ಲಿ ಎದುರಾಗಿರುವ ಸಮಸ್ಯೆಗಳನ್ನು ಶೀಘ್ರದಲ್ಲೇ ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದರು.