ಆರೋಗ್ಯವಂತ ಅಡಿಕೆ (Areca) ಸಸಿಗಳು
- ಉತ್ತಮ ಗುಣಮಟ್ಟದ ಗಿಡಗಳಿಗಾಗಿ ನರ್ಸರಿಗಳಿಗೆ ಅಲೆದಾಟ
- ಎಲೆಚುಕ್ಕಿ ಕಾಟಕ್ಕೆ ಕೃಷಿಕರು ಕಂಗಾಲು
- ರೋಗಮುಕ್ತ ಸಸಿಗಳೇ ಸಿಗದ ಸ್ಥಿತಿ
ರೋಗಬಾಧೆ ಸೇರಿದಂತೆ ನಾನಾ ಕಾರಣಗಳಿಂದ (Areca) ಅಡಿಕೆ ಬೆಳೆಗಾರರ ಸ್ಥಿತಿ ವರ್ಷದಿಂದ ವರ್ಷಕ್ಕೆ ಶೋಚನೀಯವಾಗುತ್ತಿದೆ. ಇದರ ಮಧ್ಯೆ ಇದೀಗ ಆರೋಗ್ಯವಂತ ಸಸಿಗಳು ಸಿಗದೆ ಅಡಿಕೆ ಬೆಳೆಗಾರರು ಕಂಗಾಲಾಗಿದ್ದಾರೆ.
ಕಳೆದ ಎರಡು ವರ್ಷಗಳಿಂದ ಉತ್ತರ ಕನ್ನಡ ಜಿಲ್ಲೆಯ ಅಡಿಕೆ ಬೆಳೆಗಾರರು ಇನ್ನಿಲ್ಲದ ಸಮಸ್ಯೆ ಎದುರಿಸುತ್ತಿದ್ದಾರೆ. ವಿಶೇಷವಾಗಿ ಅಡಿಕೆ ಕೊಳೆರೋಗ ಹಾಗೂ ಎಲೆಚುಕ್ಕಿ ರೋಗದಿಂದ ಕೃಷಿಕರು ಅಧೀರರಾಗಿದ್ದಾರೆ.
ಅಡಿಕೆ ಕೊಳೆ ರೋಗ ಕಳೆದ ಎರಡೂ ಮಳೆಗಾಲದಲ್ಲಿ ವ್ಯಾಪಕವಾಗಿ ಕಾಣಿಸಿಕೊಂಡಿತ್ತು. ಬೆಳೆಗೆ ಕೊಳೆ ರೋಗ ವ್ಯಾಪಕವಾಗಿ ಉಲ್ಬಣಿಸಿದರೆ ರೋಗಕ್ಕೆ ಕಾರಣವಾಗುವ ಫಂಗಸ್‌ಗಳು ಅಡಿಕೆ ಮರದ ಕಾಂಡಗಳಿಗೂ ವ್ಯಾಪಿಸಿಕೊಂಡು ಮರಗಳು ಸಾವಿಗೀಡಾಗುತ್ತವೆ.
ಕಳೆದ ಎರಡು ವರ್ಷಗಳಿಂದ ಪ್ರತಿ ಎಕರೆ ಅಡಿಕೆ ತೋಟಕ್ಕೆ ಸರಾಸರಿ 30ರಿಂದ 40 ಮರಗಳು ಸಾವಿಗೀಡಾಗಿವೆ. ಎಲೆಚುಕ್ಕಿ ರೋಗದಿಂದಾಗಿ ಸಾವಿಗೀಡಾಗುತ್ತಿರುವ ಮರಗಳ ಸಂಖ್ಯೆ ಇನ್ನೂ ಅಧಿಕ.
ಕೆಲವೆಡೆ ಮರದ ಪೂರ್ತಿ ಎಲೆಗಳು ಹಳದಿ ಬಣ್ಣದ ಚುಕ್ಕಿಗಳಿಂದ ಆವೃತವಾಗಿ ಅತ್ತ ಸಾಯದೇ, ಇತ್ತ ಫಸಲೂ ಕೊಡದೇ ತ್ರಿಶಂಕು ಸ್ಥಿತಿ ತಲುಪಿವೆ.
ಹೀಗಾಗಿ ರೈತರು ಅಂಹ ಮರಗಳ ಚೇತರಿಕೆ ಕಾಣುವ ಸಾಧ್ಯತೆ ಇರದ ಹಿನ್ನೆಲೆಯಲ್ಲಿ ಅವುಗಳನ್ನು ಕಡಿದು ಆ ಜಾಗದಲ್ಲಿ ಬೇರೆ ಸಸಿ ನೆಡುವ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ, ರೋಗಮುಕ್ತ ಸಸಿಗಳೇ ಸಿಗದ ಸ್ಥಿತಿ ಉಂಟಾಗಿದೆ.
ಜಿಲ್ಲೆಯಲ್ಲಿ 33,364 ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಇವುಗಳಲ್ಲಿ 12 ಸಾವಿರ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಎಲೆಚುಕ್ಕಿ ಬಾಧಿಸಿದೆ.
ಸಾವಿರಾರು ಎಕರೆ ಪ್ರದೇಶದಲ್ಲಿ ಅಡಿಕೆ ಮರಗಳು ಸತ್ತಿವೆ ಹಾಗೂ ಪ್ರಸ್ತುತ ಸಾಯುತ್ತಲಿವೆ. ಇಂಥ ಸನ್ನಿವೇಶದಲ್ಲಿ ಹೊಸ ಅಡಿಕೆ ಗಿಡಗಳ ನಾಟಿಗೆ ಬೆಳೆಗಾರರು ಸಿದ್ಧತೆ ನಡೆಸಿದ್ದಾರೆ.
ಹೀಗಾಗಿ ಮಾರುಕಟ್ಟೆಯಲ್ಲಿ ಆರೋಗ್ಯವಂತ ಮತ್ತು ರೋಗಮುಕ್ತ ಸಸಿಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದ್ದು, ರೈತರು ನಂಬಿಕಸ್ಥ ನರ್ಸರಿಗಳಿಗೆ ಅಲೆಯುವಂತಾಗಿದೆ.
ಬೇಡಿಕೆ ಹೆಚ್ಚಳ
ನಾಟಿ ಮಾಡಿದ್ದ ಅಡಿಕೆ ಸಸಿಗಳನ್ನು ರೈತರು ಪ್ರತಿವರ್ಷ ಸೆಪ್ಟೆಂಬರ್ ತಿಂಗಳ ವೇಳೆ ನೆಡುತ್ತಾರೆ.
ಪ್ಲಾಸ್ಟಿಕ್ ಕೊಟ್ಟೆಗಳಲ್ಲಿ ಸಿದ್ಧಪಡಿಸಿರುವ ಅಡಿಕೆ ಸಸಿಗಳನ್ನು ಮಳೆಗಾಲ ಆರಂಭಕ್ಕೂ ಮುನ್ನ, ಅಂದರೆ ಈ ಅವಧಿಯಲ್ಲಿ ನೆಡಲಾಗುತ್ತದೆ. ಕಳೆದೆರಡು ವರ್ಷಗಳಿಂದ ಅಡಿಕೆ ಸಸಿಗಳ ಪ್ರಮಾಣ ಜಾಸ್ತಿ ಬೇಕಾಗಿದ್ದರಿಂದ ಆರೋಗ್ಯಯುತ ಸಸಿಗಳ ಬೇಡಿಕೆ ಒಮ್ಮೆಲೇ ಏರಿದೆ.
ಸಾಮಾನ್ಯವಾಗಿ ಪ್ರತಿ ವರ್ಷ ನಾವೇ ಸಸಿಗಳನ್ನು ಸಿದ್ಧಪಡಿಸಿಕೊಳ್ಳುತ್ತೇವೆ. ಆದರೆ, ಈಗ ಎರಡು ವರ್ಷಗಳಿಂದ ನಾವು ಸಿದ್ಧಪಡಿಸಿದ ಸಸಿಗಳು ರೋಗ ಬಾಧೆಗೀಡಾಗಿವೆ.
ತೋಟ ನಿರ್ಮಾಣ ಮಾಡಲು ಹೊರಟಿರುವ ರೈತರಿಗೆ ರೋಗವಿಲ್ಲದ ಸಸಿಗಳನ್ನು ಪಡೆಯುವುದೇ ದೊಡ್ಡ ಸವಾಲಾಗಿದೆ ಎನ್ನುತ್ತಿದ್ದಾರೆ ಹಲವು ಕೃಷಿಕರು.
ಬೆಲೆ ಏರಿಕೆ
ಈ ಹಿಂದೆ ಒಂದು ವರ್ಷದ ಸಸಿಗೆ 30ರಿಂದ 40 ರೂ. ದರವಿತ್ತು. ಇತ್ತೀಚೆಗೆ ರೋಗಮುಕ್ತ ಸಸಿಗಳಿಗೆ ಬೇಡಿಕೆ ಹೆಚ್ಚುತ್ತಿರುವ ಕಾರಣ ದರದಲ್ಲೂ 20ರಿಂದ 30 ರೂ.ನಷ್ಟು ಏರಿಕೆಯಾಗಿದೆ.
ಕೇಳಿದಷ್ಟು ಹಣ ನೀಡಿದರೂ ಉತ್ತಮ ಸಸಿಗಳನ್ನು ತರುವುದೇ ಸವಾಲಿನ ಕಾರ್ಯವಾಗುತ್ತಿದೆ ಎನ್ನುತ್ತಾರೆ ಬಹುತೇಕ ಅಡಿಕೆ ಬೆಳೆಗಾರರು.
ಈ ನಡುವೆ, ಹೊಸದಾಗಿ ತೋಟ ಮಾಡುವವರಿಗೆ ಹಾಗೂ ತೋಟದಲ್ಲಿ ಹೊಸ ಸಸಿ ನೆಡುವವರಿಗೆ ಕೃಷಿ ಇಲಾಖೆ ಹಾಗೂ ತೋಟಗಾರಿಕೆ ತಜ್ಞರು ಜಾಗರೂಕರಾಗಿರಲು ಸೂಚಿಸಿದ್ದಾರೆ.
"
ಸಸಿಗಳನ್ನು ಖರೀದಿಸುವಾಗ ಅವುಗಳ ಎಲೆಗಳ ಮೇಲೆ ಯಾವುದೇ ಕಪ್ಪು ಅಥವಾ ಹಳದಿ ಚುಕ್ಕೆಗಳಿಲ್ಲದಂತೆ ಖಚಿತಪಡಿಸಿ ಕೊಳ್ಳುವುದು ಅತಿ ಅಗತ್ಯ. ಅಪರಿಚಿತ ಮೂಲಗಳಿಂದ ಸಸಿಗಳನ್ನು ತಂದರೆ ತೋಟಕ್ಕೆ ರೋಗ ಹೊಸದಾಗಿ ವ್ಯಾಪಿಸಿಕೊಳ್ಳುವ ಸಾಧ್ಯತೆ ಇರುತ್ತದೆ.
— ಗಣೇಶ ಹೆಗಡೆ ಸಹಾಯಕ ತೋಟಗಾರಿಕೆ ನಿರ್ದೇಶಕ, ಶಿರಸಿ