ಕಾರವಾರ: ಮಡಗಾಂವ-ಮಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಬೆಂಗಳೂರುವರೆಗೆ ವಿಸ್ತರಿಸಲಾಗಿದೆ. ಈ ರೈಲು ಬೆಂಗಳೂರು-ಕಾರವಾರಕ್ಕೆ ಉತ್ತಮ ಸಂಪರ್ಕ ಸೇತುವೆಯಾಗಲಿದೆ. ಆದರೆ, ರೈಲನ್ನು ಓಡಿಸುವ ಮಾರ್ಗದ ಬಗ್ಗೆ ಕರಾವಳಿ ಜಿಲ್ಲೆಗಳ ನಡುವೆ ಭಿನ್ನಾಭಿಪ್ರಾಯ ಎದ್ದಿದೆ. ಮಂಗಳೂರಿನ ಭಾಗದ ಜನರ ವಾದ ಒಂದಾಗಿದ್ದರೆ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಜನ ಬೇರೆಯದೇ ಹೇಳುತ್ತಿದ್ದಾರೆ. ಹಾಗಿದ್ದರೆ, ಏನದು ಭಿನ್ನಾಭಿಪ್ರಾಯ..? ಮಾಹಿತಿ ಇಲ್ಲಿದೆ.
ಬೆಂಗಳೂರಿನಿಂದ-ಕಾರವಾರಕ್ಕೆ ಬರುವ ಎಲ್ಲ ರೈಲುಗಳು ಮಂಗಳೂರು ಸೆಂಟ್ರಲ್ ನಿಲ್ದಾಣಕ್ಕೆ ಹೋಗಿ ಬರಬೇಕು ಎಂಬ ಆ ಭಾಗದ ರೈಲ್ವೆ ಹೋರಾಟಗಾರರ ಲಾಬಿಯ ಬಗ್ಗೆ ಉತ್ತರ ಕನ್ನಡ ಹಾಗೂ ಕುಂದಾಪುರ ರೈಲ್ವೆ ಸಮಿತಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಹೊಸದಾಗಿ ಘೋಷಣೆಯಾಗಿರುವ ಯಶವಂತಪುರ-ಮಂಗಳೂರು-ಮಡಗಾಂವ ವಂದೇ ಭಾರತ್ ಎಕ್ಸ್ಪ್ರೆಸ್(26655/26656) ರೈಲನ್ನು ಮಂಗಳೂರು ಜಂಕ್ಷನ್‌ನಿAದ ನೇರವಾಗಿ ಕಾರವಾರ ಕಡೆಗೆ ಓಡಿಸಬೇಕು ಎಂದು ಒತ್ತಾಯಿಸಿವೆ.
ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ ಹೆಚ್ಚಿನ ಪ್ಲಾಟ್‌ಫಾರ್ಮ್ಗಳಿಲ್ಲ. ಬರುವ ರೈಲುಗಳ ಸಂಖ್ಯೆ ಹೆಚ್ಚಿದೆ. ಹಾಗಾಗಿ ಒಂದಾದ ನಂತರ ಇನ್ನೊಂದು ರೈಲು ಬಂದು ನಿಲ್ಲಬೇಕಾದ ಪರಿಸ್ಥಿತಿ ಇದೆ. ಇದರಿಂದ ಮಂಗಳೂರು ಜಂಕ್ಷನ್‌ನಿಂದ ಸೆಂಟ್ರಲ್ ಕಡೆಗೆ ರೈಲುಗಳನ್ನು ಅತಿ ನಿಧಾನವಾಗಿ ಓಡಿಸಲಾಗುತ್ತದೆ. ಬೆಂಗಳೂರು ಕಡೆಯಿಂದ ಬಂದು ಕಾರವಾರ ಕಡೆಗೆ ತೆರಳಬೇಕಾದ ರೈಲುಗಳಿದ್ದರೆ ಅದು ಬಂದ ಮಾರ್ಗದಲ್ಲೇ ವಾಪಸಾಗಬೇಕು. ಇಂಜಿನ್ ತಿರುಗಿಸಬೇಕಾಗಿದ್ದು, ಅದಕ್ಕೆ ಮುಕ್ಕಾಲು ಗಂಟೆ ವ್ಯಯಿಸಬೇಕು. ಒಟ್ಟಾರೆ ಕನಿಷ್ಟ 2 ತಾಸು ಕಾರವಾರ ಭಾಗದ ಪ್ರಯಾಣಿಕರು ಸಮಯ ವ್ಯರ್ಥ ಮಾಡಬೇಕಾಗುತ್ತದೆ.
ಮಂಗಳೂರು ವ್ಯಾಪ್ತಿಯಲ್ಲಿ ಬಂಟ್ವಾಳ, ಪಡೀಲ್ ಜಂಕ್ಷನ್ ಹಾಗೂ ಸುರತ್ಕಲ್ ಮೂರು ಪ್ರಮುಖ ನಿಲ್ದಾಣಗಲ್ಲಿ ಎಲ್ಲ ರೈಲುಗಳೂ ನಿಲ್ಲಲಿವೆ. ಅಲ್ಲಿ ಇಳಿದ ಪ್ರಯಾಣಿಕರು 15 ರಿಂದ 20 ನಿಮಿಷ ಪ್ರಯಾಣಿಸಿ ಮಂಗಳೂರಿನ ವಿವಿಧ ಭಾಗಗಳಿಗೆ ತೆರಳುವ ಅನುಕೂಲಗಳಿವೆ. ಆದರೆ, ಮುಂದೆ 300 ಕಿಮೀ ದೂರ ತೆರಳಬೇಕಾದ ಕಾರವಾರ ಭಾಗದ ಪ್ರಯಾಣಿಕರಿಗೆ ಎರಡು ಗಂಟೆ ವಿಳಂಬವಾದರೆ ತುಂಬಾ ನಷ್ಟವಾಗಲಿದೆ. ಹಾಗಾಗಿ ಪಂಜಗಂಗಾ ಎಕ್ಸ್ಪ್ರೆಸ್ ರೈಲು ಓಡಿದ ಮಾರ್ಗದಲ್ಲೇ ವಂದೇ ಭಾರತ್ ಕೂಡ ಓಡಲಿ ಎಂಬುದು ಇಲ್ಲಿನ ರೈಲ್ವೆ ಪ್ರಯಾಣಿಕರ ವಾದವಾಗಿದೆ.
ಮಂಗಳೂರು ಲಾಬಿ
ಪ್ರಸ್ತುತ ಸಂಚಾರ ನಡೆಸಿರುವ ಮಡಗಾಂವ-ಮAಗಳೂರು ಸೆಂಟ್ರಲ್(20645 ಹಾಗೂ 20646) ರೈಲನ್ನು ಮಂಗಳೂರಿಗೆ ಸೀಮಿತ ಮಾಡಬೇಕು ಎಂಬುದು ಅಲ್ಲಿನ ಹೋರಾಟಗಾರರ ಪ್ರಯತ್ನವಾಗಿತ್ತು. ಆದರೆ, ಉತ್ತರ ಕನ್ನಡ ಹಾಗೂ ಉಡುಪಿ ಸಂಸದರು, ರೈಲ್ವೆ ಸೇವಾ ಸಮಿತಿಗಳ ಪ್ರಯತ್ನದಿಂದ ವಂದೇ ಭಾರತ ವಿಸ್ತರಣೆಯಾಗಿದೆ. ಆದರೆ, ಲಾಬಿ ನಡೆಸಿ, ಅದನ್ನು ತಪ್ಪಿಸಬೇಕು ಎಂಬುದು ಆ ಭಾಗದವರ ಪ್ರಯತ್ನವಾಗಿದೆ ಎಂದು ಸೇವಾ ಸಮಿತಿ ಪದಾಽಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಿಂದ ಬಿಟ್ಟ ವಂದೇ ಭಾರತ ರೈಲು ಮಂಗಳೂರಿಗೇ ಕೊನೆಯಾಗಬೇಕು. ಉಡುಪಿ, ಕಾರವಾರಕ್ಕೆ ಹೋಗಬಾರದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮಂಗಳೂರು ಭಾಗದ ರೈಲ್ವೆ ಹೋರಾಟಗಾರರು ಸುದ್ದಿ ಹಬ್ಬಿಸುತ್ತಿದ್ದಾರೆ. ಇದು ಅವರ ಸ್ವಾರ್ಥದ ಪದಮಾವಽಯಾಗಿದೆ. ಕೈಗಾ ಅಣು ಸ್ಥಾವರ, ಸೀ ಬರ್ಡ್ ನೌಕಾನೆಲೆ, ಗೋಕರ್ಣ , ಮುರುಡೇಶ್ವರ , ಕೊಲ್ಲೂರು , ಉಡುಪಿಯ ಪುಣ್ಯ ಸ್ಥಳಗಳಿಗೆ ರಾಜದಾನಿ ಬೆಂಗಳೂರನ್ನು ಬೆಸೆಯುವ ಸರಕಾರದ ನಿರ್ಣಯದಂತೆ ವಂದೇ ಭಾರತ್ ರೈಲು ಆರಂಭವಾಗಬೇಕಿದೆ.ರಾಜೀವ ಗಾಂವಕರ್, ಉತ್ತರ ಕನ್ನಡ ರೈಲ್ವೆ ಸೇವಾ ಸಮಿತಿ ಕಾರ್ಯದರ್ಶಿ