ಶಿರಸಿ ಮಾರಿಕಾಂಬಾ ದೇವಿ ಜಾತ್ರೆಯಲ್ಲಿ ಮಂಗಳವಾರ ಜನಸಂದಣಿ ಕಡಿಮೆಯಾಗಿದ್ದು, ಭಕ್ತರು ಎರಡೆರಡು ಬಾರಿ ದೇವಿಯ ದರ್ಶನ ಪಡೆದುಕೊಂಡರು.  
ಉತ್ತರ ಕನ್ನಡ

ಮಾರಿಕಾಂಬೆಯ ಸುಲಭ ದರ್ಶನಗೈದ ಭಕ್ತರು

ಬಸವರಾಜ ವೀರಪ್ಪ ಗರಗ

ಪ್ರಮುಖ ಮುಖ್ಯಾಂಶಗಳು

  • ಜನಸಂದಣಿಯೂ ಇಲ್ಲ, ಸರತಿ ಸಾಲು ಇಲ್ಲ
  • ದೇವಿ ಜಾತ್ರೆಗೆ ಇಂದು ತೆರೆ
ಶನಿವಾರ ಮತ್ತು ಭಾನುವಾರದಂದು ದೇವಿಯ ದರ್ಶನಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಅಧಿಕವಾಗಿರುತ್ತದೆ. ಆದರೆ, ಈ ವರ್ಷ ಈ ಎರಡು ದಿನಗಳ ಜೊತೆ ಸೋಮವಾರವೂ ಭಕ್ತರ ಸಂಖ್ಯೆ ಅಧಿಕವಾಗಿತ್ತು. ಪ್ರತಿ ಜಾತ್ರೆಗೆ ಹೋಲಿಸಿದರೆ ಈ ಮೂರು ದಿನಗಳ ಕಾಲ ಆಗಮಿಸಿದ ಭಕ್ತರ ಸಂಖ್ಯೆ ಈ ವರ್ಷ ಸ್ವಲ್ಪ ಹೆಚ್ಚಾಗಿತ್ತು. ಮಂಗಳವಾರ ಚಂದ್ರಗ್ರಹಣ ನಿಮಿತ್ತ ಭಕ್ತರ ಸಂಖ್ಯೆ ಕಡಿಮೆಯಾಗಿತ್ತು. ಮಧ್ಯಾಹ್ನ 2 ಗಂಟೆಯವರೆಗೆ ಹಣ್ಣು ಕಾಯಿ ಸೇವೆ ನಡೆಯಿತು. ಆ ಬಳಿಕ ಉಡಿ ಸಲ್ಲಿಸುವಿಕೆ ಸೇರಿದಂತೆ ಎಲ್ಲ ಸೇವೆಯನ್ನು ಸಂಜೆ 7.30ರವರೆಗೆ ಸ್ಥಗಿತಗೊಳಿಸಲಾಗಿತ್ತು. ಈ ವೇಳೆ ಭಕ್ತರಿಗೆ ದೇವಿಯ ದರ್ಶನಕ್ಕೆ ಮಾತ್ರ ವ್ಯವಸ್ಥೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆಯೂ ಕಡಿಮೆ ಇತ್ತು. ಆಗಮಿಸಿದ ಭಕ್ತರಿಗೆ ದೇವಿಯ ದರ್ಶನಕ್ಕೆ ಅಧಿಕ ಸಮಯ ಸಿಕ್ಕಿದೆಯಲ್ಲದೆ, ಅನೇಕರು ಎರಡ್ಮೂರು ಬಾರಿ ಅಮ್ಮನ ದರ್ಶನ ಪಡೆದರು. ವಿಶೇಷ ಆಮಂತ್ರಿತರ ಕೌಂಟರ್ ಸೇರಿದಂತೆ ಎಲ್ಲೂ ನೂಕು ನುಗ್ಗಲು ಇರಲಿಲ್ಲ.

ಜಾತ್ರಾಮಹೋತ್ಸವಕ್ಕೆ ಇಂದು ತೆರೆ

ಫೆ. 24ರಂದು ಆರಂಭಗೊಂಡಿದ್ದ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವ ಬುಧವಾರ ಸಮಾರೋಪಗೊಳ್ಳಲಿದೆ. ಬೆಳಗ್ಗೆ 10.47ರವರೆಗೆ ಭಕ್ತರು ಮಾರಿಕಾಂಬಾ ದೇವಿಯ ಸೇವೆ ಮಾಡಬಹುದಾಗಿದೆ. ಆ ಬಳಿಕ ಜಾತ್ರಾ ಮುಕ್ತಾಯದ ವಿಧಿವಿಧಾನಗಳು ಆರಂಭಗೊಳ್ಳಲಿವೆ. ದೇವಿ ಗದ್ದುಗೆ ಬಿಟ್ಟು ಇಳಿದ ಬಳಿಕ ಮಾತಂಗಿ ಚಪ್ಪರ ಸುಡುವ ಕಾರ್ಯಕ್ರಮ ನಡೆಯಲಿದೆ. ದೇವಿ ಗದ್ದುಗೆಯಿಂದ ಇಳಿದ ಬಳಿಕ ಭಕ್ತರ ದರ್ಶನಕ್ಕೆ ಲಭ್ಯವಾಗುವುದಿಲ್ಲ. ಯುಗಾದಿಯ ದಿನದಂದು ಪುನಃ ಮಾರಿಕಾಂಬಾ ದೇವಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲ್ಪಡಲಿದ್ದಾಳೆ.