ಗೋಸಂಧ್ಯಾ ಕಾರ್ಯಕ್ರಮದಲ್ಲಿ ಗೋಸಂರಕ್ಷಕ ಅಕ್ಷಯ ಆಳ್ವಾ ಅವರನ್ನು ಸನ್ಮಾನಿಸಲಾಯಿತು. ಮುರಲೀಧರ ಪ್ರಭು, ಅರುಣ ಹೆಗಡೆ, ಸುಬ್ರಾಯ ಭಟ್, ಆರ್.ಜಿ. ಭಟ್ ಬಗ್ಗೋಣ ಇತರರಿದ್ದರು.
ಕುಮಟಾ: ಹಾಲನ್ನು ಗುಣಮಟ್ಟದಲ್ಲಿ ಅಳೆಯಬೇಕೇ ಹೊರತು ಪ್ರಮಾಣದಲ್ಲಿ ಅಲ್ಲ. ದೇಸೀ ಗೋವಿನ ಹಾಲು ಅಮೃತ ಸಮಾನ. ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಇದು ಅತ್ಯವಶ್ಯಕ. ಕಳೆದ 20 ವರ್ಷಗಳಲ್ಲಿ ಸುಮಾರು 2,500ಕ್ಕೂ ಹೆಚ್ಚು ಗೋವುಗಳನ್ನು ರಕ್ಷಿಸಿರುವುದು ನಮ್ಮ ಅಮೃತಧಾರಾ ಗೋಬ್ಯಾಂಕ್‌ನ ಹೆಮ್ಮೆ. ಜನರು ಜನ್ಮ ದಿನಗಳನ್ನು ಗೋಶಾಲೆಯಲ್ಲಿ ಆಚರಿಸಿ ಎಂದು ಹೊಸಾಡದ ಅಮೃತಧಾರಾ ಗೋಬ್ಯಾಂಕ್-ಗೋಶಾಲಾ ಸಮಿತಿಯ ಮಂಜುನಾಥ ಭಟ್ಟ ಸುವರ್ಣಗದ್ದೆ ಕರೆ ನೀಡಿದರು.
ಹೊಸಾಡ ಗೋಬ್ಯಾಂಕ್‌ನಲ್ಲಿ ಗೋ ಸಂಧ್ಯಾ, ಗೋಬ್ಯಾಂಕ್ ವಾಟ್ಸ್‌ಆ್ಯಪ್ ಗುಂಪಿನ ಸಕ್ರಿಯ ಕಾರ್ಯಕರ್ತರ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ಗೋ ಸಂಧ್ಯಾ ಕಾರ್ಯಕ್ರಮವನ್ನು ಬೆಂಗಳೂರು ಕಾರ್ಡಿನಲ್ ಹೆಲ್ತ್‌ನ ಸೀನಿಯರ್ ಸಾಫ್ಟ್‌ವೇರ್ ಇಂಜಿನಿಯರ್ ಶಿವಪ್ರಸಾದ ಭಟ್ಟ, ಗೋಸಂರಕ್ಷಕ ಅಕ್ಷಯ ಆಳ್ವಾ ಉದ್ಘಾಟಿಸಿ, ಗೋಬ್ಯಾಂಕಿನ ಕಾರ್ಯವೈಖರಿಗೆ ತೃಪ್ತಿ ವ್ಯಕ್ತಪಡಿಸಿದರು. ದೇಸೀ ತಳಿಯ ಗೋವುಗಳ ಪೋಷಕಾಂಶ ಮತ್ತು ಔಷಧ ಗುಣಗಳ ಮಹತ್ವ ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಗೋಬ್ಯಾಂಕ್ ಅಧ್ಯಕ್ಷ ಮುರಳೀಧರ ಪ್ರಭು ಮಾತನಾಡಿ, ಗೋರಕ್ಷಣೆ ಮತ್ತು ಕೃಷಿಯಲ್ಲಿ ಕೃತಕ ಬುದ್ಧಿಮತ್ತೆ ಬಳಕೆಯ ಅಗತ್ಯತೆ ಇದೆ. ಭವಿಷ್ಯ ಭೂಮಿಯಲ್ಲಿದೆ. ಭೂಮಿಯನ್ನು ಮಾರಬೇಡಿ. ಗೋವು ಮತ್ತು ಕೃಷಿಗೆ ಮತ್ತೆ ಮೌಲ್ಯ ಬರುತ್ತದೆ ಎಂದರು.
ಗೋಸಂರಕ್ಷಕರಾದ ಮಂಗೇಶ ನಾಯ್ಕ, ಮಲೆನಾಡ ಗಿಡ್ಡ ತಳಿ ಸಂರಕ್ಷಕ ಅಕ್ಷಯ ಆಳ್ವಾ, ಉರಗ ಹಾಗೂ ಗೋ ರಕ್ಷಕ ಪವನ ನಾಯ್ಕ, ಬಾಳಿಗಾ ವಾಣಿಜ್ಯ ಕಾಲೇಜ್ ಪ್ರಾಧ್ಯಾಪಕ ಡಾ. ಅರವಿಂದ ನಾಯ್ಕ, ಎತ್ತುಗಳಿಂದ ಪಾರಂಪರಿಕ ಎಣ್ಣೆ ಗಾಣ ನಡೆಸುತ್ತಿರುವ ಗುರು ನಾಯಕ, ಗೋಶಾಲೆಯ ವ್ಯವಸ್ಥಾಪಕ ವಿವೇಕ ಭಟ್ಟ ಅವರನ್ನು ಸನ್ಮಾನಿಸಲಾಯಿತು.
ಕಾರ್ಯದರ್ಶಿ ಅರುಣ ಹೆಗಡೆ ಸ್ವಾಗತಿಸಿ ಪರಿಚಯಿಸಿದರು. ಕೋಶಾಧ್ಯಕ್ಷ ಸುಬ್ರಾಯ ಶಿವ ಭಟ್ಟ ವಾರ್ಷಿಕ ವರದಿ ಮಂಡಿಸಿದರು. ಗೋಪಾಲಕೃಷ್ಣ ಉಗ್ರು ವಂದನಾರ್ಪಣೆಗೈದರು. ಗಣೇಶ ಜೋಶಿ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೊಂಕಣ ಎಜುಕೇಷನ್ ಟ್ರಸ್ಟ್ ಹಾಗೂ ಮೂರೂರಿನ ವಿದ್ಯಾನಿಕೇತನದ ವಿದ್ಯಾರ್ಥಿಗಳು ಭಕ್ತಿಗೀತೆ, ನೃತ್ಯ ರೂಪಕ ಮತ್ತು ಭರತನಾಟ್ಯ ಪ್ರದರ್ಶಿಸಿದರು.