ಸಿಐಟಿಯುನಿಂದ ಕಾರವಾರ ಜಿಲ್ಲಾಧಿಕಾರಿ ಕಚೇರಿಯ ಎದುರು ಪ್ರತಿಭಟನೆ ನಡೆಯಿತು.
ಕಾರವಾರ: ಕಾರ್ಮಿಕ ಸಂಹಿತೆ ವಾಪಸ್ ಪಡೆದು, ಕಾರ್ಮಿಕ ಹಕ್ಕುಗಳ ಪುನರ್ ಸ್ಥಾಪನೆ ಆಗಬೇಕು ಎಂದು ಆಗ್ರಹಿಸಿ ಸಿಐಟಿಯ ರಾಜ್ಯಾದ್ಯಂತ ನೀಡಿದ ಕರೆಯನ್ನು ಬೆಂಬಲಿಸಿ ಕಾರವಾರದಲ್ಲಿ ಸಂಘಟನೆಯ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.
ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಘೋಷಣೆಗಳನ್ನು ಕೂಗಿದರು. ಜಿಲ್ಲಾಧಿಕಾರಿ ಕಚೇರಿಯ ಎದುರು ಪ್ರತಿಭಟನಾ ಸಭೆ ನಡೆಸಿದರು. ಮನವಿ ಸಲ್ಲಿಸಿದರು.
ರಾಜ್ಯಾದ್ಯಂತ ಸಂಘಟಿತ, ಅಸಂಘಟಿತ, ಗುತ್ತಿಗೆ, ಹೊರ ಗುತ್ತಿಗೆ ಹಾಗೂ ಯೋಜನಾ ಕಾರ್ಮಿಕರಿಗೆ ಕನಿಷ್ಠ ಕೂಲಿಯನ್ನು ಸರ್ಕಾರ ನಿಗದಿ ಮಾಡಬೇಕು. ಈಗ ನಿಗದಿ ಮಾಡಿದ ಕನಿಷ್ಠ ಕೂಲಿ ಅಸಮರ್ಪಕವಾಗಿದ್ದು, ಅದನ್ನು ಪರಿಷ್ಕರಿಸಬೇಕು. ಕೇಂದ್ರ ಸರ್ಕಾರ ಹೊಸದಾಗಿ ತಂದಿರುವ ಕಾರ್ಮಿಕ ಕಾಯ್ದೆ ಕಾರ್ಮಿಕ ವಿರೋಧಿಯಾಗಿದೆ. ಬಂಡವಾಳಶಾಹಿಗಳ ಪರವಾಗಿದೆ. ಅದನ್ನು ರದ್ದು ಮಾಡಿ ಕಾರ್ಮಿಕ ಹಕ್ಕುಗಳನ್ನು ಪುನಃ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಅಧ್ಯಕ್ಷ ತಿಲಕ್ ಗೌಡ, ಉಪಾಧ್ಯಕ್ಷೆ ಯಮುನಾ ಗಾಂವಕರ್, ಕಾರ್ಯದರ್ಶಿ ಸಲೀಂ ಸಯ್ಯದ್ ಹಾಗೂ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.