ಸಿದ್ದಾಪುರದಲ್ಲಿ ಜಿಲ್ಲಾ ಹಸ್ಲರ್ ಕ್ಷೇಮಾಭಿವೃದ್ಧಿ ಸಂಘ, ದಲಿತಪರ ಸಂಘಟನೆಗಳು ಮತ್ತು ಸಾರ್ವಜನಿಕರು ಪ್ರತಿಭಟನೆ ನಡೆಸಿದರು. (Murder) ಅಣ್ಣಪ್ಪ, ಗೋಪಾಲ, ನಂದನ, ಮಂಜುನಾಥ, ವಿಶಾಲಾಕ್ಷಿ, ಶಾಂತಿ ಹಸ್ಲರ, ಮಹಾಲಕ್ಷ್ಮೀ ಇತರರಿದ್ದರು.
ಸಿದ್ದಾಪುರ: ತಾಲೂಕಿನ ಕುಡಗುಂದ ಗ್ರಾಮದ ಚಂದ್ರಶೇಖರ ವೀರಭದ್ರ ಹಸ್ಲರ್ ಹಾಗೂ ಆತನ ಸಹೋದರ ಮಂಜುನಾಥ ವೀರಭದ್ರ ಹಸ್ಲರ್ ಅವರನ್ನು ಹೊನ್ನಾವರ ತಾಲೂಕಿನ ಗೇರಸೊಪ್ಪ ಸುಳೆಮುರ್ಕಿ ತಿರುವಿನಲ್ಲಿ ಕಾರಿನಲ್ಲಿ ಸಜೀವ ದಹನ ಮಾಡಿ ಕೊಲೆ (Murder) ಮಾಡಿರುವವರಿಗೆ ಕಠಿಣ ಶಿಕ್ಷೆ ನೀಡಬೇಕು. ಎಂದು ಆಗ್ರಹಿಸಿ ಜಿಲ್ಲಾ ಹಸ್ಲರ್ ಕ್ಷೇಮಾಭಿವೃದ್ಧಿ ಸಂಘ ಹಾಗೂ ಮತ್ತಿತರ ಸಂಘಟನೆಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ ಹಸ್ಲರ್ ಕ್ಷೇಮಾಭಿವೃದ್ಧಿ ಸಂಘ ಸಿದ್ದಾಪುರ, ತಾಲೂಕಿನ ವಿವಿಧ ಸಂಘಟನೆಯವರು ಹಾಗೂ ದಲಿತಪರ ಸಂಘಟನೆಗಳು ಮತ್ತು ಸಾರ್ವಜನಿಕರು ಈ ಕುರಿತು ಪಟ್ಟಣದ ತಿಮ್ಮಪ್ಪ ನಾಯಕ ವೃತ್ತದಿಂದ ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ರಾಮಕೃಷ್ಣ ಹೆಗಡೆ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದರು.
ನಂತರ ತಹಸೀಲ್ದಾರ ಕಚೇರಿ ಎದುರು ಪ್ರತಿಭಟನಾ ಸಭೆ ನಡೆಸಿ ಕುಡಗುಂದದ ಪರಿಶಿಷ್ಟ ಜಾತಿಗೆ ಸೇರಿದ ಇಬ್ಬರು ಸಹೋದರರನ್ನು ಅಮಾನುಷವಾಗಿ ಕೊಲೆ ಮಾಡಿದ್ದಾರೆ.
ಮೊದಲು ಮೇಲ್ನೋಟಕ್ಕೆ ಇದೊಂದು ಅಪಘಾತ ಎಂದು ಕಂಡಿದ್ದರೂ ಇದೊಂದು ಕೊಲೆ ಎಂದು ಉಮೇಶ ವೀರಭದ್ರ ಹಸ್ಲರ್ ಅವರು ಹೊನ್ನಾವರ ಪೊಲೀಸ್ ಠಾಣೆಗೆಗೆ ದೂರು ನೀಡಿದ್ದಾರೆ.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊಲೆಗಾರರಿಗೆ ಕಠಿಣ ಶಿಕ್ಷೆ ಆಗಬೇಕು, ಮೃತ ಕುಟುಂಬಕ್ಕೆ 50 ಲಕ್ಷ ರೂ. ಹಾಗೂ ಸರ್ಕಾರಿ ನೌಕರಿ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸಂಘಟನೆಯ ಪ್ರಮುಖ ನಂದನ ಬೋರ್ಕರ ಮಾತನಾಡಿ, ದಲಿತರು ಎಚ್ಚೆತ್ತುಕೊಳ್ಳದಿದ್ದರೆ ಮತ್ತಷ್ಟು ದೌರ್ಜನ್ಯ ನಡೆಯುತ್ತದೆ.
ಮೊದಲು ಜಾಗೃತರಾಗಬೇಕು. ಹಳ್ಳಿ ಹಳ್ಳಿಯಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟ ಮಾಡುವುದನ್ನು ಸ್ಥಗಿತಗೊಳಿಸಬೇಕು.
ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.
ಗ್ರೇಡ್-2 ತಹಸೀಲ್ದಾರ್ ಸಂತೋಷ ಭಂಡಾರಿ ಅವರಿಗೆ ಮನವಿ ಸಲ್ಲಿಸಿದರು. ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ತಿಮ್ಮಪ್ಪ ಎಂ.ಕೆ, ಪ್ರಧಾನ ಕಾರ್ಯದರ್ಶಿ ತೋಟಪ್ಪ ನಾಯ್ಕ, ಗುರುರಾಜ ಶಾನಭಾಗ, ಅಣ್ಣಪ್ಪ ಹಸ್ಲರ್ ಶಾನಬಾಳೇಗದ್ದೆ , ಗೋಪಾಲ ಕಾನಳ್ಳಿ, ಅನಂತ, ಮಂಜುನಾಥ ಹೊನ್ನಾವರ, ಸಂದೇಶ, ತಾಪಂ ಮಾಜಿ ಅಧ್ಯಕ್ಷೆ ಶಾಂತಿ ಹಸ್ಲರ್, ಹಾರ್ಸಿಕಟ್ಟಾ ಗ್ರಾಪಂ ಸದಸ್ಯೆ ವಿಶಾಲಾಕ್ಷಿ ಹಸ್ಲರ್, ಆಶಾ ಕುಡಗುಂದ,ಬಂಗಾರ್ಯ, ಮಹಾಲಕ್ಷ್ಮೀ, ಮಂಜುನಾಥ ಬಾಳೇಗದ್ದೆ ಪಾಲ್ಗೊಂಡಿದ್ದರು.