ಸಿದ್ದಾಪುರ ತಾಲೂಕಿನ ಕಾನಸೂರಿನ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಮಂಗಳವಾರ ವಿದ್ಯಾರ್ಥಿಯೊಬ್ಬನ ಸಾವಿನ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಪಾಲಕರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.  
ಉತ್ತರ ಕನ್ನಡ

Agraha ವಸತಿ ಶಾಲೆ ವಿದ್ಯಾರ್ಥಿ ಸಾವು ಸಮಗ್ರ ತನಿಖೆಗೆ ಆಗ್ರಹ

ಸಿದ್ದಾಪುರ: ತಾಲೂಕಿನ ಕಾನಸೂರಿನ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಮಂಗಳವಾರ ವಿದ್ಯಾರ್ಥಿಯೊಬ್ಬನ ಸಾವಿನ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಪಾಲಕರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಹಾರ್ಸಿಕಟ್ಟಾ ಸಮೀಪದ ಹುತ್ತಗಾರಿನ 10ನೇ ತರಗತಿ ವಿದ್ಯಾರ್ಥಿ ಗೋಕುಲ ಕೃಷ್ಣ ಗೌಡ ಶಾಲೆಯಲ್ಲಿ ಸಾವನ್ನಪ್ಪಿದ್ದು, ಮೃತನ ಸಾವಿನಲ್ಲಿ ಸಂಶಯವಿದೆ ಎಂದು ಪೊಲೀಸ್ ಠಾಣೆಯಲ್ಲಿ ಕುಟುಂಬಸ್ಥರು ದೂರು ನೀಡಿದ್ದಾರೆ. ಇದು ಕೇವಲ ಆತ್ಮಹತ್ಯೆ ಪ್ರಕರಣವೇ ಅಥವಾ ಬೇರೆ ಯಾವುದೇ ಕಾರಣವಿದೆಯೇ ಎಂಬ ಕುರಿತು ಸ್ಪಷ್ಟನೆ ನೀಡಬೇಕು. ಘಟನೆ ನಡೆದ ಸಂದರ್ಭ ಶಾಲೆಯ ಸಿಸಿ ಟಿವಿ ಕ್ಯಾಮರಾ ದೃಶ್ಯಾವಳಿಗಳನ್ನು ಪಾಲಕರಿಗೆ ತೋರಿಸಬೇಕು ಹಾಗೂ ಸಾವಿಗೆ ಕಾರಣವಾದ ನೈಜ ಸಂಗತಿಯನ್ನು ಬಹಿರಂಗಪಡಿಸಬೇಕು. ವಿದ್ಯಾರ್ಥಿಯ ಸಾವಿನ ಕುರಿತು ಹಲವು ಅನುಮಾನಗಳು ಮೂಡಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸ್ ಇಲಾಖೆ ಹಾಗೂ ಸಂಬಂಧಿಸಿದ ಅಧಿಕಾರಿಗಳು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಅಲ್ಲದೆ, ತನಿಖೆಯಲ್ಲಿ ಯಾರೇ ತಪ್ಪಿತಸ್ಥರು ಎಂದು ಕಂಡುಬಂದರೂ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಯಾವ ಕಾರಣಕ್ಕಾಗಿ ಸಾವನ್ನಪ್ಪಿದ್ದಾನೆ. ಉಳಿದ ವಿದ್ಯಾರ್ಥಿಗಳ ಅಥವಾ ಪಾಲಕರ ಒತ್ತಡವೋ ಎಂಬುದು ಬಹಿರಂಗಗೊಳ್ಳಬೇಕು. ವಿದ್ಯಾರ್ಥಿಯ ಸಾವಿನ ಕುರಿತು ಹಲವು ಅನುಮಾನಗಳು ಹುಟ್ಟಿಕೊಂಡಿವೆ. ವಸತಿ ನಿಲಯ ಮೇಲ್ವಿಚಾರಕರು ಏನು ಮಾಡುತ್ತಿದ್ದಾರೆ? ಶಿಕ್ಷಕರ ಮತ್ತು ವಸತಿ ಗೃಹದ ಮೇಲ್ವಿಚಾರಕರ ಮೇಲೆ ನಂಬಿಕೆ ಇಟ್ಟು ವಸತಿ ಶಾಲೆಗೆ ಮಕ್ಕಳನ್ನು ಕಳುಹಿಸುತ್ತೇವೆ. ಸಿಸಿ ಟಿವಿ ಕ್ಯಾಮರಾದ ದೃಶ್ಯವನ್ನು ತಂದೆ-ತಾಯಿಗೆ ತೋರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸಿದ್ದಾಪುರ ಠಾಣೆ ಸಿಪಿಐ ಜೆ.ಬಿ. ಸೀತಾರಾಮ, ತನಿಖಾ ಪಿಎಸ್‌ಐ ನಾಗಪ್ಪ ಬಿ. ಅವರು ಸಿಸಿ ಟಿವಿ ದೃಶ್ಯಾವಳಿಯನ್ನು ಎ್ಎಸ್‌ಎಲ್‌ಗೆ ಕಳುಹಿಸಲಾಗುವುದು. ಘಟನೆಯ ಕುರಿತು ಎಲ್ಲ ಆಯಾಮದಲ್ಲಿಯೂ ನಿಷ್ಪಕ್ಷಪಾತವಾಗಿ ಸಮಗ್ರ ತನಿಖೆ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕೇಶವಮೂರ್ತಿ ಅವರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಪೊಲೀಸ್ ಇಲಾಖೆಯನ್ನು ವಿನಂತಿಸಲಾಗಿದೆ. ಸಹಾಯಕ ಆಯುಕ್ತರು, ಶಾಸಕ ಭೀಮಣ್ಣ ನಾಯ್ಕ ಹಾಗೂ ಮೇಲಧಿಕಾರಿಗಳು ಭೇಟಿ ನೀಡಿ, ಸೂಕ್ತ ತನಿಖೆ ನಡೆಸಲು ಆದೇಶಿಸಿದ್ದಾರೆ. ಮಗ ಸಾವಿಗೆ ನ್ಯಾಯ ಖಂಡಿತ ಸಿಗುತ್ತದೆ ಎಂದು ಕುಟುಂಬಸ್ಥರಿಗೆ ಅವರು ಭರವಸೆ ನೀಡಿದ್ದಾರೆ.
ನನ್ನ ಮಗನ ಸಾವಿನಲ್ಲಿ ಹುಟ್ಟಿಕೊಂಡಿರುವ ಅನುಮಾನ ಸಾರ್ವಜನಿಕವಾಗಿ ಬಹಿರಂಗಗೊಳ್ಳಬೇಕು. ಪೊಲೀಸರು ಸೂಕ್ತ ತನಿಖೆ ನಡೆಸಿ, ಈ ಪ್ರಕರಣದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಮೃತ ವಿದ್ಯಾರ್ಥಿಯ ಪಾಲಕರು ಆಗ್ರಹಿಸಿದ್ದಾರೆ.
ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ ಅವರು ವಿದ್ಯಾರ್ಥಿಯ ಸಾವಿನ ಪ್ರಕರಣ ಕುರಿತು ಎಲ್ಲ ಆಯಾಮದಲ್ಲಿಯೂ ಪೊಲೀಸ್ ಇಲಾಖೆಯಿಂದ ವಿಶೇಷ ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಿದ್ದಾರೆ.