ಕಾರವಾರ ಬಾಯಿ ಕುವರಬಾಯಿ ಶಾಲೆಯ ಆವರಣದಲ್ಲಿ ನಿರ್ಮಾಣ ಮಾಡುವ ಬಸ್‌ ತಂಗುದಾಣ ಕಾಮಗಾರಿಗೆ ಎಸ್‌ಡಿಎಂಸಿ ಸದಸ್ಯರು ಆಕ್ಷೇಪಿಸಿದರು. 
ಉತ್ತರ ಕನ್ನಡ

ಬಸ್‌ ತಂಗುದಾಣ ಕಾಮಗಾರಿಗೆ ಡಿಸಿ ತಡೆ

ಸುಭಾಸ ಹೆಗಡೆ ಧೂಪದಹೊಂಡ

ಪ್ರಮುಖ ಮುಖ್ಯಾಂಶಗಳು

  • ಶಾಲಾ ಆವರಣದಲ್ಲಿ ಬಸ್‌ ತಂಗುದಾಣ ಕಾಮಗಾರಿಗೆ ನಗರಸಭೆ ಫೌಂಡೇಶನ್‌
  • ಪಾಲಕರು, ಎಸ್‌ಡಿಎಂಸಿ ಸದಸ್ಯರಿಂದ ಆಕ್ಷೇಪ
ಕಾರವಾರ: ಇಲ್ಲಿನ ಬಾಯಿ ಕುವರಬಾಯಿ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬಸ್ ತಂಗುದಾಣ ನಿರ್ಮಾಣಕ್ಕೆ ಎಸ್‌ಡಿಎಂಸಿ ಸದಸ್ಯರು ಹಾಗೂ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರು. ಸೋಮವಾರ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದ್ದು, ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರು ನಗರಸಭೆ ಪೌರಾಯುಕ್ತರಿಗೆ ಕರೆ ಮಾಡಿ, ತಕ್ಷಣ ಶಾಲೆಯ ಆವರಣ ಮತ್ತು ಫುಟ್‌ಪಾತ್‌ ಮೇಲೆ ನಿರ್ಮಾಣ ಮಾಡುತ್ತಿರುವ ಬಸ್‌ ತಂಗುದಾಣ ಕಾಮಗಾರಿ ನಿಲ್ಲಿಸುವಂತೆ ಆದೇಶಿಸಿದ್ದಾರೆ ಎಂದು ಬಾಯಿ, ಕುವರ ಬಾಯಿ ಶಾಲಾ ಸಂರಕ್ಷಣಾ ಸಮಿತಿಯ ಪ್ರಸಾದ ಕಾಮತ್‌ ತಿಳಿಸಿದ್ದಾರೆ.
ಪೊಲೀಸ್‌ ಠಾಣೆಗೆ ದೂರು
ಭಾನುವಾರ ಶಾಲೆಯ ಎದುರು ಸೇರಿದ ಪಾಲಕರು, ಸಂರಕ್ಷಣಾ ಇಲಾಖೆಯ ಹೆಸರಿನಲ್ಲಿ ಶಾಲೆಯ ಜಾಗವಿದೆ ಆದರೆ, ಶಿಕ್ಷಣ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೇ ನಗರಸಭೆ ಅಲ್ಲಿ ಬಸ್ ತಂಗುದಾಣ ನಿರ್ಮಾಣ ಮಾಡಲು ಹೊರಟಿದೆ. ಇದು ಕಾನೂನಿಗೆ ವಿರುದ್ಧವಾಗಿದೆ ಎಂದು ಕಾಮಗಾರಿ ತಡೆದರು. ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿ, ಕೆಲಸವನ್ನು ತಕ್ಷಣ ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ಮುಂದೆ ಕಾನೂನು ಸುವ್ಯವಸ್ಥೆಗೆ ತೊಂದರೆ ಉಂಟಾದರೆ, ಅದಕ್ಕೆ ನೀವೇ ಜವಾಬ್ದಾರರು ಎಂದು ಎಚ್ಚರಿಸಿದರು.
1905 ರ ಅವಽಯಲ್ಲಿ ಬಾಯಿ, ಕುವರಬಾಯಿ ಎಂಬುವವರ ಹೆಸರಿನಲ್ಲಿ ಅವರ ಮನೆಯವರು ಜಾಗವನ್ನು ದೇಣಿಗೆ ನೀಡಿದ್ದು, ಶಾಲೆ ನಡೆಸಲು ನಗರಸಭೆಯಲ್ಲಿ ಹಣವನ್ನು ಠೇವಣಿ ಇಟ್ಟಿದ್ದರು. ಆಗ ಶಿಕ್ಷಣ ಇಲಾಖೆ ಇಲ್ಲದ ಕಾರಣ ನಗರಸಭೆಯ ಅಡಿಯೇ ಎಲ್ಲ ವ್ಯವಹಾರಗಳು ನಡೆಯುತ್ತಿತ್ತು.
ನಂತರ ಶಾಲೆಯ ಜಾಗದ ವಿಚಾರವಾಗಿ ನಗರಸಭೆ ಹಾಗೂ ಬಾಯಿ, ಕುವರಬಾಯಿ ಹಿತ ರಕ್ಷಣಾ ಸಮಿತಿ ನಡುವೆ ನಡುವೆ ವಿವಾದ ನಡೆದು, ಹೈಕೋರ್ಟ್ನಲ್ಲಿ ದಾವೆ ಇತ್ತು. 2025 ರಲ್ಲಿ ದಾವೆ ಇತ್ಯರ್ಥವಾಗಿದೆ. ಶಾಲೆಯ ಜಾಗಕ್ಕೆ ನಗರಸಭೆ ಹೆಸರು ಹಾಕಿಕೊಳ್ಳಬಹುದು ಆದರೆ, ಅದನ್ನು ಶೈಕ್ಷಣಿಕ ಉದ್ದೇಶಕ್ಕೆ ಮಾತ್ರ ಬಳಸಬೇಕು ಎಂದು ಹೈಕೋರ್ಟ್ ಸ್ಪಷ್ಟವಾಗಿ ತೀರ್ಪು ನೀಡಿದೆ. ಹೈಕೋರ್ಟ್ ತೀರ್ಪಿನ ಬಳಿಕವೂ ಜಾಗ ನಗರಸಭೆಯ ಹೆಸರಿಗೆ ಬದಲಾಗಿಲ್ಲ.
ಈಗ ನಗರಸಭೆ ಆ ಜಾಗದಲ್ಲಿ ಶಿಕ್ಷಣ ಹೊರತಾಗಿ ಬೇರೆ ಕಾರ್ಯ ಮಾಡುತ್ತಿದೆ. ಆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಎಸ್‌ಡಿಎಂಸಿ ಅವರು ನಗರಸಭೆಗೆ ದೂರು ನೀಡಿದರೂ ಕಾಮಗಾರಿ ನಿಲ್ಲಿಸಿಲ್ಲ ಎಂದು ಎಂದು ಆರೋಪಿಸಿದರು. ಪ್ರಸಾದ ಕಾಮತ್,ಮಹೇಶ ಹರಿಕಂತ್ರ, ರೂಪೇಶ ನಾಯ್ಕ, ಜ್ಞಾನದೇವ, ಮಂಜು ಗುಡ್ಡನವರ್, ಪ್ರಕಾಶ ಹರಿಕಂತ್ರ, ವಿನೋದ ಹಾರ್ವಾಡೇಕರ್, ತಿಮ್ಮಪ್ಪ ಗೌಡ ಇತರರು ಇದ್ದರು.