ದಾಂಡೇಲಿ ನಗರಸಭೆ ಬಳಿ ಖಾಲಿ ಇರುವ ತಾಲೂಕು ಪಂಚಾಯಿತಿ ಕಚೇರಿ ಕಟ್ಟಡ.
- ದಾಂಡೇಲಿ, ಹಳಿಯಾಳ ಎರಡೂ ತಾಲೂಕಿಗೆ ಒಬ್ಬರೆ ಬಿಇಒ
- ಶಿಕ್ಷಕರು ಕೆಲಸ ಕಾರ್ಯಗಳಿಗೆ ಹಳಿಯಾಳಕ್ಕೆ ಹೋದರೆ ದಿನ ವ್ಯರ್ಥ
ದಾಂಡೇಲಿ: ಹಳಿಯಾಳವನ್ನು ವಿಭಜಿಸಿ ದಾಂಡೇಲಿಗೆ ತಾಲೂಕಿನ ಮಾನ್ಯತೆ ನೀಡಿ, ಹಲವು ವರ್ಷ ಕಳೆದರೂ ಇಲ್ಲಿ ಪ್ರತ್ಯೇಕ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಪ್ರಾರಂಭವಾಗಿಲ್ಲ.
ದಾಂಡೇಲಿ ಮತ್ತು ಹಳಿಯಾಳ ತಾಲೂಕು ಎರಡಕ್ಕೂ ಕೂಡ ಒಬ್ಬರೇ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಗಾಗಿ ಇಲ್ಲಿನ ಶಿಕ್ಷಕರು ಹಳಿಯಾಳದಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯವನ್ನೇ ಎಲ್ಲ ಕಾರ್ಯಗಳಿಗೆ ಅವಲಂಬಿಸಬೇಕಾಗಿದೆ.
ಹಲವು ವರ್ಷಗಳ ಹಿಂದೆಯೇ ದಾಂಡೇಲಿ ತಾಲೂಕಾಗಿ ಘೋಷಣೆಯಾಯಿತು. ನಂತರ ತಹಸೀಲ್ದಾರ್ ಕಚೇರಿ, ಸೇರಿ ಹಲವು ತಾಲೂಕು ಮಟ್ಟದ ಕಚೇರಿಗಳು ಸ್ಥಾಪನೆಯಾಗಿವೆ. ಆದರೆ, ಈವರೆಗೂ ಅವಶ್ಯವಾಗಿ ಬರಲೇ ಬೇಕಾಗಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಇನ್ನೂ ಬಂದಿಲ್ಲ. ಅದಕ್ಕೆ ಬೇಕಾದ ಹುದ್ದೆಗಳು ರಚನೆಯಾಗಿಲ್ಲ.
ತಾಲೂಕು ವ್ಯಾಪ್ತಿಯಲ್ಲಿ ಸರ್ಕಾರಿ, ಅನುದಾನಿತ, ಅನುದಾನ ರಹಿತ ಸೇರಿದಂತೆ ಸುಮಾರು 65ಕ್ಕೂ ಹೆಚ್ಚು ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿವೆ. ಪ್ರಾಥಮಿಕ ಶಾಲಾ ವಿಭಾಗದಲ್ಲಿ 170 ಶಿಕ್ಷಕರು, ಪ್ರೌಢಶಾಲಾ ವಿಭಾಗದಲ್ಲಿ 75ಕ್ಕೂ ಹೆಚ್ಚು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರೆಲ್ಲರೂ ತಮ್ಮ ಶೈಕ್ಷಣಿಕ ಕೆಲಸಗಳಿಗೆ ತಾಲೂಕಿನಿಂದ ಸುಮಾರು 24 ಕಿ.ಮೀ. ದೂರದ ಹಳಿಯಾಳದಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯವನ್ನೇ ಅವಲಂಬಿಸಬೇಕಿದೆ. ಕೆಲಸಕ್ಕಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಕ್ಕೆ ಹೋಗಿ ಬರಬೇಕೆಂದರೆ ಒಂದು ದಿನ ವ್ಯರ್ಥ. ಹಾಗಾಗಿ, ದಾಂಡೇಲಿಯಲ್ಲಿ ತಕ್ಷಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯವನ್ನು ಮಂಜೂರು ಮಾಡಿ, ಸಿಬ್ಬಂದಿ ನೇಮಿಸಬೇಕೆಂಬುದು ಶಿಕ್ಷಕರ ಆಗ್ರಹವಾಗಿದೆ.
ಬಿಇಒ ಕಚೇರಿ ಇಲ್ಲದಿರುವುದು ಎಸ್‌ಎಸ್‌ಎಲ್‌ಸಿ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿದೆ. ಕಳೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ದಾಂಡೇಲಿಯನ್ನು ಒಳಗೊಂಡ ಹಳಿಯಾಳ ತಾಲೂಕು ಐದನೆಯ ಎಂದರೆ ಕೊನೆಯಿಂದ ಎರಡನೇ ಸ್ಥಾನ ಪಡೆದಿದೆ. ಪ್ರತ್ಯೇಕ ಬಿಇಒ ಇದ್ದರೆ ಇನ್ನಷ್ಟು ಕಾಳಜಿ ಸಾಧ್ಯವಾಗುತ್ತಿತ್ತು ಎಂಬುದು ಪಾಲಕರ ಅಭಿಪ್ರಾಯ.
ಸ್ಥಳಾವಕಾಶ: ಒಂದೊಮ್ಮೆ ದಾಂಡೇಲಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಂಜೂರಾದರೂ ಕಚೇರಿ ಕಟ್ಟಡಕ್ಕೆ ಸಾಕಷ್ಟು ಸ್ಥಳಾವಕಾಶವಿದೆ. ನಗರ ಸಭೆ ಕಾರ್ಯಾಲಯ ಹೊಸ ಕಟ್ಟಡಕ್ಕೆ ಸ್ಥಳಾಂತರ ಆಗಿರುವುದರಿಂದ ಪಕ್ಕದ ಹಳೆಯ ಕಟ್ಟಡದಲ್ಲಿ ಸಾಕಷ್ಟು ಕೊಠಡಿಗಳು ಖಾಲಿ ಇವೆ. ಈ ಹಿಂದೆ ಇದ್ದ ತಾಲೂಕು ಪಂಚಾಯಿತಿ ಕಾರ್ಯಾಲಯ ಕೂಡ ಖಾಲಿ ಇದೆ. ತಾಲೂಕು ಆಡಳಿತಸೌಧದಲ್ಲಿ ಕೂಡ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಆರಂಭಿಸಲು ಸ್ಥಳಾವಕಾಶವಿದೆ. ಸರ್ಕಾರಕ್ಕೆ ಹಲವು ಬಾರಿ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. ಆದರೆ, ಸರ್ಕಾರ ಮಂಜೂರು ಮಾಡಬೇಕಷ್ಟೆ ಎನ್ನುವ ಕೂಗು ಶಿಕ್ಷಕರದ್ದಾಗಿದೆ. ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಇತ್ತ ಕಡೆ ಸ್ವಲ್ಪ ಗಮನಹರಿಸಬೇಕಾಗಿದೆ. "
ಪ್ರತ್ಯೇಕ ತಾಲೂಕು ಘೋಷಣೆಯಾದ ನಂತರ ಒಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಆಗಲೇ ಬೇಕಿತ್ತು. ವಿದ್ಯಾರ್ಥಿಗಳು, ಶಿಕ್ಷಕರು ದಾಂಡೇಲಿಯಿಂದ ಶಿಕ್ಷಣ ಇಲಾಖೆಯ ಕೆಲಸ ಅಥವಾ ವೈಯಕ್ತಿಕ ಕೆಲಸಕ್ಕಾಗಿ ಹಳಿಯಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಕ್ಕೆ ಹೋಗಿ ಬರಲು ಸಮಯ ವ್ಯರ್ಥವಾಗುತ್ತದೆ. ನಮ್ಮ ತಾಲೂಕಿನಲ್ಲಿಯೇ ಶಿಕ್ಷಣಾಧಿಕಾರಿಗಳ ಕಾರ್ಯಾಲಯವಿದ್ದರೆ ಕೆಲಸಕ್ಕೂ ಅನುಕೂಲ. ಜತೆಗೆ ಇತರ ಅಭಿವೃದ್ಧಿ ಕಾರ್ಯಗಳಿಗೂ ಅನುಕೂಲವಾಗುತ್ತದೆ. ರತ್ನದೀಪಾ ಎನ್.ಎಂ.ವಕೀಲರು ಹಾಗೂ ಜನವಾದಿ ಮಹಿಳಾ ಸಂಘಟನೆ ಅಧ್ಯಕ್ಷೆ
"
ದಾಂಡೇಲಿಯಲ್ಲಿ ಪ್ರತ್ಯೇಕ ಬಿಇಒ ಕಚೇರಿ ಸ್ಥಾಪಿಸುವ ಪ್ರಸ್ತಾವ ಸರ್ಕಾರದ ಮಟ್ಟದಲ್ಲಿದೆ. ನಮ್ಮಿಂದ ಪ್ರಸ್ತಾವನೆ ಹೋಗಿದೆ. ಸದ್ಯ ಹಳಿಯಾಳದ ಜತೆಗೆ ದಾಂಡೇಲಿ ಸೇರಿಸಿ, ಕಾರ್ಯ ನಿರ್ವಹಣೆ ಮಾಡುತ್ತಿದ್ದೇವೆ. ಡಿ.ಆರ್. ನಾಯ್ಕಡಿಡಿಪಿಐ, ಶಿರಸಿ ಶೈಕ್ಷಣಿಕ ಜಿಲ್ಲೆ