ಸೂಪಾ ವಿದ್ಯುದಾಗಾರ  
ಉತ್ತರ ಕನ್ನಡ

ಖಾಲಿಯಾಗುತ್ತಿವೆ ಅಣೆಕಟ್ಟೆಗಳು-ವಿದ್ಯುತ್‌ ಉತ್ಪಾದನೆಗೆ ಸಮಸ್ಯೆ..?

ಸುಭಾಸ ಧೂಪದಹೊಂಡ ಕಾರವಾರ: ರಾಜ್ಯದ ವಿದ್ಯುತ್ ಗ್ರಿಡ್‌ಗೆ ಮಹತ್ವದ ಕೊಡುಗೆ ನೀಡುತ್ತಿದ್ದ ಜಿಲ್ಲೆಯ ಜಲಾಶಯಗಳು ಈ ಬಾರಿ ಮಳೆಯ ಕೊರತೆಯಿಂದ ಬರಿದಾಗುತ್ತಿವೆ.ಅವುಗಳನ್ನು ಅವಲಂಬಿಸಿರುವ ವಿದ್ಯುದಾಗಾರಗಳ ಸರಾಸರಿ ವಿದ್ಯುತ್ ಉತ್ಪಾದನಾ ಪ್ರಮಾಣ ಕಡಿಮೆಯಾಗುತ್ತಿದೆ.

ರಾಜ್ಯದಲ್ಲಿ ಉತ್ಪಾದನೆಯಾಗುವ ಒಟ್ಟಾರೆ ಜಲ ವಿದ್ಯುತ್‌ನ ಶೇ.41 ರಷ್ಟು ಉತ್ತರ ಕನ್ನಡದಲ್ಲೇ ಆಗುತ್ತದೆ. ರಾಜ್ಯದಲ್ಲಿ ಕೆಪಿಸಿ 21 ಪ್ರಮುಖ ಜಲವಿದ್ಯುದಾಗಾರಗಳನ್ನು ಹೊಂದಿದೆ. ಅವುಗಳ ಒಟ್ಟಾರೆ ಸಾಮರ್ಥ್ಯ 3679 ಮೆಗಾವಾಟ್‌ಗಳಾಗಿವೆ. ಅದರಲ್ಲಿ 1510 ಮೆಗಾವಾಟ್ ಸಾಮರ್ಥ್ಯದ ವಿದ್ಯುತ್ ಘಟಕಗಳು ಉತ್ತರ ಕನ್ನಡದಲ್ಲೇ ಇವೆ. ಜಿಲ್ಲೆಯಲ್ಲಿ ಕಾಳಿ ಹಾಗೂ ಶರಾವತಿ ಎರಡು ಜಲ ವಿದ್ಯುತ್ ಯೋಜನೆಗಳಿವೆ. ಕಾಳಿ ಜಲವಿದ್ಯುತ್ ಯೋಜನೆಯಡಿ ಒಟ್ಟು ನಾಲ್ಕು ವಿದ್ಯುದಾಗಾರಗಳು ಹಾಗೂ ಶರಾವತಿ ಯೋಜನೆಯಡಿ 1 ವಿದ್ಯುದಾಗಾರವಿದೆ. ವರ್ಷಕ್ಕೆ ಇವು ಸುಮಾರು 6000 ಮಿಲಿಯನ್ ಯೂನಿಟ್ ವಿದ್ಯುತ್‌ನ್ನು ರಾಜ್ಯದ ಗ್ರಿಡ್‌ಗೆ ಉತ್ಪಾದಿಸಿಕೊಡುತ್ತವೆ.

ಶೇ.51 ರಷ್ಟು ಮಾತ್ರ ನೀರು!

ಈ ಬಾರಿ ಜಿಲ್ಲೆಯಲ್ಲಿ ಶೇ. 34 ರಷ್ಟು ಮಳೆಯ ಕೊರತೆ ಉಂಟಾಗಿದೆ. ಪ್ರಮುಖವಾಗಿ ಕಾಳಿ ನದಿಯ ಅಣೆಕಟ್ಟೆಗಳ ಜಲಾನಯನ ಪ್ರದೇಶದಲ್ಲಿ ಶೇ. 50 ರಷ್ಟು ಮಳೆಯ ಕೊರತೆ ಉಂಟಾಗಿದೆ. ಕಾಳಿ ಜಲ ವಿದ್ಯುತ್ ಯೋಜನೆಯ ಪ್ರಮುಖ ಜಲಾಶಯ ಸೂಪಾದಲ್ಲಿ 145.33 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯವಿದೆ. ಸದ್ಯ ಜಲಾಶಯದಲ್ಲಿ 74.35 ಟಿಎಂಸಿ ಎಂದರೆ ಒಟ್ಟಾರೆ ಸಾಮರ್ಥ್ಯದ ಶೇ.51 ರಷ್ಟು ಮಾತ್ರ ನೀರಿದೆ. ಕಳೆದ ವರ್ಷ ಈ ಅವಧಿಯಲ್ಲಿ 121.46 ಟಿಎಂಸಿ ನೀರಿತ್ತು.

ಉತ್ಪಾದನೆ ಇಳಿಮುಖ:

ರಾಜ್ಯದ ಒಟ್ಟಾರೆ ವಿದ್ಯುತ್ ಬೇಡಿಕೆಯನ್ನು ಆಧರಿಸಿ ಬೆಂಗಳೂರಿನ ಲೋಡ್ ಡಿಸ್‌ಪ್ಯಾಚ್ ಸೆಂಟರ್ ಯಾವ ವಿದ್ಯುದಾಗಾರದಲ್ಲಿ ಎಷ್ಟು ವಿದ್ಯುತ್ ಉತ್ಪಾದನೆ ಮಾಡಬೇಕು ಎಂಬುದನ್ನು ನಿರ್ಧರಿಸುತ್ತದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಜಲಾಶಯಗಳು ತುಂಬಿ ನೀರನ್ನು ಹೊರ ಬಿಡಬೇಕಾಗುತ್ತದೆ. ಇದರಿಂದ ಆ ಅವಽಯಲ್ಲಿ ಇಲ್ಲಿನ ವಿದ್ಯುದಾಗಾರಗಳಿಂದ ಹೆಚ್ಚುವರಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಬೇಸಿಗೆಯಲ್ಲಿ ಉಷ್ಣ, ಸೋಲಾರ್ ಮುಂತಾವುಗಳ ಮೇಲೆ ಆಶ್ರಯ ಹೆಚ್ಚುತ್ತದೆ. ಆದರೆ ಈ ಬಾರಿ ಮಳೆಗಾಲದಲ್ಲಿ ಯಾವುದೇ ಅಣೆಕಟ್ಟೆಯಿಂದ ನೀರನ್ನು ಹೊರಬಿಡುವ ಪ್ರಸಂಗ ಬಂದಿಲ್ಲ. ಜಲವಿದ್ಯುದಾಗಾರಗಳಿಂದ ಹೆಚ್ಚುವರಿ ವಿದ್ಯುತ್ ಉತ್ಪಾದನೆಯಾಗಿಲ್ಲ.

ಈ ಬಾರಿ ನೀರಿನ ಕೊರತೆ ಇರುವುದರಿಂದ ಭೇಸಿಗೆಯ ತುರ್ತು ಸಂದರ್ಭಗಳಿಗೆ ನೀರನ್ನು ಉಳಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಇರುವುದರಿಂದ ಜಲವಿದ್ಯುದಾಗಾರಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲಾಗಿದೆ. ಕಾಳಿ ಜಲ ವಿದ್ಯುತ್ ಯೋಜನೆಯ ಪ್ರಮುಖ ವಿದ್ಯುದಾಗಾರ ನಾಗಝರಿ ಪವರ್ ಹೌಸ್(ಎನ್‌ಪಿಎಚ್) ದಿನಕ್ಕೆ 8 ರಿಂದ 10 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸಲಾಗುತ್ತಿತ್ತು. ಆದರೆ, ಈ ಬಾರಿ ಉತ್ಪಾದನೆಯನ್ನು 3 ರಿಂದ 4 ಯೂನಿಟ್‌ಗೆ ಕೆಲ ದಿನ 1 ಮಿಲಿಯನ್ ಯೂನಿಟ್‌ಗೆ ಸೀಮಿತಗೊಳಿಸಲಾಗಿದೆ.

ಕನಿಷ್ಠ ಮಟ್ಟ ಅನಿವಾರ್ಯ

ಕಾರವಾರದ ಕದ್ರಾ ಜಲಶಯದದ ಗರಿಷ್ಠ ಮಟ್ಟವು 34.50 ಮೀಟರ್ ಆಗಿದೆ. ಸದ್ಯ ಅಣೆಕಟ್ಟೆಯಲ್ಲಿ 30.18 ಮೀಟರ್ ನೀರಿದೆ. ಈ ಜಲಾಶಯದಿಂದ ಕೈಗಾ ಅಣು ವಿದ್ಯುತ್ ಸ್ಥಾವರಕ್ಕೆ ನೀರು ಒದಗಿಸುವುದರಿಂದ ನೀರಿನ ಮಟ್ಟವನ್ನು 29 ಮೀಟರ್‌ಗಿಂತ ಕೆಳಗೆ ಇಳಿಸುವಂತಿಲ್ಲ. ಇನ್ನೂ ಕನಿಷ್ಠ 7 ತಿಂಗಳು ನೀರಿನ ಮಟ್ಟವನ್ನು ಕಾಯ್ದುಕೊಂಡು ಹೋಗಬೇಕಾಗಿರುವುದರಿಂದ ಇಲ್ಲಿ ವಿದ್ಯುತ್ ಉತ್ಪಾದನೆಯನ್ನು ಕಡಿಮೆ ಮಾಡಲಾಗಿದೆ.

ಕುಡಿಯುವ ನೀರು, ಪ್ರವಾಸೋದ್ಯಮಕ್ಕೂ ಸಮಸ್ಯೆ

ಕಾಳಿನದಿಯ ಜಲಾಶಯಗಳಿಂದ ನೇರವಾಗಿ ಕೃಷಿಗೆ ನೀರು ಪೂರೈಕೆ ಮಾಡುವ ವ್ಯವಸ್ಥೆ ಇಲ್ಲ. ಆದರೆ, ನೀರು ಕಡಿಮೆಯಾದರೆ ಹಲವು ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗಳು ಹಾಗೂ ಪ್ರವಾಸೋದ್ಯಮಕ್ಕೆ ತೊಂದರೆ ಉಂಟಾಗುವ ಆತಂಕವಿದೆ.

ಹಳಿಯಾಳ, ದಾಂಡೇಲಿ ಹಾಗೂ ಜೊಯಿಡಾದಲ್ಲಿ ಹಲವು ಕುಡಿಯುವ ನೀರಿನ ಯೋಜನೆಗಳಿಗೆ ಕಾಳಿ ನದಿಯೇ ಆಶ್ರಯವಾಗಿದೆ.

ಕಾರವಾರದ ಎರಡು ಪ್ರಮುಖ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಕಾಳಿ ನದಿ ನೀರನ್ನು ಆಶ್ರಯಿಸಿವೆ. ಕದ್ರಾ ಜಲಾಶಯದಿಂದ ನೀರು ಬಿಡುಗಡೆ ಮಾಡುವುದು ಕಡಿಮೆಯಾದರೆ ಸಮುದ್ರದ ಉಪು÷್ಪ ನೀರು ಮೇಲಕ್ಕೇರುತ್ತದೆ. ಇದರಿಂದ ಕೆರವಡಿ ಹಾಗೂ ಗೋಟೆಗಾಳಿ ಯೋಜನೆಗಳ ನೀರನ್ನು ಬಳಸುವ ಸುಮಾರು 10 ಗ್ರಾಪಂಗಳಿಗೆ ಉಪು÷್ಪ ನೀರು ವಿತರಣೆ ಮಾಡಬೇಕಾದ ಪರಿಸ್ಥಿತಿ ಬರುತ್ತದೆ.

ಸೂಪಾ ಜಲಾಶಯದ ಕೆಳಗೆ ಗಣೇಶಗುಡಿಯಲ್ಲಿ ಜಲ ಸಾಹಸ ಕ್ರೀಡೆಗಳು ಪ್ರಸಿದ್ಧವಾಗಿವೆ. ಸೂಪಾ ಜಲಾಶಯದಿಂದ ವಿದ್ಯುತ್ ಉತ್ಪಾದನೆ ಮಾಡಿ ನೀರು ಬಿಟ್ಟರೆ ಜಲಸಾಹಸ ಕ್ರೀಡೆಗಳಿಗೆ ಅನುಕೂಲ. ಆದರೆ, ಈ ಬಾರಿ ಬೇಸಿಗೆಯಲ್ಲಿ ನೀರು ಬಿಡುಗಡೆ ಮಾಡದೇ ಇದ್ದಲ್ಲಿ ಪ್ರವಾಸೋದ್ಯಮಕ್ಕೂ ಅನನುಕೂಲವಾಗುವ ಆತಂಕವಿದೆ.

ನಾಗಝರಿ ಪವರ್ ಹೌಸ್ ಉತ್ಪಾದನೆ (ನವೆಂಬರ್‌ನಿಂದ ನವೆಂಬರ್‌ವರೆಗೆ ಮಿಲಿಯನ್ ಯೂನಿಟ್‌ನಲ್ಲಿ)

  • 2023-24-4526

  • 2024-25-6114

  • 2025-26-5474

.........

  • ನಾಗಝರಿ-1379.23

  • ಕದ್ರಾ -200.91

  • ಕೊಡಸಳ್ಳಿ-172.44

  • ಸೂಪಾ-208.63

  • ಗೇರುಸೊಪ್ಪ-234.82

    ..............