ವಿದ್ಯುತ್ ಕಡಿತ (power-cut)
- ಅನಿಯಮಿತ ವಿದ್ಯುತ್ ವ್ಯತ್ಯಯದಿಂದ ಕಂಗೆಟ್ಟ ಹೊನ್ನಾವರ
- ಹೆಸ್ಕಾಂ ವಿರುದ್ಧ ಸಾರ್ವಜನಿಕರ ಆಕ್ರೋಶ
ಬೇಸಿಗೆಯ ತೀವ್ರ ಬಿಸಿಲಿನ ನಡುವೆ ಪದೇಪದೆ ವಿದ್ಯುತ್ ಕಡಿತ (power-cut), ಅನಿಯಮಿತ ವಿದ್ಯುತ್ ವ್ಯತ್ಯಯದಿಂದ ಎಲ್ಲ ವ್ಯವಹಾರಗಳಿಗೆ ಹೊಡೆತ ಬಿದ್ದಿದೆ. ತಾಲೂಕಿನಲ್ಲಿ ಕಳೆದ ಕೆಲವು ದಿನಗಳಿಂದ ಯಾವುದೇ ಮುನ್ಸೂಚನೆ ನೀಡದೆ ಪದೇ ವಿದ್ಯುತ್ ಸ್ಥಗಿತಗೊಳಿಸುತ್ತಿರುವ ಹೆಸ್ಕಾಂ ವಿರುದ್ಧ ಜನರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪ್ರತಿದಿನ ಹತ್ತಾರು ಬಾರಿ ವಿದ್ಯುತ್ ಕಡಿತಗೊಳಿಸಿ ಮತ್ತೆ ಸಂಪರ್ಕ ನೀಡಲಾಗುತ್ತಿದೆ. ಇದರಿಂದ ವಿದ್ಯುತ್ ನಂಬಿ ಬದುಕುತ್ತಿರುವ ಸಣ್ಣ ವ್ಯಾಪಾರಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಮುನ್ಸೂಚನೆ ಇಲ್ಲದೇ ಪದೇಪದೆ ವಿದ್ಯುತ್ ಹೋಗುವುದರಿಂದ ಯಂತ್ರೋಪಕರಣಗಳಿಗೆ ತೊಂದರೆಯಾಗುತ್ತಿದೆ. ಕಂಪ್ಯೂಟರ್‌ಗಳು, ಪ್ರಿಂಟರ್‌ಗಳು ಹಾಳಾಗುತ್ತಿವೆ. ತಂಪು ಪಾನೀಯ ವ್ಯಾಪಾರಸ್ಥರು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಅಲ್ಲದೇ ಬೇಸಿಗೆಯ ತೀವ್ರ ಬಿಸಿಲಿನ ನಡುವೆ ರಾತ್ರಿ ವೇಳೆಯೂ ಗಂಟೆಗಟ್ಟಲೆ ವಿದ್ಯುತ್ ಕಡಿತವಾಗುತ್ತಿರುವುದು ಜನರ ನಿದ್ರೆಗೆಡಿಸಿದೆ.
ಕರಾವಳಿ ಭಾಗದಲ್ಲಿ ಈ ಬಾರಿ ಉಷ್ಣಾಂಶ ಹೆಚ್ಚಾಗಿದೆ. ಬಿಸಿಗಾಳಿ ಒಂದೆಡೆ, ಇನ್ನೊಂದೆಡೆ ವಿದ್ಯುತ್ ವ್ಯತ್ಯಯ, ತೀವ್ರ ಸೆಖೆಯಿಂದಾಗಿ ಚಿಕ್ಕ ಮಕ್ಕಳು, ಅನಾರೋಗ್ಯ ಪೀಡಿತರು ಮತ್ತು ವಯೋವೃದ್ಧರು ಸಮಸ್ಯೆ ಅನುಭವಿಸುತ್ತಿದ್ದಾರೆ. ಉಸಿರಾಟದ ತೊಂದರೆ ಮತ್ತು ಇತರ ಆರೋಗ್ಯ ಸಮಸ್ಯೆಗಳಿರುವ ರೋಗಿಗಳಿಗೆ ಗಾಳಿ ಮತ್ತು ಬೆಳಕಿನ ವ್ಯವಸ್ಥೆ ಇಲ್ಲದೆ ತೊಂದರೆಯಾಗುತ್ತಿದೆ. ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ವಿದ್ಯುತ್ ಕಡಿತ ದೊಡ್ಡ ಅಡ್ಡಿಯಾಗಿ ಪರಿಣಮಿಸಿದೆ.
ಕೃಷಿಗೆ ತೊಂದರೆ: ಗ್ರಾಮೀಣ ಭಾಗದಲ್ಲಿ ವಿದ್ಯುತ್ ವ್ಯತ್ಯಯದಿಂದಾಗಿ ರೈತರಿಗೆ ಸಮಸ್ಯೆ ಆಗಿದೆ. ಪ್ರಮುಖವಾಗಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಸಿಗದೆ ರೈತರ ಕೃಷಿ ಕಾರ್ಯಗಳು ಕುಂಠಿತಗೊಂಡಿವೆ. ಇದರಿಂದ ಕೃಷಿ ತೋಟಗಳು ನೀರಿಲ್ಲದೇ ಬಣಗುಡುತ್ತಿದ್ದು, ಬೆಳೆ ಕುಂಠಿತವಾಗಿದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ವಿದ್ಯುತ್ ಇಲ್ಲದೆ ಕುಡಿಯುವ ನೀರಿನ ಪೂರೈಕೆಯಲ್ಲೂ ವ್ಯತ್ಯಯ ಉಂಟಾಗಿದ್ದು, ಜನಸಾಮಾನ್ಯರು ದೈನಂದಿನ ಕೆಲಸಗಳಿಗೂ ಪರದಾಡುವಂತಾಗಿದೆ. ವಿದ್ಯುತ್ ಇಲಾಖೆಯು ಅನಿವಾರ್ಯ ಸಂದರ್ಭಗಳಲ್ಲಿ ವಿದ್ಯುತ್ ಕಡಿತ ಮಾಡುವ ಮುನ್ನ ಸಾರ್ವಜನಿಕರಿಗೆ ಮಾಹಿತಿ ನೀಡುವ ಸೌಜನ್ಯವನ್ನೂ ತೋರುತ್ತಿಲ್ಲ. ಈ ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದರು ಸಾರ್ವಜನಿಕರು ಆಗ್ರಹಿಸಿದ್ದಾರೆ.
"
ಹೆಸ್ಕಾಂ ಅಧಿಕಾರಿಗಳು ಮುನ್ಸೂಚನೆ ನೀಡದೇ ಹೆಚ್ಚು ಸಮಯ ವಿದ್ಯುತ್ ತೆಗೆಯುತ್ತಿರುವುದರಿಂದ ಎಲ್ಲರಿಗೂ ತೊಂದರೆಯಾಗುತ್ತಿದೆ. ಈ ಸಮಸ್ಯೆಯಿಂದ ತಂಪು ಪಾನೀಯ ವ್ಯಾಪಾರಸ್ಥರು ಮತ್ತು ಸಣ್ಣ ವ್ಯಾಪಾರಿಗಳು ಆರ್ಥಿಕ ನಷ್ಟ ಅನುಭವಿಸುವಂತಾಗಿದೆ.
— ನಾಗರಾಜ ಕೊಳಗದ್ದೆ, ತಂಪುಪಾನೀಯ ವ್ಯಾಪಾರಿ
ಹೊನ್ನಾವರದಲ್ಲಿ ಮನಬಂದಂತೆ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಇದರಿಂದ ಜೆರಾಕ್ಸ್ ಸೆಂಟರ್‌ಗಳಿಗೆ ತೀವ್ರ ತೊಂದರೆಯಾಗುತ್ತಿದೆ. ವಿದ್ಯುತ್ ಬಂದು ಹೋಗುವುದರಿಂದ ಪ್ರಿಂಟರ್‌ಗಳು ಹಾಳಾಗುತ್ತಿವೆ. ಸಣ್ಣ ವ್ಯಾಪಾರಿಗಳಿಗೆ ನಷ್ಟ ಉಂಟಾಗುತ್ತಿದೆ.’’
— ವಿವೇಕ್ ಆರೊಳ್ಳಿ, ಜೆರಾಕ್ಸ್ ಸೆಂಟರ್ ಮಾಲೀಕ
"
ಪದೇಪದೇ ವಿದ್ಯುತ್ ತೆಗೆಯಲಾಗುತ್ತಿರುವುದರಿಂದ ಮನೆಯಲ್ಲಿ ಅಡುಗೆ ಮಾಡುವುದು ಕಷ್ಟವಾಗುತ್ತಿದೆ. ವಿದ್ಯುತ್ ಇಲ್ಲದೇ ಮಿಕ್ಸರ್ ಗ್ರಾೃಂಡರ್ ಬಳಸಲು ಆಗುತ್ತಿಲ್ಲ. ಅಲ್ಲದೇ ವಾಷಿಂಗ್ ಮಿಷನ್‌ಗೂ ಹಾನಿಯಾಗುತ್ತಿದೆ. ಸಮಸ್ಯೆ ಬಗೆಹರಿಸಲು ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು.
— ಸುನೀತಾ ಹೊನ್ನಾವರ, ಗೃಹಿಣಿ
"
ಸಾಮರ್ಥ್ಯಕ್ಕಿಂತ ಹೆಚ್ಚು ಭಾರ (ಓವರ್‌ಲೋಡ್) ಸಮಸ್ಯೆಯಿಂದ ವಿದ್ಯುತ್ ಕಡಿತ ಮಾಡುವ ಅನಿವಾರ್ಯತೆ ಉಂಟಾಗಿದೆ. ಹೊನ್ನಾವರ ತಾಲೂಕಿನ ಗ್ರಾಮೀಣ ಭಾಗದಲ್ಲಿ ಟ್ರಾನ್ಸ್‌ಫಾರ್ಮರ್‌ಗಳನ್ನು ಮೇಲ್ದರ್ಜೆಗೆ ಏರಿಸಿದರೆ ಓವರ್‌ಲೋಡ್ ಸಮಸ್ಯೆ ಕಡಿಮೆಯಾಗುತ್ತದೆ. ಶಿರಸಿಯಿಂದ ಬರುವ ಮುಖ್ಯ ಸರಬರಾಜು ಘಟಕದಲ್ಲಿ ಸಮಸ್ಯೆ ಆಗುವುದರಿಂದಲೂ ಆಗಾಗ ವಿದ್ಯುತ್ ಕಡಿತ ಆಗುತ್ತಿದೆ. ತಾಲೂಕಿನಲ್ಲಿ ಅತ್ಯಂತ್ ಹಳೆಯ ವಿದ್ಯುತ್ ಲೈನ್ ಇದೆ. ಇದರಿಂದಾಗಿ ಆಗಾಗ ಟ್ರಿಪ್ ಆಗಿ ವಿದ್ಯುತ್ ಕಡಿತ ಆಗುತ್ತಿದೆ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಡಬಲ್ ಸರ್ಕ್ಯೂಟ್ ಮಾರ್ಗವಿದ್ದರೂ ಹೊನ್ನಾವರ ಕುಮಟಾ ಮತ್ತು ಮುರ್ಡೇಶ್ವರ ಭಾಗದಲ್ಲಿ ಸಿಂಗಲ್ ಸರ್ಕ್ಯೂಟ್ 110 ಕವಿ ಮಾರ್ಗವಿರುವುದರಿಂದ ಆಗಾಗ ಜಂಪ್ ಕಟ್ ಆಗಿ ವಿದ್ಯುತ್ ಹೋಗುತ್ತದೆ. ವಿದ್ಯುತ್ ಮಾರ್ಗಕ್ಕೆ ಸಂಬಂಧಿಸಿ ಕೆಲವು ಕಾಮಗಾರಿಗಳು ಟೆಂಡರ್ ಕರೆದರೂ ಟೆಂಡರ್ ಪ್ರಕ್ರಿಯೆಯಲ್ಲಿ ಸಮಸ್ಯೆ ಆಗಿದ್ದು, ಗುತ್ತಿಗೆದಾರರಿಲ್ಲದೇ ಕಾಮಗಾರಿ ನಡೆಯುತ್ತಿಲ್ಲ.
— ರಾಮಕೃಷ್ಣ ಭಟ್, ಹೆಸ್ಕಾಂ ಎಇಇ