ಕಾರವಾರ ಸೈಕಲ್‌ ಕ್ಲಬ್‌ ಸದಸ್ಯರು  
ಉತ್ತರ ಕನ್ನಡ

ಕ್ಯಾನ್ಸರ್‌ ಪೀಡಿದ ಮಕ್ಕಳ ನೆರವೀಗಾಗಿ 40 ದಿನಗಳಲ್ಲಿ ಒಟ್ಟು 62,428 ಕಿಲೋಮೀಟರ್ ಸೈಕ್ಲಿಂಗ್

ಕಾರವಾರ: ಮಕ್ಕಳ ಕ್ಯಾನ್ಸರ್ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ ದೇಶದಾದ್ಯಂತ ಆಯೋಜಿಸಲಾದ ಕ್ಯಾಂಕಿಡ್ಸ್ ಸೈಕಲ್ ಫಾರ್ ಗೋಲ್ಡ್ ಅಭಿಯಾನದಲ್ಲಿ ಕಾರವಾರ ಬೈಸಿಕಲ್ ಕ್ಲಬ್ ಸದಸ್ಯರು ಗಮನಾರ್ಹ ಸಾಧನೆ ಮಾಡಿದ್ದಾರೆ.
ಕೇವಲ 40 ದಿನಗಳಲ್ಲಿ ಒಟ್ಟು 62,428 ಕಿಲೋಮೀಟರ್ ಸೈಕ್ಲಿಂಗ್ ಮಾಡಿ ಮಹತ್ವದ ಮೈಲಿಗಲ್ಲು ಸಾಽಸಿರುವ ಕ್ಲಬ್, ದೇಶದಲ್ಲಿ 4ನೇ ಸ್ಥಾನ ಪಡೆಯಲು ಯಶಸ್ವಿಯಾಗಿದೆ. ಈ ಅಭಿಯಾನದಲ್ಲಿ ಒಟ್ಟು 54 ಸೈಕ್ಲಿಸ್ಟ್ಗಳು ಭಾಗವಹಿಸಿದ್ದರು.
ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಸಹಾಯ ಹಾಗೂ ಸಮಾಜದಲ್ಲಿ ಬಾಲ್ಯ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಅಭಿಯಾನವನ್ನು ದೇಶದಾದ್ಯಂತ ಹಮ್ಮಿಕೊಳ್ಳಲಾಗಿತ್ತು. ದೇಶದ ವಿವಿಧ ರಾಜ್ಯಗಳಿಂದ ಸಾವಿರಾರು ಸೈಕ್ಲಿಸ್ಟ್ಗಳು ಭಾಗವಹಿಸಿದ ಈ ಮಹತ್ವದ ಕಾರ್ಯಕ್ರಮದಲ್ಲಿ ಒಟ್ಟಾರೆ 12 ಲಕ್ಷ ಕಿಲೋಮೀಟರ್‌ಗಿಂತ ಹೆಚ್ಚು ದೂರ ಸೈಕ್ಲಿಂಗ್ ಮಾಡಲಾಗಿದೆ. ಈ ಚಾಲೆಂಜ್ ಮೂಲಕ ಸಂಗ್ರಹವಾದ ಹಣವನ್ನು ಕ್ಯಾನ್ಸರ್ ಪೀಡಿತ ಮಕ್ಕಳ ಚಿಕಿತ್ಸೆಗೆ ಬಳಸಲಾಗುತ್ತದೆ.
ಪುರುಷರ ವಿಭಾಗದಲ್ಲಿ ಧೀರಜ್ ಭುಜ್ಲೆ - 5556 ಕಿಮೀ, ಸುರೇಶ ಪಿ.- 4197 ಕಿಮೀ, ಕಿಶೋರ ಬಾಂದೇಕರ್ - 4014 ಕಿ.ಮೀ
ಮಹಿಳಾ ವಿಭಾಗದಲ್ಲಿ ಸಾಕ್ಷಿ ಎಸ್ ನಾಯಕ್ -1603 ಕಿಮೀ, ಅಕ್ಷತಾ ಶೆಟ್ಟಿ -1206 ಕಿಮೀ, ಶೋಭಿತ್ ಹೆಗ್ಡೆ-1109 ಕಿಮೀ ಈ ಅಭಿಯಾನದಲ್ಲಿ ಅತಿ ಹೆಚ್ಚು ಸೈಕ್ಲಿಂಗ್ ಮಾಡಿದ ಸಾಧಕರಾಗಿದ್ದಾರೆ.
ಕಾರವಾರ ಬೈಸಿಕಲ್ ಕ್ಲಬ್ ಒಂದು ಫಿಟ್ನೆಸ್ ಕ್ಲಬ್ ಆಗಿದ್ದು, ಹಲವು ವರ್ಷಗಳಿಂದ ಕಾರವಾರ ಹಾಗೂ ದೇಶದಾದ್ಯಂತ ಸೈಕ್ಲಿಂಗ್, ಯೋಗ ಹಾಗೂ ಮ್ಯಾರಥಾನ್ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾ ಬಂದಿದೆ. ಮಹಿಳಾ ದಿನಾಚರಣೆ ಅಂಗವಾಗಿ ಕ್ಲಬ್ ವತಿಯಿಂದ 20 ಸೈಕಲ್‌ಗಳನ್ನು ಬಡ ಶಾಲಾ ವಿದ್ಯಾರ್ಥಿನಿಯರಿಗೆ ಹಾಗೂ ದಿನನಿತ್ಯ ಕೆಲಸಕ್ಕೆ ಹೋಗಲು ಅವಶ್ಯಕತೆ ಇರುವ ಮಹಿಳೆಯರಿಗೆ ವಿತರಿಸಲಾಗಿತ್ತು. ಕ್ಲಬ್‌ನ ಅಧ್ಯಕ್ಷ ಡಾ. ಸೂರಜ್ ಹೆಗ್ಡೆ, ಉಪಾಧ್ಯಕ್ಷ ಕಿಶೋರ ಬಾಂದೇಕರ್, ಕಾರ್ಯದರ್ಶಿ ಡಾ. ಸಚಿನ್ ನಾಯ್ಕ ಹಾಗೂ ಖಜಾಂಚಿ ಆರ್.ವಿ. ಭಟ್ ಅವರ ನೇತೃತ್ವದಲ್ಲಿ ಈ ಅಭಿಯಾನ ಯಶಸ್ವಿಯಾಗಿ ನಡೆಯಿತು ಎಂದು ಕ್ಲಬ್ ಪ್ರಕಟಣೆ ತಿಳಿಸಿದೆ.