ಸಿಐಎಸ್‌ಎಫ್‌ ಸೈಕಲ್ ರ್ಯಾಲಿ ಕಾರವಾರ ತಲುಪಿತು  
ಉತ್ತರ ಕನ್ನಡ

ಕಾರವಾರ ತಲುಪಿದ ಸಿಐಎಸ್‌ಎಫ್‌ ಸೈಕಲ್‌ ರ‍್ಯಾಲಿ

ಸುಭಾಸ ಹೆಗಡೆ ಧೂಪದಹೊಂಡ
ಕಾರವಾರ: ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಆಯೋಜಿಸಿರುವ ವಂದೇ ಮಾತರಂ ಕೋಸ್ಟಲ್ ಸೈಕ್ಲೋಥಾನ್ ಸೋಮವಾರ ಕಾರವಾರ ಮೂಲಕ ಕರ್ನಾಟಕ ಪ್ರವೇಶಿಸಿತು.
ಗೋವಾದಿಂದ ಬಂದ 50 ರಷ್ಟು ಮಹಿಳಾ ಸಿಬ್ಬಂದಿ ಸೇರಿದಂತೆ 120 ಸಿಐಎಸ್‌ಎಫ್ ಸಿಬ್ಬಂದಿ ಇರುವ ಸೈಕ್ಲೋಥಾನ್‌ಗೆ ಮಾಜಾಳಿ ಗಡಿಯಲ್ಲಿ ಕೈಗಾ, ಜಿಲ್ಲಾಡಳಿತ ಹಾಗೂ ಪೊಲೀಸ್ ಅಧಿಕಾರಿಗಳು ಸ್ವಾಗತ ನೀಡಿದರು. ಫೆ.17 ರಂದು ಸೈಕ್ಲೋಥಾನ್ ಮುರ್ಡೇಶ್ವರದೆಡೆಗೆ ಸಾಗಲಿದೆ.
ವಂದೇ ಮಾತರಂ ಗೀತೆಯು 150 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಗುಜರಾತ್‌ನ ಲಖ್‌ಪತ್ ಕೋಟೆಯಿಂದ ಜ.28 ರಂದು ರ‍್ಯಾಲಿ ಆಯೋಜಿಸಲಾಗಿತ್ತು. ರ‍್ಯಾಲಿ ಪಶ್ಚಿಮ ಕರಾವಳಿಯ ಮೂಲಕ ಸಾಗಿ ಬಂದಿದ್ದು, ಸೈಕಲ್ ಸವಾರರು ಮಾಜಾಳಿ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ರಾತ್ರಿ ವಾಸ್ತವ್ಯ ಮಾಡಲಿದ್ದಾರೆ. ಅಂತಾರಾಜ್ಯ ಗಡಿಯಿಂದ ಇಂಜಿನಿಯರಿAಗ್ ಕಾಲೇಜ್ವರೆಗೆ ರ‍್ಯಾಲಿಯನ್ನು ಬ್ಯಾಂಡ್ ಮೂಲಕ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಎನ್‌ಸಿಸಿ ವಿದ್ಯಾರ್ಥಿಗಳು, ಸ್ಥಳೀಯ ಜಾನಪದ ಕಲಾತಂಡಗಳು ಅದಕ್ಕೆ ಸಾಥ್ ನೀಡಿದವು.
ಸಿ.ಐ.ಎಸ್.ಎಫ್. ಘಟಕ ಎನ್.ಪಿ.ಸಿ. ಕೈಗಾದ ಸೀನಿಯರ್ ಕಮಾಂಡೆAಟ್ ಅಜಯ್ ಕುಮಾರ್ ಝಾ, ಬೆಂಗಳೂರಿನ ಸ್ಯಾಟಲೈಟ್ ಕೇಂದ್ರದ ಸೀನಿಯರ್ ಕಮಾಂಡೆAಟ್ ಆರ್.ಪಿ. ಸಿಂಗ್, ಡೆಪ್ಯುಟಿ ಕಮಾಂಡೆಂಟ್ ಬಿರೇಂದ್ರ ಕುಮಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರವಿ ನಾಯಕ್, ಡಿವೈಎಸ್ಪಿ ಗಿರೀಶ್ ಮತ್ತಿತರರು ಭಾಗವಹಿಸಿದ್ದರು.