ಕೇಂದ್ರ ಸಚಿವ ಶಿವರಾಜ ಸಿಂಗ್ ಚೌಹಾಣ ಸಂಸದ ವಿಶ್ವೇಶ್ವರ ಹೆಗಡೆ ಅವರ ಪತ್ರಕ್ಕೆ ಕಳಿಸಿರುವ ಉತ್ತರ (Crop Insurance)
ಶಿರಸಿ: ಜಿಲ್ಲೆಯ ರೈತರಿಗೆ ಬೆಳೆ ವಿಮೆ (Crop Insurance) ಕೊಡಿಸುವಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ.
ರೈತರ ಕೆಲಸ ಮಾಡಲು ಕಾಂಗ್ರೆಸ್ ಸಚಿವರು ಮತ್ತು ಶಾಸಕರಿಗೆ ಸಮಯವಿಲ್ಲವೇ? ಎಂದು ಬಿಜೆಪಿ ಜಿಲ್ಲಾ ವಕ್ತಾರ ಸದಾನಂದ ಭಟ್ ನಿಡಗೋಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯ ರೈತರಿಗೆ ನ್ಯಾಯಯುತವಾಗಿ ಈಗಾಗಲೇ ಜಮಾ ಆಗಬೇಕಾಗಿದ್ದ ಬೆಳೆ ವಿಮೆ ಹಣ ಇದುವರೆಗೂ ಸಹ ವಿಮಾ ಕಂಪನಿಯಿಂದ ಬಿಡುಗಡೆಗೊಳಿಸಿಲ್ಲ.
ಗ್ರಾಮ ಪಂಚಾಯಿತಿ ಮಟ್ಟದಲ್ಲಿನ ಮಳೆ ಮಾಪನ ಯಂತ್ರಗಳ ಸರಿಯಾದ ನಿರ್ವಹಣೆ ಇಲ್ಲದಿರುವ ಕಾರಣದಿಂದ ಮಳೆ ಮತ್ತು ಹವಾಮಾನದ ಸ್ಪಷ್ಟವಾದ ಅಂಕಿ ಅಂಶ ದಾಖಲೀಕರಣ ಆಗಿಲ್ಲ.
ಇದರಿಂದಾಗಿ ವಿಮಾ ಪರಿಹಾರ ನೀಡಬೇಕಾದ ಸಂಸ್ಥೆ ತನ್ನ ಜವಾಬ್ದಾರಿಯಿಂದ ಜಾರಿಕೊಳ್ಳಲು ಅನುವು ಮಾಡಿಕೊಡುವಂತಿದೆ.
ಈ ವರ್ಷದ ಜನವರಿ ತಿಂಗಳಿನಲ್ಲಿ ಕೇಂದ್ರ ಕೃಷಿ ಇಲಾಖೆ ರಾಜ್ಯ ಸರ್ಕಾರಕ್ಕೆ ಮಳೆ ಮಾಪನ ಯಂತ್ರಗಳನ್ನು ಸುಸ್ಥಿತಿಯಲ್ಲಿಡುವುದಕ್ಕೆ ಸ್ಪಷ್ಟವಾದ ಆದೇಶ ನೀಡಿದ್ದರೂ ಸಹ ಯಂತ್ರಗಳ ನಿರ್ವಹಣೆ ಮತ್ತು ದುರಸ್ತಿಗೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.
ರಾಜ್ಯ ಸರ್ಕಾರ ರೈತರ ಹಿತರಕ್ಷಣೆಯಲ್ಲಿ ಯಾವ ರೀತಿಯ ಧೋರಣೆ ಹೊಂದಿದೆ ಎನ್ನುವುದನ್ನು ಇದು ಎತ್ತಿ ತೋರಿಸುತ್ತಿದೆ ಎಂದಿದ್ದಾರೆ.
ಇದುವರೆಗೂ ಸಹ ಗ್ರಾಮ ಪಂಚಾಯಿತಿಗಳಲ್ಲಿರುವ ಈ ಯಂತ್ರಗಳ ನಿರ್ವಹಣೆಗೆ ಸೂಕ್ತ ಟೆಂಡರ್ ಕರೆದು ನಿರ್ವಹಣೆ ಮಾಡದಿರುವುದು ರಾಜ್ಯ ಸರ್ಕಾರದ ಕರ್ತವ್ಯ ಲೋಪವನ್ನು ಎತ್ತಿ ತೋರಿಸುತ್ತಿದೆ.
ಈ ಕುರಿತು ಪ್ರಯತ್ನಿಸಬೇಕಾಗಿದ್ದ ಜಿಲ್ಲೆಯ ಉಸ್ತುವಾರಿ ಸಚಿವರು ಮತ್ತು ಶಾಸಕರುಗಳು ರೈತರ ಪರವಾಗಿ ಧ್ವನಿಯತ್ತುತ್ತಿಲ್ಲ.
ರಾಜ್ಯ ಸರ್ಕಾರ ನಿಗದಿತವಾಗಿ ನೀಡಬೇಕಾದ ಮಳೆ ಮತ್ತು ಹವಾಮಾನದ ದತ್ತಾಂಶಗಳನ್ನು ಇನ್ಸೂರೆನ್ಸ್ ಕಂಪನಿಗಳಿಗೆ ಪೂರೈಸದೆ ಇರುವ ಕಾರಣ ಇನ್ಸೂರೆನ್ಸ್ ಕಂಪನಿಗಳು ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಕಾರಣವಾಗಿದೆ.
ಇವೆಲ್ಲವುಗಳ ನಡುವೆಯೂ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ರವರಿಗೆ ಪತ್ರ ಬರೆದು ವಾಸ್ತವಿಕ ಸ್ಥಿತಿಗಳನ್ನು ತಿಳಿಸಿದ್ದರು.
ತಕ್ಷಣ ಕಾರ್ಯ ಪ್ರವೃತ್ತರಾದ ಕೇಂದ್ರ ಕೃಷಿ ಸಚಿವರು ರಾಜ್ಯದ ಮುಖ್ಯಮಂತ್ರಿಗಳಿಗೆ ಈ ಕುರಿತು ವಿಶೇಷ ಗಮನಹರಿಸಿ ರೈತರ ಹಿತರಕ್ಷಣೆಗೆ ಮುಂದಾಗಲು ಕೋರಿಕೊಂಡಿದ್ದರು. ಆದಾಗ್ಯೂ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರಿದೆ ಎಂದಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ರೈತರಿಗೆ ನೂರು ಕೋಟಿರೂ.ಗಿಂತಲೂ ಹೆಚ್ಚಿನ ವಿಮಾ ಹಣ ಜಮಾ ಆಗಬೇಕಾಗಿದ್ದು ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರುಗಳು ತಮ್ಮ ಜವಾಬ್ದಾರಿಯನ್ನು ನೆನಪಿಸಿಕೊಂಡು, ಧ್ವನಿಯತ್ತಿ ಡಿಸೆಂಬರ್ 15ರೊಳಗಾಗಿ ರೈತರಿಗೆ ಬೆಳೆವಿಮೆ ಮೊತ್ತವನ್ನು ಬಿಡುಗಡೆ ಮಾಡಿಸಲಿ.
ರಾಜ್ಯ ಕಾಂಗ್ರೆಸ್ ಸರ್ಕಾರ ಈ ನಿಟ್ಟಿನಲ್ಲಿ ತಕ್ಷಣ ಬೆಳೆ ವಿಮೆಯನ್ನು ಬಿಡುಗಡೆ ಮಾಡಿಸದಿದ್ದಲ್ಲಿ ಭಾರತೀಯ ಜನತಾ ಪಾರ್ಟಿ ರೈತರ ಹಿತ ರಕ್ಷಣೆಯ ದೃಷ್ಟಿಯಿಂದ ಬೀದಿಗೆಳಿದು ಪ್ರತಿಭಟನೆ ಕೈಗೊಳ್ಳಬೇಕಾಗುತ್ತದೆ ಎಂದಿದ್ದಾರೆ.