ಯಲ್ಲಾಪುರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಕಟ್ಟಡ ಹಾಗೂ ವಜ್ರಮಹೋತ್ಸವ ಕಾರ್ಯಕ್ರಮವನ್ನು ಎಂಎಲ್ಸಿ ಶಾಂತಾರಾಮ ಸಿದ್ದಿ ಉದ್ಘಾಟಿಸಿದರು. ನಾಗರಾಜ ಕವಡಿಕೆರೆ, ಗೋಪಾಲಕೃಷ್ಣ ವೈದ್ಯ, ಹರಿಪ್ರಕಾಶ ಕೋಣೆಮನೆ, ಪ್ರಮೋದ ಹೆಗಡೆ, ಎಂ.ಆರ್. ಹೆಗಡೆ ಇತರರಿದ್ದರು.
- ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಅಭಿಪ್ರಾಯ
- ವಜ್ರ ಮಹೋತ್ಸವ ಉದ್ಘಾಟನೆ
ಯಲ್ಲಾಪುರ: ಮಲೆನಾಡಿನ ಜಿಲ್ಲೆಗಳಲ್ಲಿ ಕೃಷಿ ಆಧಾರಿತ ಸಹಕಾರಿ ಸಂಘಗಳೇ ರೈತರ ನಿಜವಾದ ಬೆನ್ನೆಲುಬಾಗಿವೆ ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಆಯೋಜಿಸಿದ್ದ ಯಲ್ಲಾಪುರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಕಟ್ಟಡ ಹಾಗೂ ವಜ್ರ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಾಗೃತ ಸದಸ್ಯರಿದ್ದರೆ ಸಹಕಾರಿ ಸಂಘದ ಬೆಳವಣಿಗೆ ಕಷ್ಟವಲ್ಲ ಎಂಬುದಕ್ಕೆ ಈ ಸಂಘ ನಿದರ್ಶನ. ಸರ್ವವ್ಯಾಪಿಯಾಗಿ, ಸರ್ವಸ್ಪರ್ಶಿಯಾಗಿ ಸಂಘ ಬೆಳೆದು ನಿಂತಿದೆ ಎಂದರು.
ಮೀಟಿಂಗ್ ಹಾಲ್ ಉದ್ಘಾಟಿಸಿದ ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮಾತನಾಡಿ, ಆಡಳಿತ ಮಂಡಳಿಯವರು, ಸಿಬ್ಬಂದಿ ಹಾಗೂ ಸದಸ್ಯರು ಒಟ್ಟಾಗಿ ಮುನ್ನಡೆಯಲು ಸಹಕಾರಿ ಕ್ಷೇತ್ರ ಸರಿಯಾದ ದಾರಿಯಲ್ಲಿ ಸಾಗುತ್ತದೆ ಎಂದರು.
ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ನಮ್ಮ ಜಿಲ್ಲೆ ರಾಜ್ಯಕ್ಕೇ ಆದರ್ಶವಾಗಿದೆ. ಆದರೆ, ಜಿಲ್ಲೆಯಲ್ಲಿ ರಾಜಕೀಯದ ಅತಿಯಾದ ಹಸ್ತಕ್ಷೇಪದಿಂದ ಸಹಕಾರಿ ಕ್ಷೇತ್ರ ಪಾವಿತ್ರ್ಯತೆ ಕಳೆದುಕೊಳ್ಳುತ್ತಿದೆ. ಅನಾರೋಗ್ಯಕರ ಪೈಪೋಟಿಯಿಂದಾಗಿ ನ್ಯಾಯಾಲಯದ ಮೆಟ್ಟಿಲೇರಿ, ತೀರ್ಮಾನಕ್ಕಾಗಿ ಕಾಯುವ ಸ್ಥಿತಿ ಬಂದಿದೆ. ಸಹಕಾರಿಗಳು ಅಹಂ, ಪ್ರತಿಷ್ಠೆಗಳನ್ನು ಬಿಟ್ಟು ಸಹಕಾರಿ ಕ್ಷೇತ್ರವನ್ನು ಬಲಪಡಿಸಲು ಒಟ್ಟಾಗಬೇಕು ಎಂದರು. ಎಲ್ಲ ಸಹಕಾರಿ ಸಂಸ್ಥೆಗಳು, ರೈತರು ಒಗ್ಗಟ್ಟಾಗಿ ಅಡಿಕೆ ಮಂಡಳಿಯ ರಚನೆಗೆ ಒತ್ತಡ ಹಾಕಬೇಕು ಎಂದು ಆಗ್ರಹಿಸಿದರು.
ಸಂಘದ ಅಧ್ಯಕ್ಷ ನಾಗರಾಜ ಕವಡಿಕೆರೆ ಅಧ್ಯಕ್ಷತೆ ವಹಿಸಿದ್ದರು. ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ, ವಿವಿಧ ಸಹಕಾರಿ ಸಂಘಗಳ ಅಧ್ಯಕ್ಷರಾದ ಉಮೇಶ ಭಾಗ್ವತ, ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ, ಸಂತೋಷ ಭಟ್ಟ ಹಳವಳ್ಳಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಆರ್.ಎಸ್. ಭಟ್ಟ, ಟಿಎಸ್‌ಎಸ್ ನಿರ್ದೇಶಕ ಕೃಷ್ಣ ಹೆಗಡೆ ಜೂಜಿನಬೈಲ್, ಸಂಘದ ಮುಖ್ಯ ಕಾರ್ಯನಿರ್ವಾಹಕ ಎಂ.ಎಸ್. ಹೆಗಡೆ ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.
ಪ್ರಿಯಾ ಭಟ್ಟ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ಟಿ.ಆರ್. ಹೆಗಡೆ, ನಿರ್ದೇಶಕರಾದ ನರಸಿಂಹ ಕೋಣೆಮನೆ, ಸುಬ್ಬಣ್ಣ ದಾನ್ಯಾನಕೊಪ್ಪ, ಗೋಪಾಲಕೃಷ್ಣ ಭಟ್ಟ, ಮಹಾಬಲೇಶ್ವರ ಭಟ್ಟ ಮಾಲದಮನೆ ಕಾರ್ಯಕ್ರಮ ನಿರ್ವಹಿಸಿದರು.