ಯಲ್ಲಾಪುರದ ತಾಲೂಕು ಮಾರ್ಕೆಟಿಂಗ್ ಸೊಸೈಟಿ ಎದುರು ನಡೆದ ಸಹಕಾರಿ ಧರಣಿಯಲ್ಲಿ ಟಿಎಂಎಸ್ TMS ಮಾಜಿ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ ಮಾತನಾಡಿದರು.
ಯಲ್ಲಾಪುರ: ತಾಲೂಕು ಮಾರ್ಕೆಟಿಂಗ್ ಸೊಸೈಟಿಯ ಸದಸ್ಯರ ಹಕ್ಕನ್ನು ಮೊಟಕುಗೊಳಿಸುತ್ತಿರುವ ರಾಜಕೀಯ ಷಡ್ಯಂತ್ರ ಹಾಗೂ ಕಾನೂನು ಮೀರಿ ಕಾರ್ಯ ನಿರ್ವಹಿಸುತ್ತಿರುವ ಆಡಳಿತಾಧಿಕಾರಿ ವಿರುದ್ಧ ಟಿಎಂಎಸ್ TMS ಉಳಿಸಿ ಹೋರಾಟ ಸಮಿತಿಯಿಂದ ಸಹಕಾರಿ ಧರಣಿ ನಡೆಸಲಾಯಿತು.
ಟಿಎಂಎಸ್ ಮಾಜಿ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ಮಾತನಾಡಿ, ಸಂಸ್ಥೆಯ, ಸದಸ್ಯರ ಹಿತಕ್ಕಾಗಿ ಹೋರಾಟ ನಿರಂತರವಾಗಿ ಮುಂದುವರಿಯಲಿದೆ.
ಸ್ಪಂದನೆ ದೊರೆಯದೇ ಹೋದರೆ ರಸ್ತೆ ತಡೆ ನಡೆಸಲಿದ್ದೇವೆ. ಆಗಲೂ ಯಾವುದೇ ಕ್ರಮ ಆಗದೆ ಇದ್ದಲ್ಲಿ ಸಂಸ್ಥೆಯ ಎದುರು ಏಕಾಂಗಿಯಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ. ಉಪವಾಸದಿಂದ ನಾನು ಸತ್ತರೆ ತಾಲೂಕಿನ ರೈತರ ಹಿತಕ್ಕಾಗಿ ಬಲಿಯಾದ ನೆಮ್ಮದಿ ದೊರೆಯುತ್ತದೆ ಎಂದರು.
ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಟಿಎಂಎಸ್‌ನ ಅಧಿಕಾರ ಹಿಡಿಯಲು ಬೇರೆ ರೀತಿಯಲ್ಲಿ ಮಾಯಾಜಿಂಕೆ ಕಾರ್ಯನಿರ್ವಹಿಸುತ್ತಿದೆ. ರೈತರ ಜೀವನಾಡಿಯಾದ ಸಂಸ್ಥೆಯನ್ನು ಅವ್ಯವಸ್ಥೆಯ ಆಗರವಾಗಿಸಲು ಸಂಸ್ಥೆಯ ನಿವೃತ್ತ ಮುಖ್ಯಕಾರ್ಯನಿರ್ವಾಹಕ ಸಿ.ಎಸ್. ಹೆಗಡೆ ಹಾಗೂ ಶಾಸಕರೇ ಕಾರಣ ಎಂದು ಆರೋಪಿಸಿದರು.
ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಮಾತನಾಡಿ, ಟಿಎಂಎಸ್‌ನ ಈ ಅವ್ಯವಸ್ಥೆಗೆ ಶಾಸಕ ಶಿವರಾಮ ಹೆಬ್ಬಾರ ಹಾಗೂ ಅವರ ತಂಡವೇ ನೇರ ಕಾರಣ. ರೈತರ ಹಿತಕ್ಕಾಗಿ ಸಹಕಾರಿ ಸಂಸ್ಥೆಯನ್ನು ಸರಿದೂಗಿಸಿಕೊಂಡು ಹೋಗಬೇಕಾದ ಶಾಸಕರೆ ವಿಷಕಂಠನಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಆಡಳಿತಾಧಿಕಾರಿ ರೈತರ ಹಿತಕ್ಕಾಗಿ ಬಂದು ಕುಳಿತವರಲ್ಲ. ಲಂಚದ ಹಣಕ್ಕಾಗಿ ಕೆಲಸ ಮಾಡಲು ಬಂದಿದ್ದಾರೆ. ತನ್ನ ಕರ್ತವ್ಯದ ಮಿತಿ ಮೀರಿ ಕಾರ್ಯ ನಿರ್ವಹಿಸುತ್ತಿರುವ ಅವರು ಶಿಕ್ಷೆಗೆ ಗುರಿಯಾಗುವುದು ಖಂಡಿತ ಎಂದು ಎಚ್ಚರಿಸಿದರು.
ಸಂಸ್ಥೆಯ ಮಾಜಿ ನಿರ್ದೇಶಕರಾದ ವೆಂಕಟರಮಣ ಬೆಳ್ಳಿ, ಸುಬ್ಬಣ್ಣ ಬೋಳ್ಮನೆ, ವೆಂಕಟರಮಣ ಭಟ್ಟ ಕಿರಕುಂಭತ್ತಿ, ಜ್ಯೋತಿಷಿ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ, ಎಲ್.ಎಸ್.ಎಂ.ಪಿ ಸೊಸೈಟಿ ಅಧ್ಯಕ್ಷ ನಾಗರಾಜ ಕವಡಿಕೆರೆ ಇತರರು ಮಾತನಾಡಿದರು.
ಗಣಪತಿ ಮಾನಿಗದ್ದೆ, ಮಹೇಶ ದೇಸಾಯಿ, ಕೆ.ಟಿ. ಹೆಗಡೆ, ಸುಬ್ಬಣ್ಣ ಉದ್ದಾಬೈಲ, ರವಿ ಬಿಡಾರ, ಅಪ್ಪು ಆಚಾರಿ, ಜಿ.ಆರ್. ಭಾಗ್ವತ, ರಾಮಕೃಷ್ಣ ಗಾಂವ್ಕರ, ದತ್ತಾತ್ರೇಯ ಭಟ್ಟ, ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.
ಅಹವಾಲು ಸ್ವೀಕರಿಸಲು ಹೋಗಿದ್ದೆ. ಮೇಲಧಿಕಾರಿಗಳೇ ಸ್ಥಳಕ್ಕೆ ಬರಬೇಕೆಂಬ ಒತ್ತಾಯ ಮಾಡಿದ್ದಾರೆ. ಆದರೆ ನನಗೆ ಮಾತನಾಡಲು ಅವಕಾಶ ನೀಡಿಲ್ಲ.
> ಅಜಿತ್ ಶಿರಹಟ್ಟಿ, ಸಹಕಾರಿ ಇಲಾಖೆಯ ಸಹಾಯಕ ನಿಬಂಧಕ