ಕೊಲೆಗಾರರು 
ಉತ್ತರ ಕನ್ನಡ

ಜಮೀನಿಗಾಗಿ ಕೊ*ಲೆ‌ ಮಾಡಿದವರಿಗೆ ಜೀವಾವಧಿ ಜೈಲು ಶಿಕ್ಷೆ

ಸುಭಾಸ ಹೆಗಡೆ ಧೂಪದಹೊಂಡ
ಕಾರವಾರ: ರೈತನೊಬ್ಬನ ಕಾಲನ್ನು ಕೊಡಲಿಯಿಂದ ಕಡಿದು ಗಂಭೀರ ಗಾಯಗೊಳಿಸಿ ಕೊಲೆ ಮಾಡಿದ ಮೂವರಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಶಿರಸಿಯ 1 ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ಹಳಿಯಾಳ ಕರ್ಲಕಟ್ಟಾ ಗ್ರಾಮದ ಸಹದೇವ ಹನುಮಂತ ದಡ್ಡಿಕರ್, ಸದಾನಂದ ಅನಂತ ಪಾಟೀಲ್ ಹಾಗೂ ರಾಮಾ ಮಾರುತಿ ಹುಬ್ಬಳಕರ್ ಅವರು ಶಿಕ್ಷೆಗೊಳಗಾದ ಅಪರಾಧಿಗಳು.
ಎಲ್ಲರಿಗೂ ತಲಾ 20 ಸಾವಿರ ರೂ. ದಂಡ ವಿಧಿಸಿದ್ದಾರೆ. ಅಲ್ಲದೇ, ತಲಾ  25 ಸಾವಿರ ರೂ.ಗಳಂತೆ ಒಟ್ಟು 75 ಸಾವಿರ ರೂ.ಗಳನ್ನು ಮೃತನ ಪತ್ನಿಗೆ ಪರಿಹಾರವಾಗಿ ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ. 

ಹಿನ್ನೆಲೆ 

ಕೊರ್ಲಕಟ್ಟಾ ಗ್ರಾಮದ ಸರ್ವೇ ನಂಬರ್ 60(ಬ-11)ರಲ್ಲಿ ಯಮುನಾ ಸುಂಟಗಾರ ಹೆಸರಿನಲ್ಲಿರುವ  3 ಎಕರೆ ಜಮೀನನ್ನು ಮಾಯಾಶ್ರೀ ಪರಶುರಾಮ ತೋರಸ್ಕರ್ ಕುಟುಂಬದವರು  ಖರೀದಿಸಿದ್ದರು. ಆದರೆ, ಅಲ್ಲಿ ಉಳುಮೆ ಮಾಡುತ್ತಿದ್ದ ಸಹದೇವ ದಡ್ಡೀಕರ್ ಜಮೀನು ಬಿಟ್ಟುಕೊಡಲು ಸಿದ್ಧವಿರಲಿಲ್ಲ. ಜಮೀನಿನ ಬಗ್ಗೆ ಪರಸ್ಪರ ತಕರಾರು ನಡೆಯುತ್ತಿತ್ತು. ಆದರೆ, ಈ ಸಂಬಂಧ ಹಳಿಯಾಳ ಪೊಲೀಸ್ ಠಾಣೆಯಲ್ಲೂ ದೂರು ದಾಖಲಾಗಿತ್ತು. 
2023 ಮೇ 11 ರಂದು ಜಮೀನಿನ ಮಾಲೀಕರಾದ ಮಾಯಾಶ್ರೀ ಅವರ ಪತಿ ಪರಶುರಾಮ ಹಾಗೂ ಸಹದೇವ ದಡ್ಡಿನ ನಡುವೆ ಜಗಳ ನಡೆದಿತ್ತು. ಅದೇ ದಿನ ಹೊಲದಲ್ಲಿ ಪರಶುರಾಮ ಅವರನ್ನು ಕೊಡಲಿಯಿಂದ ಕಡಿದು ಕೊಲೆ ಮಾಡಲಾಗಿತ್ತು.
ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಪಿಎಸ್'ಐ ವಿನೋದ ಎಸ್.ಕೆ.ಅವರು ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸಾಕ್ಷಿಗಳನ್ನು ಹಾಜರುಪಡಿಸುವಲ್ಲಿ ಪಿಎಸ್'ಐ ಬಸವರಾಜ ಮಬನೂರು ಹಾಗೂ ಹೆಡ್ ಕಾನ್ಸ್'ಟೇಬಕ್ ಹನುಮಂತ ಬಾರ್ಕಿ ಸಹಕರಿಸಿದ್ದರು.
ಸಾಕ್ಷಿಗಳನ್ನು ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಕಿರಣ ಕಿಣಿ ಅವರು ಅಪರಾಧ ಸಾಬೀತಾದ ಕಾರಣ ತೀರ್ಪು ನೀಡಿದ್ದಾರೆ. ಸರ್ಕಾರ್ ಪರವಾಗಿ ಸರ್ಕಾರಿ ಅಭಿಯೋಜಕ ರಾಜೇಶ ಎಂ.ಮಳಗೀಕರ್ ವಾದ ಮಂಡಿಸಿದ್ದರು.