ಕಾರವಾರ: ಕಡ್ಡಾಯ ವೈದ್ಯಕೀಯ ಸೇವೆಯ ನಿಯಮದಡಿ ಜಿಲ್ಲೆಗೆ 37 ಎಂಬಿಬಿಎಸ್ ವೈದ್ಯರನ್ನು ನೇಮಕ ಮಾಡಲಾಗಿದೆ. ಆದರೆ, ಈ ಸಂದರ್ಭದಲ್ಲಿ ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆ ವೈದ್ಯರನ್ನು ಪರಿಗಣಿಸದೇ ಇರುವುದು ಆಕ್ಷೇಪಕ್ಕೆ ಕಾರಣವಾಗಿದೆ.
ಸರ್ಕಾರಿ ವೈದ್ಯಕೀಯ ಕಾಲೇಜ್ಗಳಲ್ಲಿ ಎಂಬಿಬಿಎಸ್ ಓದಿರುವವರು ತಮ್ಮ ಇಟರ್ನ್ಶಿಪ್ ಮುಗಿದ ಬಳಿಕ 1 ವರ್ಷ ಗ್ರಾಮೀಣ ಭಾಗದಲ್ಲಿ ಕಡ್ಡಾಯವಾಗಿ ವೈದ್ಯಕೀಯ ಸೇವೆ ಮಾಡಬೇಕಾಗಿದೆ. ಅದರಂತೆ 2019-20 ಹಾಗೂ 2020-2021 ನೇ ಸಾಲಿನಲ್ಲಿ ಎಂಬಿಬಿಎಸ್ಗೆ ಸೇರಿ, 2026 ರಲ್ಲಿ ಇಂಟರ್ನ್ಶಿಪ್ ಮುಗಿಸಿದ 927 ಅಭ್ಯರ್ಥಿಗಳಿಗೆ ಕೌನ್ಸೆಲಿಂಗ್ ಮೂಲಕ ಆಸ್ಪತ್ರೆಗಳನ್ನು ಆಯ್ದುಕೊಳ್ಳಲು ಅವಕಾಶ ನೀಡಲಾಗಿತ್ತು. ಅವರು ಆಯ್ದುಕೊಂಡ ಸ್ಥಳಕ್ಕೆ ನವೆಂಬರ್ 2 ರ ಒಳಗೆ ಹಾಜರಾಗುವಂತೆ ಆರೋಗ್ಯ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯ ವಿವಿಧ ಪಿಎಚ್ಸಿಗಳು, ದಾಂಡೇಲಿ ಇಎಸ್ಐ ಆಸ್ಪತ್ರೆ ಸೇರಿ ಒಟ್ಟು 37 ಸ್ಥಳಗಳಿಗೆ ಕಡ್ಡಾಯ ಸೇವೆಯಡಿ ವೈದ್ಯರು ಆಯ್ಕೆಯಾಗಿದ್ದಾರೆ. ಪರಿಣಾಮ ಇಲ್ಲಿ ಈಗಾಗಲೇ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು ನವೆಂಬರ್ 1 ರಿಂದ ಕೆಲಸ ಕಳೆದುಕೊಳ್ಳಲಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ 37 ಕಡೆ ಗುತ್ತಿಗೆ ಆಧಾರದಲ್ಲಿ ವೈದ್ಯರು ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಡಿಎಚ್ಒ ಕಚೇರಿಯಿಂದ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿಲ್ಲ. ಇದರಿಂದ ಗುತ್ತಿಗೆ ವೈದ್ಯರು ಇರುವ ಕಡೆಗೂ ಈಗ ಮತ್ತೊಬ್ಬರನ್ನು ನೇಮಕಾತಿ ಮಾಡಲಾಗಿದೆ ಎಂಬುದು ವೈದ್ಯರ ದೂರು. ಈ ವೈದ್ಯರ ನೇಮಕಾತಿಯ ಬಗ್ಗೆ ಇಲಾಖೆಗೆ ಅಽಕೃತ ಮಾಹಿತಿ ನೀಡದ ಕಾರಣ ಅವರಿಗೆ ಮೂರು ತಿಂಗಳಿAದ ವೇತನವೂ ಸಿಕ್ಕಿಲ್ಲ ಎನ್ನಲಾಗಿದೆ.
ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡುವ ಸಂದರ್ಭದಲ್ಲಿ `ಕಾಯಂ ವೈದ್ಯರು ಬರುವವರೆಗೆ ಅಥವಾ ಕೆಪಿಎಸ್ಸಿಯಿಂದ ನೇಮಕಾತಿ ಆಗುವರೆಗೆ' ಎಂಬ ಷರತ್ತು ವಿಽಸಲಾಗಿದೆ. ಆದರೆ, ಕಡ್ಡಾಯ ವೈದ್ಯಕೀಯ ಸೇವೆಯಡಿ ನೇಮಕವಾಗುವವರು ಕಾಯಂ ವೈದ್ಯರಲ್ಲ. ಒಂದು ವರ್ಷಕ್ಕೆ ಸೀಮಿತವಾಗಲಿದ್ದಾರೆ. ಹೆಚ್ಚಿನ ವೈದ್ಯರು ಒಂದು ವರ್ಷ ಪೂರ್ಣವಾಗುತ್ತಿದ್ದಂತೆ ಬಿಟ್ಟು ಹೋಗುತ್ತಾರೆ. ಇನ್ನು ಕೆಲವರು ವರ್ಷ ಪೂರ್ಣವಾಗುವ ಮೊದಲೇ ಬಿಟ್ಟು ಹೋಗುವವರೂ ಇದ್ದಾರೆ. ಅವರಿಗಾಗಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ಥಳೀಯ ವೈದ್ಯರನ್ನು ಖಾಲಿ ಮಾಡಿಸುವುದು ಎಷ್ಟು ಸರಿ ಎಂಬುದು ಹೆಸರು ಹೇಳಲಿಚ್ಛಿಸದ ವೈದ್ಯರೊಬ್ಬರ ಪ್ರಶ್ನೆ. ಈ ಕುರಿತು ಡಿಎಚ್ಒ ಸಂಜಯ ದೊಡ್ಮನಿ ಅವರನ್ನು `ವಿಜಯವಾಣಿ' ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಕರೆ ಸ್ವೀಕರಿಸಿಲ್ಲ. ಅವರ ಸರ್ಕಾರಿ ಮೊಬೈಲ್ ಸಂಖ್ಯೆ ಬಂದ್ ಆಗಿತ್ತು.