ಯಲ್ಲಾಪುರ ತಾಲೂಕಿನ ಇಡಗುಂದಿ ಬಳಿ ಮಳೆ-ಗಾಳಿಗೆ RAIN ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.
ಯಲ್ಲಾಪುರ: ತಾಲೂಕಿನಾದ್ಯಂತ ಮಂಗಳವಾರವೂ ಮಳೆ-ಗಾಳಿ rain ಅಬ್ಬರಿಸುತ್ತಿದೆ. ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ವಿದ್ಯುತ್ ವ್ಯತ್ಯಯ ಮುಂದುವರಿದಿದೆ. ತಾಲೂಕಿನ ಕಿರವತ್ತಿ ಗ್ರಾಪಂ ವ್ಯಾಪ್ತಿಯ ದಾಂಡೇಲಿವಾಡ ಶಾಲೆಯ ಶೌಚಗೃಹದ ಮೇಲೆ ಮರ ಮುರಿದು ಬಿದ್ದು ಹಾನಿ ಉಂಟಾಗಿದೆ. ಬಿಳಕಿಯಲ್ಲಿ ಪಿಲ್ಲು ಸಾವೇರ ಸಿದ್ದಿ ಅವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ.
ಕೋಳಿಕೇರಿಯ ಸುಭಾಷ ಯಲ್ಲಪ್ಪ ಹರಿಜನ ಅವರ ಮನೆಯ ಮೇಲೆ ಮರ ಬಿದ್ದು ಮೇಲ್ಛಾವಣಿಯ ಹೆಂಚುಗಳು ಒಡೆದು ಹಾಳಾಗಿವೆ. ಕೋಳಿಕೇರಿಯ ಬಸವಣ್ಣನಗರದ ಲಕ್ಷ್ಮೀಸುಬ್ಬ ಮರಾಠಿ ಅವರ ಮನೆಯ ಪಕ್ಕದ ಮರ ಬಿದ್ದು ಶೌಚಗೃಹ ಹಾಗೂ ಅಡಿಕೆ ತೋಟಕ್ಕೆ ಹಾನಿ ಉಂಟಾಗಿದೆ.
ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಹಾನಿ ಪರಿಶೀಲಿಸಿದ್ದಾರೆ. ಬಸವಣ್ಣನಗರದಲ್ಲಿ ರಸ್ತೆಯ ಮೇಲೆ ಮರ ಬಿದ್ದು, ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ. ಯಲ್ಲಾಪುರ-ಶಿರಸಿ ರಸ್ತೆಯಲ್ಲಿ ಹಲಸಖಂಡ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್‌ವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಕಂಬ ಮುರಿದಿದೆ.
ಇಡಗುಂದಿ ಬಳಿ ರಾಷ್ಟ್ರೀಯ ಹೆದ್ದಾರಿ 52ರ ಪಕ್ಕ ಮರ ಬಿದ್ದು, ಮೂರು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.