ಯುವ ಕಾಂಗ್ರೆಸ್‌ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಯ ಎದುರು ಪ್ರತಿಭಟನೆ ನಡೆಸಿದರು.  
ಉತ್ತರ ಕನ್ನಡ

ಇಂಧನ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ

ಕಾರವಾರ: ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ, ಇಂಧನ ಬೆಲೆ ಏರಿಕೆ ಖಂಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಯ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಜಿಲ್ಲಾಧಿಕಾರಿ ಕಚೇರಿಯ ಗೇಟ್‌ಗಳನ್ನು ಹತ್ತಿ ಟಯರ್‌ಗಳಿಗೆ ಬೆಂಕಿ ಹಚ್ಚಲು ಮುಂದಾದ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ತಡೆದರು.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮೋದ ಶಿರ್ಸಿಕರ್, ಪ್ರಧಾನಿ ನರೇಂದ್ರ ಮೋದಿ ಅವರು ಯುವಕರಿಗೆ ಉದ್ಯೋಗ ನೀಡುತ್ತೇವೆ. ಅಚ್ಚೇ ದಿನ ಬರಲಿದೆ ಎಂದು ಭರವಸೆ ನೀಡಿದರು. ಆದರೆ, ಬೆಲೆ ಏರಿಕೆ ವಿಪರೀತವಾಗಿದ್ದು, ಕೆಟ್ಟ ದಿನಗಳು ಬಂದಿವೆ. ಬಿಜೆಪಿ ಸರ್ಕಾರ ಅಽಕಾರಕ್ಕೆ ತಂದ ಜನ ಭ್ರಮ ನಿರಸನರಾಗಿದ್ದಾರೆ ಎಂದರು.
ಭಾವಿ ವೈದ್ಯರಾಗುವ ಕನಸು ಹೊತ್ತು ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಗೋಳು ಹೇಳತೀರದಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ವಿದ್ಯಾರ್ಥಿಗಳು ಇನ್ನೊಮ್ಮ ಪರೀಕ್ಷೆ ಬರೆಯುವಂತಾಗಿದೆ. ಇದರಿಂದ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡನೀಯ ಎಂದರು.
ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಅಲಿ ಖುರೇಶಿ, ರಾಜ್ಯ ಸಾಮಾಜಿಕ ಜಾಲತಾಣ ಸಂಯೋಜಕ ಸಯ್ಯದ್ ಅಶ್ರಫ್, ಜಿಲ್ಲಾ ಉಪಾಧ್ಯಕ್ಷ ಹರೀಶ ನಾಯ್ಕ, ಪ್ರಧಾನ ಕಾರ್ಯದರ್ಶಿ ಕಾವ್ಯಾನಂದ ನಾಯ್ಕ, ಕುಮಟಾ ಕ್ಷೇತ್ರಾಧ್ಯಕ್ಷ ವೈಭವ ನಾಯ್ಕ, ಭಟ್ಕಳ ಕ್ಷೇತ್ರಾಧ್ಯಕ್ಷ ತೇಜಸ್ ನಾಯ್ಕ, ಬ್ಲಾಕ್ ಕಾಂಗ್ರೆಸ್‌ಅಧ್ಯಕ್ಷ ಅರವಿಂದ ಕಲ್ಗುಟಕರ್, ಉಪಾಧ್ಯಕ್ಷ ಬಾಬು ಶೇಖ್ ಹಾಗೂ ಇತರರು ಇದ್ದರು.