ಹಳಿಯಾಳದ ಗಣೇಶ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ವಿಬಿಜಿ ರಾಮ್ಜಿ ಜಾಗೃತಿ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸುನೀಲ ಹೆಗಡೆ ಮಾತನಾಡಿದರು. ವಿಪ ಮಾಜಿ ಸದಸ್ಯ ಎಸ್.ಎಲ್. ಘೋಟ್ನೇಕರ ಮತ್ತಿತರರಿದ್ದಾರೆ.
ಹಳಿಯಾಳ: ಮನರೇಗಾ ಯೋಜನೆಯನ್ನು ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ ಗ್ಯಾರಂಟಿ ಗ್ರಾಮೀಣ (ವಿಬಿಜಿ ರಾಮ್ ಜಿ) ಎಂದು ಪರಿವರ್ತನೆಗೊಳಿಸಿರುವುದಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವುದು, ಯೋಜನೆಯ ಕಾಳಜಿಗಾಗಿರದೇ ಗಾಂಧಿ ಎಂಬ ಶಬ್ದ ಕಡಿಮೆಯಾಗುತ್ತದೆ ಎಂಬ ಭಯದಿಂದ ಎಂದು ಬಿಜೆಪಿ ಪಕ್ಷ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಹಾಗೂ ಮಾಜಿ ಶಾಸಕ ಸುನೀಲ ಹೆಗಡೆ ವ್ಯಂಗ್ಯವಾಡಿದರು.
ಪಟ್ಟಣದ ಗಣೇಶ ಕಲ್ಯಾಣ ಮಂಟಪದಲ್ಲಿ ಬುಧವಾರ ಆಯೋಜಿಸಿದ್ದ ವಿಬಿಜಿ ರಾಮ್ ಜಿ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಯೋಜನೆ ಪಾರದರ್ಶಕವಾಗಿ ಹಾಗೂ ಸಮರ್ಥವಾಗಿ ಜಾರಿಯಾಗುವುದನ್ನು ಸಹಿಸದ ಪ್ರತಿಪಕ್ಷಗಳು ಸುಳ್ಳು ವದಂತಿಗಳನ್ನು ಹರಡಿ ಕಾರ್ಮಿಕರನ್ನು ಗೊಂದಲಕ್ಕೆ ತಳ್ಳಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದರು. ಹೊಸ ಹೆಸರಿನಲ್ಲಿ ರಾಮ ಎಂಬ ಶಬ್ಧ ಕಾಣಿಸುತ್ತಿರುವುದರಿಂದ ಕಾಂಗ್ರೆಸ್‌ಗೆ ಅಸಹನೆ ಹೆಚ್ಚಾಗಿದೆ ಎಂದರು.
ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಗ್ರಾಮ ಪಂಚಾಯಿತಿ ಚುನಾವಣೆ ಆಗಲಿ, ವಿಧಾನಸಭೆ, ಲೋಕಸಭೆ ಸೇರಿದಂತೆ ಯಾವ ಚುನಾವಣೆ ಬಂದರೂ ಕಾಂಗ್ರೆಸ್ ಪಕ್ಷದ ಏಕೈಕ ಅಜೆಂಡಾ ಎಂದರೆ ಬಿಜೆಪಿ ವಿರುದ್ಧ ಅಪಪ್ರಚಾರ ಮಾಡುವುದು. ಆ ಮೂಲಕ ಜನರನ್ನು ದಾರಿತಪ್ಪಿಸುವುದೇ ಅವರ ರಾಜಕೀಯ. ಅಭಿವೃದ್ಧಿ, ಉದ್ಯೋಗ, ಗ್ರಾಮೀಣ ಕಾರ್ಮಿಕರ ಬದುಕು ಉತ್ತಮವಾಗುವಂತಹ ಯೋಜನೆಗಳು ಜಾರಿಯಾದಾಗ ಕಾಂಗ್ರೆಸ್‌ಗೆ ಸಹಿಸಿಕೊಳ್ಳಲು ಆಗುವುದಿಲ್ಲ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಎಲ್. ಘೋಟ್ನೇಕರ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಭ್ರಷ್ಟಾಚಾರದಲ್ಲಿ ಮುಳುಗಿದೆ. ಈ ಸತ್ಯವನ್ನು ನಮ್ಮ ಕಾರ್ಯಕರ್ತರು ಸ್ಪಷ್ಟವಾಗಿ ತಿಳಿದುಕೊಂಡು, ಸಂಘಟಿತವಾಗಿ ಹಾಗೂ ಶಿಸ್ತಿನಿಂದ ಕಾರ್ಯನಿರ್ವಹಿಸಬೇಕು. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಎಲ್ಲರು ಒಗ್ಗಟ್ಟಾಗಿ ದುಡಿಯಬೇಕು. ಪ್ರತಿಯೊಂದು ಪಂಚಾಯಿತಿಯಲ್ಲೂ ಬಿಜೆಪಿಯೇ ಅಧಿಕಾರ ಬರಬೇಕು ಎಂಬ ಗುರಿಯೊಂದಿಗೆ ಕೆಲಸ ಮಾಡಬೇಕು ಎಂದರು.
ಮಂಡಲದ ಅಧ್ಯಕ್ಷ ವಿಠ್ಠಲ ಸಿದ್ದನವರ, ಪ್ರಮುಖರಾದ ನಂದು ಗಾಂವ್ಕರ, ಶ್ರೀನಿವಾಸ ಘೋಟ್ನೇಕರ, ಮಂಗೇಶ ದೇಶಪಾಂಡೆ, ಸೋನಪ್ಪ ಸುಣಕಾರ, ಸಂತೋಷ ಘಟಕಾಂಬಳೆ, ಶಿವಾಜಿ ನರಸಾನಿ ಇತರರಿದ್ದರು.