ಸೋನಿಯಾ ಗಾಂಧಿ ಹಾಗೂ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ವಂದೇ ಮಾತರಂ ಗೀತೆಗೆ ಅವಮಾನ ಮಾಡಿದ್ದನ್ನು ಖಂಡಿಸಿ ಶಿರಸಿಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರೇಮಕುಮಾರ ನಾಯ್ಕ, ಗುರುಪ್ರಸಾದ ಹೆಗಡೆ, ಶಿವಾಜಿ ನರಸಾನಿ, ಅನಂತಮೂರ್ತಿ ಹೆಗಡೆ, ಮಂಜುನಾಥ ಭಂಡಾರಿ ಇತರರಿದ್ದರು.
- ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ
ಶಿರಸಿ: ವಂದೇ ಮಾತರಂ ಗೀತೆಗೆ ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ ಹಾಗೂ ವಿಪಕ್ಷ ನಾಯಕ ರಾಹುಲ್ ಗಾಂಧಿ ಅಗೌರವ ತೋರಿರುವುದನ್ನು ಖಂಡಿಸಿ ನಗರದ ಅಂಚೆ ವೃತ್ತದಲ್ಲಿ ಬಿಜೆಪಿ ಉತ್ತರ ಕನ್ನಡ ಜಿಲ್ಲಾ ಯುವ ಮೋರ್ಚಾ ಕಾರ್ಯಕರ್ತರು ಭಾನುವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ವಿಧಾನ ಪರಿಷತ್ ಮಾಜಿ ಶಾಸಕ ಆರ್. ಕೆ. ಸಿದ್ದರಾಮಣ್ಣ, ಮಹಾತ್ಮ ಗಾಂಧೀಜಿ ಸೇರಿದಂತೆ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಎಲ್ಲರಿಗೂ ಅತ್ಯಂತ ಪ್ರೇರಣೆ ನೀಡಿದ ಗೀತೆ ವಂದೇ ಮಾತರಂ.
ನಿನ್ನೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ದೇಶದ 140 ಕೋಟಿ ಜನರು ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ವಂದೇ ಮಾತರಂ ಗೀತೆ ರಚನೆಗೆ 150 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಪೂರ್ಣ ವಂದೇ ಮಾತರಂ ಅನ್ನು ಹಾಡುವಂಥಹ ನಿರ್ಣಯದ ಜತೆಗೆ ಕಾನೂನನ್ನು ಕೇಂದ್ರ ಸರ್ಕಾರ ಮಾಡಿದೆ.
ಆದರೆ, ಕಾಂಗ್ರೆಸ್ ಕೇಂದ್ರ ಕಚೇರಿಯ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಸಂದರ್ಭದಲ್ಲಿ ವಂದೇ ಮಾತರಂ ಹಾಡುವಾಗ ಸೋನಿಯಾ ಗಾಂಧಿ ಅವರು ವಂದೇ ಮಾತರಂ ಅರ್ಧಕ್ಕೆ ನಿಲ್ಲಿಸುವ ರೀತಿಯಲ್ಲಿ ಕೈ ಸನ್ನೆ ಮಾಡಿರುವುದನ್ನು ನಾವೆಲ್ಲರೂ ನೋಡಿದ್ದೇವೆ, ಇದು ಕೇವಲ ಅಗೌರವ ಅಷ್ಟೇ ಅಲ್ಲ, ಇದು ದೊಡ್ಡ ಅಪಚಾರ. ಇದನ್ನು ಭಾರತೀಯ ಜನತಾ ಪಾರ್ಟಿ ಖಂಡಿಸುವುದರೊಂದಿಗೆ ಅವರ ವಿರುದ್ಧ ಕಾನೂನು ಕ್ರಮಕ್ಕೆ ಇರುವ ಅವಕಾಶಗಳನ್ನು ನಾವು ಪರಿಗಣಿಸುತ್ತಿದ್ದೇವೆ ಎಂದರು.
ಹೋರಾಟದ ನೇತೃತ್ವ ವಹಿಸಿದ್ದ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರೇಮಕುಮಾರ ನಾಯ್ಕ ಮಾತನಾಡಿ, ಕಾಂಗ್ರೆಸ್ ಹೈಕಮಾಂಡ್‌ನ ರಾಷ್ಟ್ರ ವಿರೋಧಿ ನಡೆ ವಂದೇ ಮಾತರಂಗೆ ಅಗೌರವ ತೋರುವುದರ ಮೂಲಕ ಮತ್ತೊಮ್ಮೆ ವ್ಯಕ್ತವಾಗಿದೆ. ಇದು ಕಾಂಗ್ರೆಸ್ಸಿನ ಮಾನಸಿಕತೆ ಹಾಗೂ ದುಸ್ಥಿತಿಯನ್ನು ತೋರಿಸುತ್ತದೆ ಎಂದರು.
ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ವಿಭಾಗ ಸಹ ಪ್ರಭಾರಿ ಆರ್.ಡಿ. ಹೆಗಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್, ಪ್ರಶಾಂತ್ ನಾಯ್ಕ, ಶಿವಾಜಿ ನರಸಾನಿ, ಜಿಲ್ಲಾ ಉಪಾಧ್ಯಕ್ಷ ಅಶೋಕ ಚಲವಾದಿ, ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ, ಮಂಡಲ ಅಧ್ಯಕ್ಷರಾದ ಆನಂದ ಸಾಲೇರ, ಉಷಾ ಹೆಗಡೆ, ತಿಮ್ಮಪ್ಪ ಮಡಿವಾಳ, ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಶ್ರೀಕಾಂತ ಬಳ್ಳಾರಿ, ರೈತಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ, ಯುವ ಮೋರ್ಚಾದ ಸುದರ್ಶನ ವೈದ್ಯ, ವಿಜಯ ಶೆಟ್ಟಿ, ಸಚಿನ್ ಭಟ್, ಸಾಮಾಜಿಕ ಜಾಲತಾಣ ಸಂಚಾಲಕ ರವಿಚಂದ್ರ ಶೆಟ್ಟಿ, ಗಣಪತಿ ಕಬ್ಬಿನಮನೆ, ಮಂಜುನಾಥ ಭಂಡಾರಿ, ತೋಟಪ್ಪ ನಾಯ್ಕ, ರಾಮಕಾಂತ ಭಟ್ ಇತರರಿದ್ದರು.