ಶಿರಸಿಯಲ್ಲಿ ನದಿ ತಿರುವು ಯೋಜನೆ ದುಷ್ಪರಿಣಾಮಗಳ ಚಿಂತನಾ ಸಭೆಗೆ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಚಾಲನೆ ನೀಡಿದರು. ಅನಂತ ಅಶೀಸರ, ಗೋಪಾಲಕೃಷ್ಣ ವೈದ್ಯ, ಡಾ. ಟಿ.ವಿ.ರಾಮಚಂದ್ರ ಇತರರಿದ್ದರು. 
ಉತ್ತರ ಕನ್ನಡ

ದುಷ್ಪರಿಣಾಮದ ವೈಜ್ಞಾನಿಕ ಅಂಶ ಸಂಗ್ರಹಿಸಿ

ಪ್ರಮುಖ ಮುಖ್ಯಾಂಶಗಳು

  • ಶಿರಸಿ ಟಿಎಸ್‌ಎಸ್ ಆವರಣದಲ್ಲಿ ವಿಚಾರ ಸಂಕಿರಣ
  • ನದಿ ತಿರುವು ಯೋಜನೆಗೆ ವಿರೋಧ
  • ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳು ಭಾಗಿ
  • ವಿವಿಧ ವಿಷಯಗಳ ಕುರಿತು ವಿಚಾರಗೋಷ್ಠಿ
ಶಿರಸಿ: ಯೋಜನೆಗಳ ದುಷ್ಪರಿಣಾಮಗಳ ಬಗ್ಗೆ ವೈಜ್ಞಾನಿಕ ಅಂಶಗಳನ್ನು ಕಲೆ ಹಾಕುವುದು ಅತ್ಯಂತ ಅವಶ್ಯ. ಅವುಗಳನ್ನು ಸರ್ಕಾರ, ಅವಶ್ಯಬಿದ್ದರೆ ನ್ಯಾಯಾಲಯ ಹಾಗೂ ಅಂತಾರಾಷ್ಟ್ರೀಯ ಚಿಂತಕರ ಮುಂದಿಡುವುದರ ಮೂಲಕ ನಮ್ಮ ಹೋರಾಟದ ಬಲ ಹೆಚ್ಚುತ್ತದೆ ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
ನಗರದ ಟಿಎಸ್‌ಎಸ್ ಸಂಸ್ಥೆ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಬೇಡ್ತಿ-ವರದಾ ಹಾಗೂ ಅಘನಾಶಿನಿ ನದಿ ತಿರುವು ಯೋಜನೆಗಳ ಪರಿಣಾಮಗಳ ಕುರಿತು ಬೇಡ್ತಿ ಕೊಳ್ಳ ಸಂರಕ್ಷಣಾ ಸಮಿತಿಯಿಂದ ನಡೆದ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ನದಿಗಳು ಭೂಮಿ ತಾಯಿಯ ರಕ್ತನಾಳಗಳಂತೆ ಕಾರ್ಯನಿರ್ವಹಿಸುತ್ತವೆ. ಅವುಗಳಿಗೆ ಅಡ್ಡಿ ತಂದರೆ ಪರಿಸರದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ. ಈ ಬಗ್ಗೆ ವೈಜ್ಞಾನಿಕ ಚಿಂತನೆ ನಡೆಯಬೇಕು ಎಂದರು.
ನದಿ ನೀರಿನ ಹರಿವು ಸಹಜವಾಗಿರಬೇಕು. ಆಗಲೇ ಪರಿಸರ ವ್ಯವಸ್ಥೆ ಆರೋಗ್ಯಪೂರ್ಣವಾಗಿರುತ್ತದೆ. ಆದರೆ ಸಹಜ ಹರಿವಿಗೆ ಅಡ್ಡಿಯಾದಾಗ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಯೋಜನೆಯೊಂದನ್ನು ಕಾರ್ಯಗತಗೊಳಿಸುವುದು ದೊಡ್ಡ ವಿಷಯವಲ್ಲ, ಆದರೆ, ಅದರಿಂದಾಗುವ ಸಮಸ್ಯೆಗಳು ಏನು? ಮೀನುಗಾರಿಕೆ, ಕೃಷಿ, ವನ್ಯಜೀವಿಗಳ ಮೇಲೆ ಪರಿಣಾಮ ಏನು? ಭೂ ಕುಸಿತದ ಆತಂಕವಿದೆಯೇ ಎಂಬುದನ್ನೂ ಅರಿತುಕೊಳ್ಳಬೇಕಿದೆ. ಆದ್ದರಿಂದ ಇಂದಿನ ವಾತಾವರಣದಲ್ಲಿ ಜನಾಂದೋಲನ, ಲಾಬಿ, ನ್ಯಾಯಾಲಯ ಹೋರಾಟದಂತೆ ವೈಜ್ಞಾನಿಕತೆ ಹೋರಾಟವೂ ಸುಧೀರ್ಘ ಪರಿಣಾಮ ಬೀಳುತ್ತದೆ ಎಂದರು.
ಕಳೆದ ನಾಲ್ಕು ದಶಕಗಳ ಹಿಂದೆ ಜಾಗತಿಕ ತಾಪಮಾನ ಸಮಸ್ಯೆ ಇರಲಿಲ್ಲ. ಪರಿಸರ ಜ್ವಲಂತ ಸಮಸ್ಯೆಗಳು ಸಷ್ಟವಾಗಿ ಗೊತ್ತಾಗುತ್ತಿರಲಿಲ್ಲ. ಆದರೆ ಈಗ ಎಲ್ಲವೂ ಸ್ಪಷ್ಟವಾಗಿ ತಿಳಿಯುತ್ತಿದ್ದು ಗಂಭೀರ ಚಿಂತನೆ ಅವಶ್ಯ ಎಂದರು.
ಪರಿಸರ ವಿಜ್ಞಾನಿ ಡಾ.ಟಿ.ವಿ. ರಾಮಚಂದ್ರ, ನೀರಾವರಿ ತಜ್ಞ ಡಾ.ರಾಜೇಂದ್ರ ಪೋದ್ದಾರ್, ಭೂಗರ್ಭ ಶಾಸ್ತ್ರಜ್ಞ ಡಾ. ಶ್ರೀನಿವಾಸ ರೆಡ್ಡಿ, ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಸ್ವರ್ಣವಲ್ಲೀ ಮಠದ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ಮನಳ್ಳಿ, ಪ್ರೊ.ಬಿ.ಎಂ. ಕುಮಾರಸ್ವಾಮಿ ಉಪಸ್ಥಿತರಿದ್ದರು.
ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಸ್ವಾಗತಿಸಿದರು. ಕೇಶವ ಕೊರ್ಸೆ ಪ್ರಸ್ತಾವಿಕ ಮಾತನಾಡಿದರು. ಸುರೇಶ ಹಕ್ಕೀಮನೆ ನಿರೂಪಿಸಿದರು. ನಂತರ ವಿವಿಧ ವಿಷಯ ತಜ್ಞರಿಂದ ವಿಚಾರಗೋಷ್ಠಿಗಳು ನಡೆದವು.

ಜಿಲ್ಲೆಯಲ್ಲಿ ಪ್ರಸ್ತಾಪಿತ ಬೇಡ್ತಿ-ವರದಾ, ಅಘನಾಶಿ-ವೇದಾವತಿ, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಹಾಗೂ ಕೇಣಿ ಯೋಜನೆಗಳ ಕುರಿತು ಗಂಭೀರವಾಗಿ ಗಮನಹರಿಸಬೇಕಿದೆ.

ಜಿಲ್ಲೆಯ ಪರಿಸರ ಧಾರಣಾ ಸಾಮರ್ಥ್ಯ ಈಗಾಗಲೇ ಮುಗಿದಿದೆ. ಈ ಬಗೆಗಿನ ಅಧ್ಯಯನ ವರದಿಯೂ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಬೇಡ್ತಿ-ವರದಾ ನದಿ ಪ್ರದೇಶ ವನ್ಯಜೀವ ಸಂರಕ್ಷಿತ ಪ್ರದೇಶ ಎಂದು ಘೋಷಣೆಯಾಗಿದೆ. ಆದಾಗ್ಯೂ ದ್ವಂದ ಏಕೆ ?

ಈಗಿರುವ ನೀರಾವರಿ ಯೋಜನೆಗಳಲ್ಲಿ ವ್ಯರ್ಥವಾಗುತ್ತಿರುವ ಶೇ. 70ರಷ್ಟು ನೀರನ್ನು ಸದ್ಭಳಕೆ ಮಾಡಿಕೊಂಡರೆ ಹೊಸ ನೀರಾವರಿ ಯೋಜನೆಗಳ ಅಗತ್ಯವಿಲ್ಲ. ಜಿಲ್ಲೆಯ ನದಿಗಳಿಗೆ ಹಾನಿ ಮಾಡಿ ಪೂರ್ವಕ್ಕೆ ನೀರು ಒಯ್ದು ಅಭಿವೃದ್ಧಿ ಮಾಡುವುದರಿಂದ ಪರಿಸರ ಅಸಮತೋಲನ ಉಂಟಾಗುತ್ತದೆ.

ಜಿಲ್ಲೆಯಲ್ಲಿ 1973ರಲ್ಲಿ ಶೇ 83 ರಷ್ಟಿದ್ದ ಅರಣ್ಯ ಪ್ರಸ್ತುತ ಶೇ. 23ಕ್ಕೆ ಬಂದು ತಲುಪಿದೆ. ಜಿಲ್ಲೆಯ ಒಂದು ಭಾಗ ಹಸಿರಾಗಿದೆ. ಇನ್ನುಳಿದ ಭಾಗ ಬರಡಾಗಿದೆ. ಕೆಪಿಸಿಯವರು ಯೋಜನೆಗೆ ತೆಗೆದ ಮರಗಿಡ ನಂತರ ಬೆಳೆಸಲಿಲ್ಲ. ಜಲಾನಯನ ಪ್ರದೇಶ ಕಡಿಮೆಯಾಗಿದೆ.

ವಿಚಾರ ಸಂಕಿರಣದ ಪ್ರಮುಖ 12 ನಿರ್ಣಯಗಳು
  • ಬೇಡ್ತಿ-ಅಘನಾಶಿನಿ ನದಿಗಳಲ್ಲಿ ಕೇವಲ ಮಳೆಗಾಲದ ಅವಧಿಯಲ್ಲಿ ಮಾತ್ರ ಪ್ರವಾಹ ಇದ್ದು, ಉಳಿದ ಒಂಬತ್ತು ತಿಂಗಳು ನೀರಿನ ಹರಿವು ತೀರಾ ಕಡಿಮೆ ಇರುತ್ತದೆ. ಹೀಗಾಗಿ, ಹೆಚ್ಚುವರಿ ನೀರಿದೆ ಎಂಬ ತಪ್ಪು ಲೆಕ್ಕವನ್ನು ಕೈ ಬಿಡಬೇಕು.
  • ಬೇಡ್ತಿ ಹಾಗೂ ಅಘನಾಶಿನಿ ನದಿಗಳು ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಮೇಲಿನ ಹಾಗೂ ಕೆಳಗಿನ ಪ್ರದೇಶಗಳ ಜನವಸತಿ, ಕೃಷಿಭೂಮಿ, ಕಾಡು, ಗೋಮಾಳ, ಕೆರೆಗಳಿಗೆ ನಿರಂತರ ನೀರು ಒದಗಿಸುವ ಜಲಮೂಲವಾಗಿದೆ. ನದಿ ತಿರುವಿನಿಂದ ಅಂತರ್ಜಲ ಮಟ್ಟ ಕುಸಿಯಲಿದೆ.
  • ಪಶ್ಚಿಮಘಟ್ಟ ಜೀವವೈವಿಧ್ಯ ನಾಶ ಹಾಗೂ ವನ್ಯಜೀವಿ- ಮಾನವ ಸಂಘರ್ಷದ ಹೆಚ್ಚಳವಾಗುವ ಸಾಧ್ಯತೆ ಹೆಚ್ಚು.
  • ನದಿ ತಿರುವು ಕಾಮಗಾರಿಗಳಿಂದ ಮಲೆನಾಡಿನ ಇಳಿಜಾರಿನ ಗುಡ್ಡ-ಕಣಿವೆಗಳ ಕಾಡು ಛಿದ್ರವಾಗಿ, ಅತ್ಯಮೂಲ್ಯ ಮೇಲ್ಮಣ್ಣು ನಾಶವಾಗಿ, ಮಳೆಗಾಲದಲ್ಲಿ ಭೂಕುಸಿತದ ಸಾಧ್ಯತೆಗಳು ಹೆಚ್ಚುತ್ತವೆ.
  • ಯೋಜನೆಗಳಿಂದ ಈ ನದಿಗಳಲ್ಲಿ ನೀರಿನ ಹರಿವು ಕಡಿಮೆಯಾದಾಗ, ಅಂಕೋಲಾ ತಾಲೂಕಿನ ಗಂಗಾವಳಿ (ಬೇಡ್ತಿ ನದಿಯ ಕೆಳಹರಿವಿನ ಪ್ರದೇಶ ) ಹಾಗೂ ಕುಮಟಾ ತಾಲೂಕಿನ ಅಘನಾಶಿನಿ ನದಿ ತಪ್ಪಲಿನ ಪ್ರದೇಶಗಳ ಅಳಿವೆಗಳಿಗೆ ನೀರಿನ ಕೊರತೆಯಾಗಿ, ಅಲ್ಲಿನ ಕಾಂಡ್ಲಾಕಾಡು ನಾಶವಾಗಿ, ಜಲಚರಗಳ ವಂಶಾಭಿವೃದ್ಧಿ ತಾಣ ನಾಶವಾಗುತ್ತದೆ.
  • ಈಗಾಗಲೇ ತಲೆದೋರಿರುವ ಕರಾವಳಿಯ ಮತ್ಸೃಕ್ಷಾಮ ಇನ್ನಷ್ಟು ಬಿಗಡಾಯಿಸಿ, ಮೀನುಗಾರರ ಜೀವನೋಪಾಯ ನಾಶವಾಗುತ್ತದೆ.
  • ನೀರಿನ ಹರಿವು ಕಡಿಮೆಯಾದಾಗ ಸಮುದ್ರದ ಉಪ್ಪುನೀರು ನದಿಗಳ ಮೂಲಕ ಕರಾವಳಿಯ ಒಳಪ್ರದೇಶಗಳಿಗೆ ನುಗ್ಗಿ, ಬಾವಿ, ಕೃಷಿಮಣ್ಣು, ಕುಡಿಯುವ ನೀರಿನ ಮೂಲ -ಎಲ್ಲವೂ ಅತಿಯಾಗಿ ಉಪ್ಪಾಗುವ ಅಪಾಯ ಹೆಚ್ಚುತ್ತವೆ . ಇದರಿಂದ ಭೂಮಿ ಫಲವತ್ತತೆ ನಾಶವಾಗಿ ಬೇಸಾಯ ಕಷ್ಟವಾಗುತ್ತದೆ . ಕುಡಿಯುವ ನೀರಿನಕೊರತೆ ಮತ್ತಷ್ಟು ಗಂಭೀರವಾಗುತ್ತದೆ.
  • ನದಿತಿರುವು ಯೋಜನೆಗಳಿಂದ ನದಿಯ ಸಹಜಪ್ರವಾಹ ಕಡಿಮೆಯಾಗಿ, ಕರಾವಳಿ ಪ್ರದೇಶದ ಮೀನುಗಾರಿಕೆ ಹಾಗೂ ಕೃಷಿಯ ಫಲವತ್ತತೆ ಕುಸಿಯುತ್ತದೆ.
  • ಘಟ್ಟ ಪ್ರದೇಶದ ಮೇಲ್ಮಣ್ಣಿನ ಸೂಕ್ಷ್ಮ ಸ್ವರೂಪದಿಂದಾಗಿ ಕಾಲುವೆಗಳು ಹಾಗೂ ಜಲಾಶಯಗಳಲ್ಲಿ ಹೂಳು ವೇಗವಾಗಿ ತುಂಬುತ್ತದೆ. ಹೀಗಾಗಿ, ನಿರಂತರ ಹೂಳು ತೆಗೆಯುವ ಕಾಮಗಾರಿಗಳಿಗೆ ಹಣ ವ್ಯಯಿಸಿಯುವ ಅನಿವಾರ್ಯತೆ ಎದುರಾಗುತ್ತದೆ.
  • ಬೇಡ್ತಿ-ಅಘನಾಶಿನಿ ನದಿ ತಪ್ಪಲಿನ ಲಕ್ಷಾಂತರ ಸಣ್ಣ ರೈತರು, ಗೌಳಿ, ಸಿದ್ದಿ, ಒಕ್ಕಲಿಗ, ಕುಣಬಿ, ಹಾಲಕ್ಕಿ ತೆರನ ವನವಾಸಿಗಳು, ಮೀನುಗಾರರು ಜೀವನೋಪಾಯಕ್ಕೆ ಭಂಗ ಬರಲಿದೆ.
  • ನದಿ ತಿರುವು ಯೋಜನೆಗಳು ಬಯಲುನಾಡಿನ ನೀರಾವರಿಗಾಗಲೀ ಅಥವಾ ರೈತರಿಗಾಗಲೀ ಸಹಾಯಮಾಡುವದಿಲ್ಲ ಎಂಬ ಅಂಶ ಸ್ಪಷ್ಟವಾಗಿದೆ.
  • ಮಲೆನಾಡಿನ ಬಹುಪಾಲು ತೋಟಗಾರಿಕಾ ಪ್ರದೇಶಗಳಿಗೆ ಈಗಲೂ ಸರಿಯಾದ ನೀರಾವರಿ ಸೌಲಭ್ಯವಿಲ್ಲ. ಸ್ಥಳೀಯ ನದಿತೊರೆಗಳನ್ನು ಬಳಸಿಕೊಂಡು ಜಲನಯನ ಅಭಿವೃದ್ಧಿ ತತ್ವದಡಿ ಇಲ್ಲಿನ ರೈತರಿಗೆ ಸುಸ್ಥಿರ ನೀರಾವರಿ ಯೋಜನೆ ಕಲ್ಪಿಸಿ.
  • ಬೇಡ್ತಿ ಹಾಗೂ ಅಘನಾಶಿನಿ ನದಿ ತಿರುವು ಯೋಹನೆಗಳು. ಶರಾವತಿ ಭೂಗತ ಜಲವಿದ್ಯುತ್, ಕೇಣಿ ಬಂದರು ಸೇರಿದಂತೆ, ಮಲೆನಾಡು-ಕರಾವಳಿಯ ಪರಿಸರ ಹಾಗೂ ಜೀವನಭದ್ರತೆಗೆ ಭಂಗತರುವ ಯಾವುದೇ ಬೃಹತ್ ಯೋಜನೆಗಳನ್ನು ಕೈಗೆತ್ತಿಕೊಳ್ಳಬಾರದು.