ಅಂಕೋಲಾ ಗಂಗಾವಳಿ ಸೇತುವೆಯನ್ನು ಸಿದ್ದರಾಮಯ್ಯ ಉದ್ಘಾಟಿಸಿದರು. 
ಉತ್ತರ ಕನ್ನಡ

ಚುನಾವಣೆ ಮುಗಿದ ನಂತರ ಗೋಕರ್ಣ ಪಪಂ ರಚನೆ

ಸುಭಾಸ ಹೆಗಡೆ ಧೂಪದಹೊಂಡ
ಕಾರವಾರ: ಜನಗಣತಿ ಹಾಗೂ ಜಿಪಂ, ತಾಪಂ ಚುನಾವಣೆ ಮುಗಿದ ನಂತರ ಗೋಕರ್ಣ ಗ್ರಾಪಂನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಗಂಗಾವಳಿ-ಮಂಜಗುಣಿ ಸೇತುವೆ ಉದ್ಘಾಟಿಸಿ ಅವರು ಮಾತನಾಡಿದರು.
ದಿನಕರ ಶೆಟ್ಟಿ ಅವರು ಗೋಕರ್ಣ ಗ್ರಾಪಂ ಮೇಲ್ದರ್ಜೆಗೇರಿಸಲು ಮನವಿ ಮಾಡಿದ್ದಾರೆ. ಆದರೆ, ಜೂನ್ ಒಳಗಡೆ ತಾಪಂ, ಜಿಪಂ, ಗ್ರಾಪಂ ಚುನಾವಣೆ ಮಾಡುತ್ತೇವೆ. ವಾರ್ಡ್ ಗಳ ಮರು ವಿಂಗಡಣೆ ಮಾಡಬೇಕು. ಇದರಿಂದ ಈಗ ಸ್ಥಳೀಯ ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸುವುದನ್ನು ನಿಲ್ಲಿಸಿದ್ದೇವೆ ಎಂದರು.

*ಕೇಂದ್ರ ತಿರಸ್ಕಾರ ಮಾಡಿದೆ.

ಹಾಲಕ್ಕಿಗಳನ್ನು ಎಸ್ ಟಿಗೆ ಸೇರಿಸಬೇಕಾದ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ. ಆದರೆ, ಕೇಂದ್ರ ಸರ್ಕಾರ ಒಮ್ಮೆ ಹಾಲಕ್ಕಿಗಳ ಪರಿಶಿಷ್ಟ ಪಂಗಡದ ಪ್ರಸ್ತಾವನೆ ತಿರಸ್ಕರಿಸಿದೆ. ಅದಕ್ಕಾಗಿ ಮರು ಪ್ರಸ್ತಾವನೆ ಕಳಿಸುತ್ತೇವೆ. ಆದರೆ, ತೀರ್ಮಾನ ಮಾಡುವುದು ಕೇಂದ್ರ ಸರ್ಕಾರ ಎಂದರು.

ಸಂತೋಷ ತಂದಿದೆ:

2017 ರಲ್ಲಿ ದೇಶಪಾಂಡೆ ಅವರು ಜಿಲ್ಲಾ ಉಸ್ತುವಾರಿ ಸಚಿವರಿದ್ದಾಗ ಶಂಕುಸ್ಥಾಪನೆ ಮಾಡಿದ್ದೆ. ಇಂದು ನಾನೇ ಉದ್ಘಾಟನೆ ಮಾಡುತ್ತಿರುವುದು ಸಂತೋಷ ತಂದಿದೆ.
ಹಿಂದಿನ ಸರ್ಕಾರ ಆಸಕ್ತಿ ತೆಗೆದುಕೊಳ್ಳದ ಕಾರಣ ಸೇತುವೆ ನಿರ್ಮಾಣ, ಉದ್ಘಾಟನೆ ವಿಳಂಬವಾಗಿದೆ.
ಈ ಸೇತುವೆ ಉದ್ಘಾಟನೆಯಿಂದ ಅಂಕೋಲಾ-ಗೋಕರ್ಣ ಅಂತರ
18 ಕಿಮೀ ಕಡಿಮೆಯಾಗಿದೆ. 700 ಮೀಟರ್ ಸೇತುವೆ ಮಾಡಿದ್ದರಿಂದ ಅಂಕೋಲಾ-ಗೋಕರ್ಣ ಜನರಿಗೆ ಅನುಕೂಲವಾಗಿದೆ. ಅಡಿಗಲ್ಲು ಹಾಕಿದಾಗ 28 ಕೋಟಿ. ಯೋಜನಾ ವೆಚ್ಚವಿತ್ತು. ಈಗ 35 ಕೋಟಿ ಆಗಿದೆ ಎಂದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ಜನರಿಗೆ ನಾನೇನು ಮಾಡಿದ್ದೇನೆ ಎಂಬುದನ್ನು ಮರೆಯಬೇಕು. ಮುಂದೇನು ಮಾಡಬೇಕು ಎಂದು ಯೋಚಿಸಬೇಕಾಗಿದೆ. ಸಿಕ್ಕಿರುವ ಅವಕಾಶ ಬಳಸಿಕೊಳ್ಳಬೇಕು. ಉತ್ತರ ಕನ್ನಡ ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಐದು ಶಾಸಕರನ್ನು ಕಾಂಗ್ರೆಸ್ ಗೆ ಕೊಟ್ಟು ಶಕ್ತಿ ಕೊಟ್ಟಿದ್ದೀರಿ. ವೇದಿಕೆಯಲ್ಲಿ ದಿನಕರ ಶೆಟ್ಟಿ ಅವರಿರಬಹುದು. ಆದರೆ, ಹಿಂದಿನ ಸರ್ಕಾರ ಅವಧಿಯಲ್ಲಿ ಆಗದ ಕೆಲಸ ಮಾಡಿ ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗಿದ್ದೇವೆ.
ಕಲ್ಲಿನಿಂದ ಗೋಡೆಯನ್ನೂ ಕಟ್ಟಬಹುದು. ಸೇತುವೆಯನ್ನೂ ಕಟ್ಟಬಹುದು. ಗೋಡೆ ಪರಸ್ಪರ ಇಬ್ಭಾಗ ಮಾಡುತ್ತದೆ. ಸೇತುವೆ ಪರಸ್ಪರ ಬೆಸೆಯುತ್ತದೆ. ನಮಗೂ ಬೇರೆಯವರಿಗೂ ಇರುವ ವ್ಯತ್ಯಾಸ ಅದೇ ಆಗಿದೆ.
ಕರಾವಳಿಯ ಅಭಿವೃದ್ಧಿಗೆ ಅನೇಕ ಯೋಜನೆ ರೂಪಿಸುತ್ತಿದ್ದೇವೆ. ಕರಾವಳಿ ಪ್ರವಾಸೋದ್ಯ ಅಭಿವೃದ್ಧಿ ಯೋಜನೆ ಜಾರಿಗೆ ಸಿದ್ಧತೆ ಮಾಡಿದ್ದೇವೆ.
ಈ ನದಿ ಹಸಿರು, ಪರಿಸರ ಕರ್ನಾಟಕಕ್ಕೆ ದೊಡ್ಡ ಆಸ್ತಿ. 334 ಕಿಮೀ ಉದ್ದದ ಕರಾವಳಿ ಅಭಿವೃದ್ಧಿ ಮಾಡಿ. ಇಲ್ಲಿನ ಯುವಕರಿಗೆ ಇಲ್ಲೇ ಉದ್ಯೋಗ ಕೊಡಿಸುವ ಯೋಜನೆ ಹೊಂದಿದ್ದೇವೆ.
ನಾವು ಒಗ್ಗಟ್ಟಿನಿಂದ ಜಿಲ್ಲೆಯ ಅಭಿವೃದ್ಧಿ ಮಾಡಲು ಮುಂದಾಗಿದ್ದೇವೆ.
ಸಚಿವ ಮಂಕಾಳ ವೈದ್ಯ, ಶಾಸಕರಾದ ಆರ್.ವಿ.ದೇಶಪಾಂಡೆ, ಸತೀಶ ಸೈಲ್, ಭೀಮಣ್ಣ ನಾಯ್ಕ, ದಿನಕರ ಶೆಟ್ಟಿ ಇದ್ದರು.

ನಿಮ್ಮನ್ನ ಸೇರಿಸಿಕೊಳ್ಳಲ್ಲ

ಶಾಸಕ ದಿನಕರ ಶೆಟ್ಟಿ ಅವರನ್ನು ಸಂಬೋಧಿಸಿದ ಸಿದ್ದರಾಮಯ್ಯ ಅವರು "ಏ ಶೆಟ್ಟಿ ನೀನು ಅಲ್ಲೇ ಬಿಜೆಪಿಯಲ್ಲೇ ಇರು. ನಾವು ಯಾರನ್ನೂ ಸೇರಿಸಿಕೊಳ್ಳುವುದಿಲ್ಲ. ಯಾರನ್ನೂ ತಡೆಯುವುದಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು.
.....