ಹವಾಮಾನ ಸ್ಥಿತಿಸ್ಥಾಪಕ ಗ್ರಾಮದ ಲೋಗೋ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ 2 ಸೇರಿ ರಾಜ್ಯದ ಕರಾವಳಿಯ ಐದು ಗ್ರಾಮಗಳನ್ನು ಹವಾಮಾನ ಸ್ಥಿತಿಸ್ಥಾಪಕ ಗ್ರಾಮಗಳು ಎಂದು ಗುರುತಿಸಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರು ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಕೇಂದ್ರ ಹೈನುಗಾರಿಕೆ, ಪಶು ಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ಲಲನ್ ಸಿಂಗ್ ಉತ್ತರ ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮಠದ ಹಿತ್ಲು ಹಾಗೂ ಬೈಲೂರು, ಉಡುಪಿ ಜಿಲ್ಲೆಯ ಉಪು÷್ಪಂದ, ಮಡಿಕಲ್ ಕೋಟೇಶ್ವರ ಗ್ರಾಮಗಳನ್ನು ಪ್ರಧಾನ ಮಂತ್ರಿ ಮತ್ಸಸಂಪದ ಯೋಜನೆಯಲ್ಲಿ ಹವಾಮಾನ ಸ್ಥಿತಿಸ್ಥಾಪಕ (ಸಿಆರ್‌ಸಿಎಫ್‌ವಿ) ಗ್ರಾಮಗಳಾಗಿ ಆಯ್ಕೆ ಮಾಡಲಾಗಿದೆ.
ಹವಾಮಾನ ಬದಲಾವಣೆಯ ಅಪಾಯಗಳಿಂದ ಮೀನುಗಾರರನ್ನು ರಕ್ಷಿಸುವುದು ಮಾತ್ರವಲ್ಲದೇ,ಅಲ್ಲಿ ಆಧುನಿಕ ಮೂಲ ಸೌಕರ್ಯ, ಸಂರಕ್ಷಿತ ನೆಲೆಗಳು ಮತ್ತು ಪರಿಸರ ಸ್ನೇಹಿ ಮೀನುಗಾರಿಕೆ ಚಟುವಟಿಕೆಗಳಿಗೆ ಕೇಂದ್ರ ಸರ್ಕಾರ ಸಂಪೂರ್ಣ ಆರ್ಥಿಕ ನೆರವು ನೀಡಲಿದೆ. ಕರಾವಳಿ ಮೀನುಗಾರರ ಆರ್ಥಿಕ ಸಬಲೀಕರಣ ಹಾಗೂ ಸುಸ್ಥಿರ ಅಭಿವೃದ್ಧಿಗೆ ಯೋಜನೆ ಪೂರಕವಾಗಿದೆ ಎಂದು ಅವರು ವಿವರಿಸಿದ್ದಾರೆ. ದೇಶದ ಕರಾವಳಿಯಲ್ಲಿ ಈ ರೀತಿಯ ಒಟ್ಟು 100 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
491 ಕೋಟಿ ರೂ:
ಕರಾವಳಿ ಬಂದರುಗಳ ಅಭಿವೃದ್ಧಿ ವಿಚಾರವಾಗಿ ಕೇಂದ್ರ ಬಂದರು, ಹಡಗು ಮತ್ತು ಜಲ ಮಾರ್ಗಗಳ ಸಚಿವ ಸರ್ಬಾನಂದ್ ಸೋನೋವಾಲ್ ಉತ್ತರಿಸಿದ್ದು, ಸಾಗರಮಾಲಾ ಯೋಜನೆಯಡಿ 491 ಕೋಟಿ ವೆಚ್ಚದಲ್ಲಿ 8 ಪ್ರಮುಖ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದಿದ್ದಾರೆ.
ಕಾರವಾರ ವಾಣಿಜ್ಯ ಬಂದರಿಗೆ ಅಗ್ನಿಶಾಮಕ ಉಪಕರಣ ಅಳವಡಿಕೆ ಕಾಮಗಾರಿ ಮುಗಿದಿದೆ. ಉತ್ತರ ಕನ್ನಡ ಅಮದಳ್ಳಿ ಬಂದರು ಆಧುನೀಕರಣ ಕಾಮಗಾರಿ ನಡೆಯಬೇಕಿದೆ. ಅಲ್ಲದೇ ಕುಳಾಯಿ ಮೀನುಗಾರಿಕೆ ಬಂದರು, ಹೆಜಮಾಡಿ ಬಂದರುಗಳ ಅಭಿವೃದ್ಧಿ ನಡೆದಿದೆ ಎಂದು ಅವರು ವಿವರಿಸಿದ್ದಾರೆ.