ಹೂಳು ತುಂಬಿ ಕಲ್ಮಶವಾಗಿರುವ ಸರಾಬಿ( sarabi )ನದಿಯ ತಟ. 
ಉತ್ತರ ಕನ್ನಡ

sarabi : ಐತಿಹಾಸಿಕ ಸರಾಬಿ ನದಿ ಹೂಳೆತ್ತಿ ಶುಚಿತ್ವ ಕಾಪಾಡಿ

ಭಟ್ಕಳ: ಭಟ್ಕಳದ ಜೀವನಾಡಿಯಾಗಿಯೂ ಕರಾವಳಿ ಭಾಗದ ಪ್ರಮುಖ ಸಮುದ್ರ ವಾಣಿಜ್ಯ ಕೇಂದ್ರವಾಗಿಯೂ ಹೆಸರುವಾಸಿಯಾಗಿದ್ದ ಐತಿಹಾಸಿಕ ಸರಾಬಿ ( sarabi ) ನದಿ ಈಗ ನಿರ್ಲಕ್ಷೃಕ್ಕೆ ಒಳಗಾಗಾದ್ದು, ಹೂಳು ತುಂಬಿ ಗೋಳಾಡುತ್ತಿದೆ.
ನದಿಗೆ ಐತಿಹಾಸಿಕ ಮಹತ್ವವೂ ಇದ್ದು, ರಾಣಿ ಚೆನ್ನಾಭೈರಾದೇವಿ ಅವರು ತಮ್ಮ ಆಡಳಿತಾವಧಿಯಲ್ಲಿ ಅರಬ್ಬೀ ಸಮುದ್ರದಿಂದ ಅರಮನೆಗೆ ಸಂಚರಿಸಲು ಇದೇ ಜಲಮಾರ್ಗವನ್ನು ಬಳಸುತ್ತಿದ್ದರು ಎಂಬ ಇತಿಹಾಸವಿದೆ. ಈಗ ನದಿ ಶೋಚನೀಯ ಸ್ಥಿತಿ ತಲುಪಿದ್ದು, ನದಿಯ ಅನೇಕ ಭಾಗಗಳಲ್ಲಿ ನೀರು ಸಂಪೂರ್ಣವಾಗಿ ಒಣಗಿ ಬಯಲಿನಂತಾಗಿದೆ.
ಹೂಳು, ಕಸ ಹಾಗೂ ಶುದ್ಧೀಕರಿಸದ ಒಳಚರಂಡಿ ನೀರಿನಿಂದ ನದಿ ಸಂಪೂರ್ಣ ಕಲುಷಿತಗೊಂಡಿದೆ. ವಿಶೇಷವಾಗಿ ಫೌಸಿಯಾ ಸ್ಟ್ರೀಟ್ ಭಾಗದ ಒಳಚರಂಡಿ ನೀರು ನೇರವಾಗಿ ನದಿಗೆ ಸೇರುತ್ತಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಹಲವೆಡೆ ಕಸದ ರಾಶಿ, ಹೂಳು ಮತ್ತು ನಿಂತ ನೀರು ಮಾತ್ರ ಕಾಣಸಿಗುತ್ತಿದ್ದು, ನದಿಯಲ್ಲಿ ಸಹಜ ನೀರಿನ ಹರಿವು ಬಹುತೇಕ ಮಾಯವಾಗಿದೆ.
ಪಶ್ಚಿಮ ಘಟ್ಟ ಪ್ರದೇಶದಲ್ಲಿ ಉದ್ಭವಿಸುವ ಸರಾಬಿ ನದಿ ಸುಮಾರು 20 ಕಿಲೋ ಮೀಟರ್ ದೂರ ಭಟ್ಕಳ ಪಟ್ಟಣದ ಮೂಲಕ ಹರಿದು ಬಂದರಿನ ಸಮೀಪ ಅರಬ್ಬೀ ಸಮುದ್ರ ಸೇರುತ್ತದೆ. ಆದರೆ, ಹಲವು ವರ್ಷಗಳಿಂದ ಸಮರ್ಪಕ ಹೂಳು ತೆಗೆದಿಲ್ಲ, ತ್ಯಾಜ್ಯ ವಿಸರ್ಜನೆ ಹಾಗೂ ಅತಿಕ್ರಮಣಗಳಿಂದ ನದಿಯ ಅಸ್ತಿತ್ವವೇ ಸಂಕಷ್ಟಕ್ಕೆ ಸಿಲುಕಿದೆ.
ನದಿಯ ದುಸ್ಥಿತಿಯನ್ನು ಗಮನಿಸಿದ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ಒಂದು ವರ್ಷದ ಹಿಂದೆ ನದಿ ಸ್ವಚ್ಛತೆ ಮತ್ತು ಪುನಶ್ಚೇತನ ಕಾಮಗಾರಿಗೆ 10 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದರು. ಮಳೆಗಾಲಕ್ಕೂ ಮುನ್ನ ನದಿಯನ್ನು 10 ಅಡಿ ಆಳಕ್ಕೆ ಹೂಳೆತ್ತುವುದು, ಹೂಳು, ಗದ್ದಲು, ಮುಳ್ಳಿನ ಗಿಡಗಳು ಹಾಗೂ ಕಸ ತೆರವುಗೊಳಿಸಿ ನದಿಯ ಸಹಜ ಹರಿವನ್ನು ಪುನಃಸ್ಥಾಪಿಸುವ ಯೋಜನೆ ರೂಪಿಸಲಾಗಿತ್ತು.
ಕಾಮಗಾರಿಯನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳುವಂತೆ ಸಣ್ಣ ನೀರಾವರಿ ಇಲಾಖೆಗೆ ಸಚಿವರು ಸೂಚನೆ ನೀಡಿದ್ದರು. ಆದರೆ, ಇದುವರೆಗೆ ಕಾಮಗಾರಿ ಆರಂಭವಾಗಿಲ್ಲ ಎಂಬುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ. ಐತಿಹಾಸಿಕ ಮಹತ್ವ ಹೊಂದಿರುವ ಸರಾಬಿ ನದಿಯನ್ನು ತಕ್ಷಣ ಪುನರುಜ್ಜೀವನಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ನಿರ್ಲಕ್ಷ್ಯ ಮುಂದುವರಿದರೆ ಮಳೆಗಾಲದಲ್ಲಿ ಪ್ರವಾಹ ಹಾಗೂ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.