ಶಿರಸಿಯ ಮಾರಿಕಾಂಬಾ ದೇವಸ್ಥಾನದ ವತಿಯಿಂದ ಆಯೋಜಿಸಲಾಗಿರುವ ಅನ್ನ ಸಂತರ್ಪಣೆಯಲ್ಲಿ ಭಕ್ತರು ಪ್ರಸಾದ ಸ್ವೀಕರಿಸಿದರು.
- ಪ್ರತಿ ದಿನ 15 ಸಾವಿರಕ್ಕೂ ಅಧಿಕ ಭಕ್ತರಿಗೆ ಅನ್ನ ಸಂತರ್ಪಣೆ
ಶಿರಸಿ: ಗದ್ದುಗೆ ಏರಿ ಕುಳಿತ ಮಾರಿಕಾಂಬಾ ದೇವಿಯ ದರ್ಶನಕ್ಕೆ ಬಂದ ಭಕ್ತರಿಗೆ ಮಧ್ಯಾಹ್ನ ದೇವಸ್ಥಾನದ ವತಿಯಿಂದ ಅನ್ನ ಸಂತರ್ಪಣೆ ಆಯೋಜಿಸಲಾಗಿದ್ದು, ಪ್ರತಿ ದಿನ 15 ಸಾವಿರಕ್ಕೂ ಅಧಿಕ ಭಕ್ತರು ಇಲ್ಲಿ ಊಟ ಮಾಡುತ್ತಿದ್ದಾರೆ.
ಇಲ್ಲಿಯ ಮಾರಿಗುಡಿ ಶಾಲಾ ಆವರಣದಲ್ಲಿ ಪ್ರತಿ ಜಾತ್ರೆಯಂತೆ ಈ ವರ್ಷವೂ ಭಕ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿದ್ದು, ಮಾರಿಕಾಂಬಾ ದೇವಿಯ ದರ್ಶನ ಪಡೆದ ಭಕ್ತರು ಇಲ್ಲಿಗೆ ಆಗಮಿಸಿ ಶುಚಿ ರುಚಿಯ ಪ್ರಸಾದ ಭೋಜನ ಸವಿಯುತ್ತಿದ್ದಾರೆ. ಶುದ್ಧತೆ ಕಾಪಾಡಿಕೊಳ್ಳುವ ಮತ್ತು ಪರಿಸರಕ್ಕೆ ಹಾನಿ ಉಂಟು ಮಾಡದಿರುವ ಸಲುವಾಗಿ ಅಡಕೆ ಹಾಳೆಯಿಂದ ಸಿದ್ಧಪಡಿಸಿದ ಪ್ಲೇಟ್‌ಗಳನ್ನು ಊಟಕ್ಕೆ ಬಳಸಲಾಗಿದೆ. ಅನ್ನ ಸಾಂಬಾರ್, ಸಿಹಿ ಪಾಯಸ, ಪಲ್ಯ, ಉಪ್ಪಿನಕಾಯಿಯನ್ನು ಊಟದೊಂದಿಗೆ ನೀಡಲಾಗುತ್ತಿದೆ.
ಮಂಜುನಾಥ ಅಡುಗೆ ಭಟ್ಟರು ಹೆಮ್ಮಾಡಿ ಅವರ ನೇತೃತ್ವದಲ್ಲಿ 30ಕ್ಕೂ ಅಧಿಕ ಬಾಣಸಿಗರು ಅಡುಗೆ ಸಿದ್ಧಪಡಿಸುತ್ತಿದ್ದಾರೆ. 15 ಜನ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದರೆ, ಊಟ ಬಡಿಸುವಿಕೆ, ಊಟಕ್ಕೆ ಕುಳಿತವರಿಗೆ ಕುಡಿಯುವ ನೀರಿನ ಪೂರೈಕೆ ಸೇರಿದಂತೆ 60ಕ್ಕೂ ಅಧಿಕ ಸ್ವಯಂ ಸೇವಾ ಕಾರ್ಯಕರ್ತರು ಇಲ್ಲಿ ಸಹಾಯ ಮಾಡುತ್ತಿದ್ದಾರೆ. ಮ್ಯಾನೇಜರ್ ಪ್ರಶಾಂತ ರೇವಣಕರ್ ಊಟದ ವಿತರಣೆ ಸುವ್ಯವಸ್ಥಿತವಾಗುವಂತೆ ನೋಡಿಕೊಳ್ಳುತ್ತಿದ್ದಾರೆ.
ಬರುವ ಭಕ್ತರಿಗೆ 6 ಪ್ರತ್ಯೇಕ ಕೌಂಟರ್‌ಗಳಲ್ಲಿ ಅನ್ನಪ್ರಸಾದ ವಿತರಿಸಲಾಗುತ್ತಿದೆ. ಹೆಮ್ಮಾಡಿ ಮಂಜುನಾಥ ಅಡುಗೆ ಭಟ್ಟರು ಹೇಳುವಂತೆ ಶೋಭಾ ಯಾತ್ರೆಯ ದಿನವಾದ ಬುಧವಾರ 15 ಸಾವಿರಕ್ಕೂ ಅಧಿಕ ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದ್ದಾರೆ. ಪ್ರತಿ ದಿನ 12 ಸಾವಿರ ಭಕ್ತರಿಗಾಗಿ ಅಡುಗೆ ಸಿದ್ಧಪಡಿಸುತ್ತೇವೆ. ಆಯಾ ದಿನದ ಭಕ್ತರ ಸಂಖ್ಯೆಗೆ ಅನುಗುಣವಾಗಿ ಆ ಬಳಿಕ ಅಡುಗೆಯನ್ನು ಮತ್ತೆ ಸಿದ್ಧಪಡಿಸುತ್ತೇವೆ ಎಂದಿದ್ದಾರೆ.
ತಾಯಿ ಮಾರಿಕಾಂಬೆಯನ್ನು ಕಣ್ಣು ತುಂಬಿಕೊಂಡ ಭಕ್ತರು ಬಳಿಕ ಮಾರಿಕಾಂಬಾ ದೇವಿಯ ಪ್ರಸಾದವನ್ನೂ ಹೊಟ್ಟೆತುಂಬ ಊಟ ಮಾಡಿ ತಮ್ಮ ತಮ್ಮ ಊರುಗಳಿಗೆ ಹೋಗುತ್ತಿದ್ದಾರೆ.