ಪೌರಕಾರ್ಮಿಕರಿಗಾಗಿ ( civil servants) ನಿರ್ಮಾಣಗೊಂಡ ವಸತಿ ಸಮುಚ್ಚಯ
- ಗೃಹಭಾಗ್ಯ ಯೋಜನೆಯಡಿ ಮನೆ ನಿರ್ಮಿಸಿ ಮೂರು ವರ್ಷ
- ಹಸ್ತಾಂತರಕ್ಕೆ ಕೂಡಿಬಾರದ ಮುಹೂರ್ತ
- ಬಾಕಿ ಕಾಮಗಾರಿಯಿಂದ ನನೆಗುದಿಗೆ
ಭಟ್ಕಳ: ನಗರದ ನೈರ್ಮಲ್ಯ ಕಾಪಾಡುವ ಪೌರಕಾರ್ಮಿಕರಿಗೆ (Civil servants) ಸೂರು ಕಲ್ಪಿಸುವ ನಿಟ್ಟಿನಲ್ಲಿ ಪುರಸಭೆ ಕೈಗೆತ್ತಿಕೊಂಡಿದ್ದ ‘ಗೃಹಭಾಗ್ಯ’ ಕಾಮಗಾರಿ ಪೂರ್ಣಗೊಂಡು 3 ವರ್ಷ ಕಳೆದರೂ ಪೌರಕಾರ್ಮಿಕರಿಗೆ ಮಾತ್ರ ಮನೆಯಲ್ಲಿ ಉಳಿಯುವ ಭಾಗ್ಯ ಮರಿಚಿಕೆಯಾಗಿದೆ.
ಗೃಹಭಾಗ್ಯ ಯೋಜನೆಯಡಿಯಲ್ಲಿ 2.25 ಕೋಟಿ ರೂ. ವೆಚ್ಚದಲ್ಲಿ 27 ಕಾರ್ಮಿಕರಿಗೆ ಮನೆ ನಿರ್ಮಾಣದ ಯೋಜನೆ ರೂಪಿಸಲಾಗಿತ್ತು.
ಓರ್ವ ಪೌರಕಾರ್ಮಿಕನಿಗೆ 7.5 ಲಕ್ಷ ರೂ. ದಂತೆ ಅನುದಾನ ನಿಗದಿಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಜಾಗದ ಲಭ್ಯತೆ ನೋಡಿ ಮೊದಲ ಹಂತದಲ್ಲಿ ಮೂರು ವರ್ಷದ ಹಿಂದೆ ಪಟ್ಟಣದ ಕೋಟೇಶ್ವರನಗರದಲ್ಲಿ 18 ಮನೆಗಳನ್ನು ಅಪಾರ್ಟಮೆಂಟ್ ಮಾದರಿಯಲ್ಲಿ ನಿರ್ಮಿಸಲಾಗಿದೆ.
ಆದರೆ, ಇಲ್ಲಿವರೆಗೂ ಅವುಗಳ ಹಸ್ತಾಂತರವಾಗದೆ ಇರುವುದು ಕಾರ್ಮಿಕ ಆಕ್ರೋಶಕ್ಕೆ ಕಾರಣವಾಗಿದೆ.
ಸ್ವಂತ ಸೂರಿನಲ್ಲಿ ಕೊನೆ ದಿನಗಳನ್ನು ಕಳೆಯಬೇಕು ಎಂಬ ಆಸೆ ಅಮ್ಮನದಾಗಿತ್ತು. ಅಮ್ಮ ನಮ್ಮನ್ನು ಬಿಟ್ಟು ಹೋಗಿ ನಾಲ್ಕು ವರ್ಷವಾದರೂ ಸೂರು ಸಿಕ್ಕಿಲ್ಲ. ಕಾಮಗಾರಿ ನೆಪ ಇಟ್ಟುಕೊಂಡು ಮನೆ ಹಸ್ತಾಂತರ ಮಾಡುತ್ತಿಲ್ಲ. ಇನ್ನಾದರೂ ನಮಗೆ ಮನೆ ನೀಡಿ ನೆಮ್ಮದಿಯ ನಿದ್ರೆಮಾಡಲು ಪುರಸಭೆ ಅವಕಾಶ ಮಾಡಿ ಕೊಡಲಿ.
ಬಾಕಿ ಕಾಮಗಾರಿಯಿಂದ ನನೆಗುದಿಗೆ
ಮನೆ ಹಸ್ತಾಂತರಿಸಲು ಪುರಸಭೆ ಸಿದ್ಧವಿದ್ದರೂ ಕೆಲವು ಫಲಾನುಭವಿಗಳು ತಮಗೆ ಕೆಳ ಅಂತಸ್ತಿನ ಮನೆಯೇ ಬೇಕು ಎನ್ನುತ್ತಿರುವುದು ಪುರಸಭೆಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು.
ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವುಡ ಅವರು ಪೌರಕಾರ್ಮಿಕರ ಮನವೊಲಿಸಿ ಚೀಟಿ ಮುಖಾಂತರ ಮನೆ ಹಂಚಿಕೆ ಮಾಡಿದ್ದಾರೆ.
ಆದರೆ, ಸಣ್ಣಪುಟ್ಟ ಕಾಮಗಾರಿ ಬಾಕಿ ಇರುವ ಕಾರಣ ಮನೆಗಳ ಹಸ್ತಾಂತರ ನನೆಗುದಿಗೆ ಬಿದ್ದಿದೆ. ಆದರೆ, ನಿರ್ಮಾಣಗೊಂಡು 3 ವರ್ಷ ಸಮೀಪಿಸುತ್ತ ಬಂದರೂ ಹಸ್ತಾಂತರವಾಗದೆ ಇರುವ ಕಾರಣ ಮನೆಗಳು ಶಿಥಿಲಾವಸ್ಥೆಗೆ ತಲುಪುತ್ತಿವೆ.
ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಬೇಕು ಎಂದು ಫಲಾನುಭವಿಗಳು ಒತ್ತಾಯಿಸಿದ್ದಾರೆ.
ತಡೆಗೋಡೆ ನಿರ್ಮಾಣಕ್ಕಿಲ್ಲ ಅನುದಾನ
ಪೌರಕಾರ್ಮಿಕರ ಒಂದು ವಸತಿ ಸಮುಚ್ಛಯ ಗುಡ್ಡದ ಅಂಚಿನಲ್ಲಿದೆ.
ಅಲ್ಲಿ ತಡೆಗೋಡೆ ನಿರ್ಮಾಣಕ್ಕೆ ಕನಿಷ್ಠ 60 ಲಕ್ಷ ರೂ. ಬೇಕು ಎಂದು ಪುರಸಭೆ ಅಧಿಕಾರಿಗಳು ಹೇಳುತ್ತಾರೆ.
ಅಷ್ಟೊಂದು ಅನುದಾನದ ಲಭ್ಯತೆ ಇಲ್ಲದ ಕಾರಣ ಹಂತಹಂತವಾಗಿ ಕಾಮಗಾರಿ ನಡೆಸಿ ತಡೆಗೋಡೆ ನಿರ್ಮಿಸಲಾಗುವುದು ಎಂದು ಪುರಸಭೆ ಅಧಿಕಾರಿಗಳು ಹೇಳುತ್ತಾರೆ.
ಗೃಹಭಾಗ್ಯ ಯೋಜನೆಯಡಿ 18 ಮನೆಗಳು ನಿರ್ಮಾಣವಾಗಿದೆ. ಆಗಸ್ಟ್ 2022ರಂದು ಪುರಸಭೆಗೆ ಹಸ್ತಾಂತರವೂ ಆಗಿವೆ. ಆರು ತಿಂಗಳ ಹಿಂದೆ ಪೌರಕಾರ್ಮಿಕರಿಗೆ ಮನೆ ಹಂಚಿಕೆ ಮಾಡಲಾಗಿದೆ. ಸಣ್ಣ-ಪುಟ್ಟ ಕೆಲಸಗಳು ಬಾಕಿ ಇವೆ. ಅಂದಾಜು 10 ಲಕ್ಷ ರೂ. ಅನುದಾನದ ಅಗತ್ಯವಿದೆ. ಇಂಜಿನಿಯರ್ ಈಗಾಗಲೇ ಯಾದಿ ತಯಾರಿಸಿದ್ದು, ಕೂಡಲೆ ಸಣ್ಣಪುಟ್ಟ ದುರಸ್ತಿ ಮಾಡಿ ಮನೆ ಹಸ್ತಾಂತರಿಸಲಾಗುವುದು.