ಎಸ್‌ಪಿ ದೀಪನ್ ಅವರಿಗೆ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ಅಧ್ಯಕ್ಷರು ಮನವಿ ಸಲ್ಲಿಸಿದರು.
ಕಾರವಾರ: ಕದ್ರಾದ ರೀಶೆಲ್ ಡಿಸೋಜಾ ಎಂಬ ಯುವತಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿರುವ ಚಿರಾಗ್ ಚಂದ್ರಹಾಸ ಕೊಠಾರಕರ್ ಎಂಬ ಯುವಕನನ್ನು ವಾರದಲ್ಲಿ ಬಂಧಿಸದೇ ಇದ್ದರೆ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ಕ್ರೈಸ್ತ ಅಭಿವೃದ್ಧಿ ನಿಗಮದ ಅಧ್ಯಕ್ಷ ಪ್ರಶಾಂತ ಜತ್ತನ್ನ ಎಚ್ಚರಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣದಲ್ಲಿ ಪೊಲೀಸರ ವೈಫಲ್ಯ ಕಂಡುಬರುತ್ತಿದೆ. ಹಣಬಲ, ತೋಳ್ಬಲ, ರಾಜಕೀಯ ಬಲದಿಂದ ಪ್ರಕರಣದ ದಾರಿ ತಪ್ಪಿಸಲಾಗುತ್ತಿದೆ. ಈ ಸಂಬಂಧ ಸಮರ್ಪಕ ತನಿಖೆ ನಡೆಸುವಂತೆ ಎಸ್‌ಪಿ ಅವರಿಗೆ ಮನವಿ ಸಲ್ಲಿಸಿದ್ದೇವೆ ಎಂದರು.
ಭಾರತೀಯ ಕ್ರೈಸ್ತ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಪ್ರದೀಪ ಡಿಮೆಲ್ಲೋ ಮಾತನಾಡಿ, ಮರಣೋತ್ತರ ಪರೀಕ್ಷೆಯನ್ನು ಅಸಮರ್ಪಕವಾಗಿ ಮಾಡಲಾಗಿದೆ. ಅದೇ ಪೊಲೀಸ್ ಇಲಾಖೆಯ ಪ್ರಥಮ ವೈಫಲ್ಯವಾಗಿದೆ ಎಂದರು.
ತಜ್ಞ ವೈದ್ಯ ಡಾ.ಪ್ರದೀಪ ಮಾತನಾಡಿ, ಕೇಂದ್ರ ಗೃಹ ಮಂತ್ರಾಲಯದ ಮಾರ್ಗಸೂಚಿಯಂತೆ ಆತ್ಮಹತ್ಯೆ, ಕೊಲೆ ಮುಂತಾದ ಸೂಕ್ಷ್ಮ ಪ್ರಕರಣಗಳಲ್ಲಿ ರಾತ್ರಿ ಹೊತ್ತಿನಲ್ಲಿ ಮರಣೋತ್ತರ ಪರೀಕ್ಷೆ ಮಾಡುವಂತಿಲ್ಲ ಎಂದಿದೆ. ಆದರೆ, ಇಲ್ಲಿ ಮೃತಳ ತಂದೆ, ತಾಯಿ ಯಾವುದೇ ಮನವಿ ಮಾಡದೆ ಇದ್ದರೂ ಗಡಿಬಿಡಿಯಲ್ಲಿ ರಾತ್ರಿಯ ಹೊತ್ತಿನಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಸಾಮಾನ್ಯವಾಗಿ ಮರಣೋತ್ತರ ಪರೀಕ್ಷೆ ಮಾಡುವಾಗ ಪೊಲೀಸರು ತಮಗೆ ಯಾವ ವಿಷಯದಲ್ಲಿ ಅನುಮಾನವಿದೆ ಇಂಥ ವಿಷಯಗಳ ಪರೀಕ್ಷೆ ಮಾಡಬೇಕು ಎಂದು ವೈದ್ಯರಿಗೆ ನಿಗದಿತ ನಮೂನೆಗಳಲ್ಲಿ ಮನವಿ ಮಾಡುತ್ತಾರೆ. ಆದರೆ, ಪೊಲೀಸರು ಯಾವುದೇ ಮನವಿ ಮಾಡಿಲ್ಲ ಎಂದು ರೀಶೆಲ್ ಮರಣೋತ್ತರ ಪರೀಕ್ಷೆ ಮಾಡಿದ ವೈದ್ಯರು ತಮ್ಮ ವರದಿಯಲ್ಲಿ ನಮೂದಿಸಿದ್ದಾರೆ. ಪೊಲೀಸರ ಈ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದರು.
ಮರು ಮರಣೋತ್ತರ ಪರೀಕ್ಷೆ ಮಾಡಲಾಗಿದೆಯಾದರೂ ಆಗಲೇ ಶವ ಸಾಕಷ್ಟು ಕೊಳೆತಿದ್ದ ಕಾರಣ ಅಗತ್ಯ ಮಾಹಿತಿ ಲಭ್ಯವಾಗುವ ಸಾಧ್ಯತೆಗಳು ಕಡಿಮೆ ಎಂದರು. ಕ್ಯಾಥೋಲಿಕ್ ಮುಖಂಡರಾದ ಲಿಯೋ ಲೂಯೀಸ್, ವಿಲ್ಸನ್ ಫರ್ನಾಂಡಿಸ್, ಮೃತರ ತಾಯಿ ರೀನಾ ಡಿಸೋಜಾ, ತಂದೆ ಕಿಸ್ತೋದ ಡಿಸೋಜಾ ಸುದ್ದಿಗೋಷ್ಠಿಯಲ್ಲಿದ್ದರು.