ರಷ್ಮಿ ಮಹಾಲೆ  
ಉತ್ತರ ಕನ್ನಡ

ರಜೆಗೆ ಬರುತ್ತಿದ್ದವಳು ಸುಟ್ಟು ಕರಕಲಾದಳು

ಸುಭಾಸ ಹೆಗಡೆ ಧೂಪದಹೊಂಡ
ಭಟ್ಕಳ: ಚಿತ್ರದುರ್ಗ ಘಟನನೆಯಲ್ಲಿ ಭಟ್ಕಳ ಶಿರಾಲಿಯ ರಷ್ಮಿ ದೇವಿದಾಸ ಮಹಾಲೆ(22) ಮೃತಪಟ್ಟಿದ್ದಾರೆ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಅವರು ತಮ್ಮ ಇಬ್ಬರು ಸ್ನೇಹಿತೆಯರಿಗೆ ತವರೂರು ತೋರಿಸುವ ಉತ್ಸಾಹದಲ್ಲಿದ್ದರು. ಆದರೆ, ವಿಽಯ ಆಟವೇ ಬೇರೆಯಾಗಿದೆ. ಬಸ್ ಅಪಘಾತದಲ್ಲಿ ರಷ್ಮಿ ಮೃತಪಟ್ಟಿದ್ದಾರೆ. ಅವರ ಇಬ್ಬರು ಸ್ನೇಹಿತೆಯರಾದ ಗಗನಾ ಮತ್ತು ರಕ್ಷಿತಾ ಅವರು ಅದೃಷ್ಟವಶಾತ್ ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ.
ರಷ್ಮಿ ಕುಟುಂಬ ದುಖಃದ ಕಡಲಲ್ಲಿ ಮುಳುಗಿದೆ. ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದ ರಷ್ಮಿ ತನ್ನ ಕನಸು ನನಸಾಗಿಸಲು ಬೆಂಗಳೂರಿಗೆ ತೆರಳಿದ್ದಳು. ಕ್ರಿಸ್‌ಮಸ್ ರಜೆಯನ್ನು ಎರಡು ದಿನ ಗೋಕರ್ಣದಲ್ಲಿ ಸ್ನೇಹಿತೆಯರ ಜೊತೆ ಕಳೆದು, ನಂತರ ತನ್ನ ಊರು ಶಿರಾಲಿಗೆ ಬರುವ ಯೋಚನೆಯಲ್ಲಿದ್ದಳು. ಆದರೆ, ಆಕೆಗೆ ರಜೆಯೇ ಸಜೆಯಾಗಿದೆ.
ಶಿರಾಲಿಯಲ್ಲಿ ವ್ಯಾಪಾರ ಮಾಡಿಕೊಂಡಿರುವ ದೇವಿದಾಸ ಮಹಾಲೆ ಅವರ ಎರಡನೇ ಪುತ್ರಿ ರಷ್ಮಿ. ಎರಡು ವರ್ಷದ ಹಿಂದೆ ಹಿರಿಯ ಪುತ್ರಿಯ ವಿವಾಹವಾಗಿತ್ತು. ರಷ್ಮಿ 10 ನೇ ತರಗತಿಯವರೆಗೆ ಭಟ್ಕಳ ಆನಂದಾಶ್ರಮ ಪ್ರೌಢಶಾಲೆಯಲ್ಲಿ ಓದಿದ್ದಳು. ಸಿದ್ದಾರ್ಥ ಪಿಯು ಕಾಲೇಜ್‌ನಲ್ಲಿ ಪಿಯುಸಿ ಓದಿದ್ದಳು. ಗುರು ಸುಧೀಂದ್ರ ಪದವಿ ಕಾಲೇಜ್‌ನಲ್ಲಿ ಬಿಕಾಂ ಓದಿದ್ದ ರಷ್ಮಿ ಪದವಿಯಲ್ಲೇ ಟಿಸಿಎಸ್ ಕಂಪನಿಗೆ ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾಗಿದ್ದಳು. ಸುಮಾರು ಒಂದುವರೆ ವರ್ಷ ಟಿಸಿಎಸ್ ಕಂಪನಿಯಲ್ಲಿ ಕೆಲಸ ಮಾಡಿದ್ದ ರಷ್ಮಿ ಏಳು ತಿಂಗಳ ಹಿಂದೆ ಡೆಲಾಯ್ಟ ಕಂಪನಿಯಲ್ಲಿ ಎಎಂಎಲ್ ಅನಾಲಿಸ್ಟ್ ಆಗಿ ಕೆಲಸಕ್ಕೆ ಸೇರಿದ್ದಳು. `ರಷ್ಮಿ ಸ್ನೇಹಿತೆಯರ ಜೊತೆ ಮನೆಗೆ ಬರ್ತೇನೆ ಎಂದು ಹೇಳಿದ್ದಳು. ಆದರೆ, ನಾವೇ ಆಕೆಯನ್ನು ಹುಡುಕಬೇಕಾಗಿದೆ' ಎಂದು ತಾಯಿ ಸವಿತಾ ಮಹಾಲೆ ಗೋಳು ತೋಡಿಕೊಂಡರು.