ಸರಣಿ ರಜೆ ಇರುವುದರಿಂದ ಬೆಂಗಳೂರಿನಲ್ಲಿರುವ ಜಿಲ್ಲೆಯ ಖಾಸಗಿ ಉದ್ಯೋಗಿಗಳು ಊರಿಗೆ ಪ್ರಯಾಣ ಬೆಳೆಸಿದ್ದರು. ಮಾತ್ರವಲ್ಲ. ಸಾಕಷ್ಟು ಪ್ರವಾಸಿಗರೂ ಗೋಕರ್ಣದೆಡೆ ಆಗಮಿಸುತ್ತಿದ್ದರು. ಆದರೆ, ಬಸ್ ಗೋಕರ್ಣ ತಲುಪುವುದಕ್ಕೂ ಮುಂಚೆಯೇ ಅಪಘಾತವಾಗಿದೆ.
ಜಿಲ್ಲೆಯ ಕುಮಟಾ ಚಿತ್ರಗಿಯ ವಿಜಯ ಭಂಡಾರಿ ಹಾಗೂ ಅಳ್ವೆದಂಡೆಯ ಮೇಘರಾಜ್ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ. ಇಬ್ಬರೂ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು. ರಜೆಯ ಸಲುವಾಗಿ ಊರಿಗೆ ಆಗಮಿಸುತ್ತಿದ್ದರು. ಅಪಘಾತವಾದ ಬಸ್‌ನ ಅಪ್ಪರ್ ಬರ್ತ್ನಲ್ಲಿ ಮಲಗಿದ್ದ ಇಬ್ಬರೂ ಸಣ್ಣಪುಟ್ಟ ಗಾಯಗಳಿಂದ ಬಚಾವಾಗಿದ್ದರು. ಕೆಲವೇ ಕ್ಷಣದಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ತಕ್ಷಣ ಇಬ್ಬರೂ ಕಿಟಕಿ ಗ್ಲಾಸ್ ಒಡೆದು ಹೊರ ಬಂದೆವು ಎಂದು ಹೇಳಿಕೊಂಡಿದ್ದಾರೆ. ಇಬ್ಬರೂ ಪ್ರಾಥಮಿಕ ಚಿಕಿತ್ಸೆ ಪಡೆದು, ಪೊಲೀಸ್ ದಾಖಲೆಯಲ್ಲಿ ಹೆಸರು ಬರೆಸಿ ಈಗ ಸುರಕ್ಷಿತವಾಗಿ ಮನೆ ಸೇರಿದ್ದಾರೆ. ಇಬ್ಬರೂ ಮಾನಸಿಕ ಆಘಾತದಲ್ಲಿದ್ದು, ಮನೆಯಲ್ಲಿ ವಿಶ್ರಾಂತಿ ಪಡೆದಿದ್ದಾರೆ.
ಘಟನೆ ನಡೆದಾಗ ಗಾಯಗೊಂಡಿದ್ದ ಎಲ್ಲರನ್ನೂ ಆಸ್ಪತ್ರೆಗೆ ಸೇರಿಸಲಾಗಿತ್ತು. ಆಸ್ಪತ್ರೆಯಲ್ಲಿ ವಿಜಯ, ಮೇಘರಾಜ್ ಹಾಗೂ ಸಾಗರದ ಆದಿತ್ಯ ಅವರು ಪರಸ್ಪರ ಪರಿಚಯಿಸಿಕೊಂಡಿದ್ದರು. ವಿಜಯ ಅವರ ಸಹೋದರ ಗಜೇಂದ್ರ ಎಲ್ಲರನ್ನೂ ಕರೆತಂದು ಮನೆ ಸೇರಿಸಿದ್ದಾರೆ. `ಎಲ್ಲರ ಮೊಬೈಲ್ ಸಿಕ್ಕಿಲ್ಲ. ಘಟನೆ ನಡೆದ ಕೆಲವು ತಾಸಿನ ನಂತರ ಬ್ರದರ್ ನನಗೆ ಕರೆ ಮಾಡಿದ ನಾನು ತಕ್ಷಣ ಹೊರಟು ಮೂವರನ್ನೂ ಕರೆತಂದೆ' ಎಂದು ವಿಜಯ್ ಅವರ ಸಹೋದರ ಗಜೇಂದ್ರ ವಿವರಿಸಿದ್ದಾರೆ. `ಘಟನೆ ಚಿತ್ರಣ ನೋಡಿ ಭಯವಾಯಿತು. ನಮ್ಮ ಸಹೋದರನನ್ನು ದೇವರೇ ಕಾಪಾಡಿದ ' ಎಂದು ಗಜೇಂದ್ರ `ವಿಜಯವಾಣಿ' ಜತೆ ತಮ್ಮ ಅಭಿಪ್ರಾಯ ಹಂಚಿಕೊAಡರು.