ಶಿರಸಿ ತಾಲೂಕಿನ ಸ್ವರ್ಣವಲ್ಲಿಯಲ್ಲಿ ಶ್ರೀ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಅವರಿಂದ ವೇ.ಮೂ. ಶ್ರೀನಿವಾಸ ಭಟ್ ಆಶೀರ್ವಾದ ಪಡೆದರು. 
ಉತ್ತರ ಕನ್ನಡ

ಬದುಕಿನ ಸಾರ್ಥಕತೆಗೆ ಬಾಲ್ಯದ ಅಧ್ಯಯನ ಸಹಕಾರಿ

ಶಿರಸಿ: ಪ್ರತಿಯೊಬ್ಬ ವ್ಯಕ್ತಿಯು ತನ್ನ ವಿದ್ಯಾರ್ಥಿ ಜೀವನದ ಅವಧಿಯಲ್ಲಿ ಚೆನ್ನಾಗಿ ಅಧ್ಯಯನ ಮಾಡಬೇಕು. ಅದು ಬದುಕಿನ ಸಾರ್ಥಕತೆಗೆ ಕಾರಣವಾಗುತ್ತದೆ ಬಾಲ್ಯದಲ್ಲಿ ಮಾಡಿದ ಅಧ್ಯಯನ ಹಾಗೂ ಅಳವಡಿಸಿಕೊಂಡ ಸದಾಚಾರಗಳು ನಮ್ಮಲ್ಲಿ ಗಟ್ಟಿಯಾಗಿ ನಿಲ್ಲುತ್ತವೆ ಎಂದು ಮಂಜುಗುಣಿ ದೇವಾಲಯದ ಪ್ರಧಾನ ಅರ್ಚಕ ವೇ.ಮೂ. ಶ್ರೀನಿವಾಸ್ ಭಟ್ ಹೇಳಿದರು.
ಶ್ರೀ ಸೋಂದಾ ಸ್ವರ್ಣವಲ್ಲಿ ಮಠದಲ್ಲಿ ವಿದ್ಯಾರ್ಥಿಗಳಿಗೆ ಅಧ್ಯಯನ ಆಸಕ್ತಿ ಹೆಚ್ಚಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.
ಅಧ್ಯಯನದಲ್ಲಿ ಆಸಕ್ತಿ, ಗುರುವಿನಲ್ಲಿ ಶ್ರದ್ಧೆ ಇದ್ದರೆ ವಿದ್ಯೆ ಕರಗತವಾಗುತ್ತದೆ. ವಿದ್ಯಾರ್ಥಿಗೆ ಎದುರಾಗುವ ಆಲಸ್ಯ, ಆಕಳಿಕೆ, ನಿದ್ರೆ, ಕ್ರೋಧ, ಅನಾರೋಗ್ಯ ಮತ್ತು ಹಸಿವು ಎಂಬ ವಿಘ್ನಗಳನ್ನು ದಾಟಿ ಅಧ್ಯಯನ ಮಾಡಬೇಕು.
ಸೋಂದಾ ಶ್ರೀ ಸ್ವರ್ಣವಲ್ಲೀ ಮಠದಲ್ಲಿ ಗುರುಗಳು ಎಲ್ಲರಿಗೂ ಉಚಿತ ಊಟ, ವಸತಿ ಹಾಗೂ ಶಿಕ್ಷಣವನ್ನು ನೀಡುತ್ತಾ ಬಂದಿದ್ದಾರೆ. ಇದನ್ನು ಸ್ವೀಕರಿಸಿದ ನಾವು ಶಿಕ್ಷಣ ಪಡೆದು ಸಮಾಜಕ್ಕೆ ಒಳ್ಳೆಯ ಸಂದೇಶ, ಸನ್ಮಾರ್ಗವನ್ನು ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಕಿರಿಯ ಶ್ರೀಗಳಾದ ಶ್ರೀಮದ್ ಆನಂದಬೋಧೆಂದ್ರ ಸರಸ್ವತೀ ಸ್ವಾಮಿಗಳವರು ಸಾನ್ನಿಧ್ಯ ವಹಿಸಿ ಉಪನ್ಯಾಸಕರನ್ನು ಗೌರವಿಸಿ ಆಶೀರ್ವದಿಸಿದರು. ಶ್ರೀ ರಾಜರಾಜೇಶ್ವರಿ ಮಹಾಪಾಠ ಶಾಲೆಯ ಪ್ರಾಧ್ಯಾಪಕ ಡಾ. ನಾಗರಾಜ ಭಟ್ಟ ಕೋಣೆಮನೆ ಶ್ರೀಗಳಿಗೆ ಫಲ ಸಮರ್ಪಿಸಿದರು.
ಪ್ರಾಧ್ಯಾಪಕ ಡಾ. ವಿನಾಯಕ ಭಟ್ಟ ಕಾರ್ಯಕ್ರಮ ನಿರ್ವಹಿಸಿದರು. ಶ್ರೀ ರಾಜರಾಜೇಶ್ವರೀ ಮಹಾಪಾಠಶಾಲೆಯ ಹಾಗೂ ಶ್ರೀ ರಾಜರಾಜೇಶ್ವರಿ ವೇದ ಗುರುಕುಲದ ಅಧ್ಯಾಪಕರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.