ಮುಂಡಗೋಡಿನ ಬೌದ್ಧ ಸಮಾವೇಶದಲ್ಲಿ ಕೇಂದ್ರ ಸಚಿವ ಕಿರಣ್ ರಿಜಿಜು ಮಾತನಾಡಿದರು
ಮುಂಡಗೋಡ : ಭಗವಾನ್ ಬುದ್ಧರ ತತ್ವಗಳನ್ನು ಹಾಗೂ ನಲಂದಾ ಶಿಕ್ಷಣ ವ್ಯವಸ್ಥೆಯನ್ನು ಜಗತ್ತಿಗೇ ಪ್ರಸಾರ ಮಾಡುವಲ್ಲಿ ಟಿಬೇಟಿಯನ್ ಕ್ಯಾಂಪ್‌ನ ಬೌದ್ಧ ಸನ್ಯಾಸ ವಿಹಾರಗಳ(ಮಾನೆಸ್ಟ್ರಿ)ಕೊಡುಗೆ ಅಪಾರ ಎಂದು ಭಾರತ ಸರ್ಕಾರದ ಸಂಸದೀಯ ಮತ್ತು ಅಲ್ಪಸಂಖ್ಯಾತರ ವ್ಯವಹಾರ ಸಚಿವ ಕಿರಣ್ ರಿಜಿಜು ಹೇಳಿದರು.
ದಲಾಯಿಲಾಮಾ ಅವರು 90 ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಇಲ್ಲಿನ ಟಿಬೇಟಿಯನ್ ಕ್ಯಾಂಪ್‌ನ ಡ್ರೆಪುಲ್ ಲಾಸೆಲ್ ಲಿಂಗ್ ಮಾನೆಸ್ಟ್ರಿ ಯಲ್ಲಿ ಆಯೋಜಿಸಿದ್ದ ಬೌದ್ಧ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಆಚಾರ್ಯ ಲೆಕ್ಡೆನ್ ಅವರಿಂದ ಕ್ರಿಸ್ತ ಶಕ 1416 ರಲ್ಲಿ ಟಿಬೇಟ್‌ನಲ್ಲಿ ಈ ಮಾನೆಸ್ಟ್ರಿ ಸ್ಥಾಪನೆ ಮಾಡಿದರು. ಅಷ್ಟು ಹಳೆಯ ಮಾನೆಸ್ಟ್ರಿ ಬಗ್ಗೆ ನಮಗೆ ತುಂಬ ಹೆಮ್ಮೆ ಇದೆ. ಕೇವಲ ಭಾರತೀಯರು ಮಾತ್ರವಲ್ಲ ಮಂಗೋಲಿಯಾ, ಚೀನಾ, ಸೌತ್ ಕೋರಿಯಾ, ಥೈವಾನ್, ಅಮೆರಿಕ ಹೀಗೆ ವಿಶ್ವದ ನಾನಾ ದೇಶಗಳಿಂದ ಇಲ್ಲಿಗೆ ಅಧ್ಯಯನಕ್ಕೆ ಬರುತ್ತಾರೆ. ಧರ್ಮದ ಸಾರವನ್ನು ಅಧ್ಯಯನ ಮಾಡಿ ವಿಶ್ವಕ್ಕೇ ಸಾರುತ್ತಿರುವ ಪ್ರತಿಯೊಬ್ಬ ಸನ್ಯಾಸಿಗಳಿಗೆ, ಬಿಕ್ಕುಗಳಿಗೆ ನಾನು ತುಂಬು ಹೃದಯದ ಧನ್ಯವಾದ ಹಾಗೂ ನಮನಗಳನ್ನು ಹೇಳುತ್ತೇನೆ ಎಂದರು.
ದಲಾಯಿಲಾಮಾ ಅವರ ಮಾರ್ಗದರ್ಶನದಲ್ಲಿ ದೇಶದಲ್ಲಿ ಬೌದ್ಧ ಧರ್ಮದ ಆಚರಣೆಗಳು ಅತ್ಯಂತ ಶಾಂತಿಯಿಂದ ನಡೆಯುತ್ತಿವೆ.ಬೌದ್ಧ ವಿಹಾರಗಳಿಗೆ, ಟಿಬೇಟಿಯನ್ ಪ್ರಜೆಗಳಿಗೆ ಭಾರತ ಸರ್ಕಾರ ಯಾವುದೇ ಸಹಾಯ ಮಾಡಲು ಸಿದ್ಧವಿದೆ ಎಂದು ಭರವಸೆ ನೀಡಿದರು.
ಸ್ಥಳೀಯವಾಗಿ ಮೂಲ ಸೌಕರ್ಯದ ಕೊರತೆ ಇದೆ ಎಂಬ ಅರಿವಿದೆ. ಸ್ಥಳೀಯ ಸಂಸದರು, ಶಾಸಕರು, ಟಿಬೇಟಿಯನ್ ಕ್ಯಾಂಪ್‌ಗೆ ಬೇಕಾದ ಸೌಲಭ್ಯಗಳನ್ನು ಒದಗಿಸುತ್ತಿದ್ದಾರೆ. ಇಲ್ಲಿ ಸಮಸ್ಯೆಗಳು ಉದ್ಭವಿಸಿದಾಗ ಅವುಗಳನ್ನು ಬಗೆಹರಿಸಲು ಸ್ಪಂದಿಸುತ್ತಿದ್ದಾರೆ ಎಂದರು.
ದಲಾಯಿಲಾಮಾ ಅವರು ಸಮಾವೇಶದ ಸಾನ್ನಿಧ್ಯ ವಹಿಸಿದ್ದರು. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಶಿವರಾಮ ಹೆಬ್ಬಾರ ಇತರರು ಈ ಸಂದರ್ಭದಲ್ಲಿದ್ದರು.