ಕಾರವಾರ: ನಿರ್ಮಾಣವಾಗಿ ನಾಲ್ಕು ವರ್ಷವಾದರೂ ಸಾರ್ವಜನಿಕರ ಬಳಕೆಗೆ ಸಿಗದ ಕಾರವಾರ ಉಮ್ಮಳೆಜೂಗ ಸೇತುವೆ ಬಗ್ಗೆ ಭಾರತ ಲೆಕ್ಕ ಪರಿಶೋಧಕರು ಮತ್ತು ಮಹಾ ಲೆಕ್ಕಪಾಲರ (ಸಿಎಜಿ)ವರದಿಯಲ್ಲಿ ಆಕ್ಷೇಪಣೆ ವ್ಯಕ್ತಪಡಿಸಲಾಗಿದೆ.
2024 ಆರ್ಥಿಕ ವರ್ಷಕ್ಕೆ ಮುಕ್ತಾಯವಾದ ಲೋಕೋಪಯೋಗಿ ಇಲಾಖೆ ಕಾಮಗಾರಿಗಳ ಸಿಎಜಿ ಲೆಕ್ಕ ಪರಿಶೋಧನಾ ವರದಿಯನ್ನು ವಿಧಾನ ಮಂಡಲದ ವಿಶೇಷ ಅಽವೇಶನದಲ್ಲಿ ಮಂಡಿಸಲಾಗಿದೆ. ಅದರಲ್ಲಿ ಒಟ್ಟು 8.7 ಕೋಟಿ ರೂ. ವೆಚ್ಚದಲ್ಲಿ ದ್ವೀಪ ಗ್ರಾಮಕ್ಕೆ ಸೇತುವೆ ನಿರ್ಮಾಣ ಮಾಡಿದರೂ ಅದರಿಂದ ಓಡಾಡಲು ಸಾಧ್ಯವಾಗದೇ ನಿರುಪಯುಕ್ತವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಯೋಜನೆಯ ಅಂದಾಜು ವೆಚ್ಚವನ್ನು ಹೆಚ್ಚಾಗಿ ನಿಗದಿ ಮಾಡಲಾಗಿದೆ. ಲಭ್ಯವಿರುವ ಅಗೆದ ಮಣ್ಣು, ವೆಟ್ ಮಿಕ್ಸ್ ಮುಂತಾದವುಗಳನ್ನು ಮರು ಬಳಕೆ ಮಾಡಿ ವೆಚ್ಚ ಕಡಿಮೆ ಮಾಡಲು ಅವಕಾಶವಿದ್ದರೂ ಅದನ್ನು ಬಳಸಿಕೊಂಡಿಲ್ಲ. ರಸ್ತೆ ಕಾಮಗಾರಿಯ ಮಣ್ಣು ತುಂಬುವಿಕೆಯ ಲೆಕ್ಕಾಚಾರವನ್ನು ತಪ್ಪಾಗಿ ಮಾಡಲಾಗಿದೆ. ಭಾರತೀಯ ರಸ್ತೆ ಕಾಂಗ್ರೆಸ್ ಹಾಗೂ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಮಾನದಂಡಗಳನ್ನು ಪಾಲಿಸಲಾಗಿಲ್ಲ. ಇದರಿಂದ ಸಾರ್ವಜನಿಕ ಹಣ ದುಂದು ವೆಚ್ಚವಾಗಿದ್ದು, ಗುತ್ತಿಗೆದಾರನಿಗೆ ಅನುಕೂಲವಾಗುವಂತಿದೆ. ಕಾಮಗಾರಿಗೂ ಪೂರ್ವ ಸೇತುವೆಗೆ ಸಂಪರ್ಕ ಕಲ್ಪಿಸಲು ಬೇಕಾದ ಭೂಮಿ ಸ್ವಾಧೀನ ಮಾಡಿಕೊಳ್ಳದ ಕಾರಣ ಕಾಮಗಾರಿ ವಿಫಲವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವೈಲವಾಡ ಗ್ರಾಪಂ ವ್ಯಾಪ್ತಿಯ ಸುಮಾರು 45 ಎಕರೆ ವಿಸ್ತೀರ್ಣದ ದ್ವೀಪ ಉಮ್ಮಳೆಜೂಗ. ಗ್ರಾಮದಲ್ಲಿ ಸುಮಾರು 100 ಜನಸಂಖ್ಯೆ ಇದೆ. ಸಾಕಷ್ಟು ಕೃಷಿ ಭೂಮಿ ಇದೆ. ಗ್ರಾಮವನ್ನು ಕಾಳಿ ನದಿ ಸುತ್ತುವರಿದಿದೆ. ಹಾಗಾಗಿ ಗ್ರಾಮಕ್ಕೆ ವಾಹನ ಸಂಪರ್ಕ ಸಾಧ್ಯವಿಲ್ಲ. ಊರವರು ದೋಣಿ ದಾಟಿ ಹೊರ ಜಗತ್ತಿಗೆ ಬರಬೇಕಾಗಿತ್ತು. ಶಾಲೆಗೆ ತೆರಳಲೂ ಮಕ್ಕಳು ಅಪಾಯಕಾರಿಯಾಗಿ ದೂಣಿ ದಾಟಬೇಕಿತ್ತು. ಗ್ರಾಮದ ಸಮಸ್ಯೆಯ ಬಗ್ಗೆ 2018 ರ ಜೂನ್‌ನಲ್ಲಿ `ವಿಜಯವಾಣಿ' ಸೇರಿ ವಿವಿಧ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿತ್ತು. ಆಗಿನ ಶಾಸಕಿ ರೂಪಾಲಿ ನಾಯ್ಕ ಸಮಸ್ಯೆಯನ್ನು ವಿಧಾನಸಭೆಯಲ್ಲಿ ಮಂಡಿಸಿದ್ದರು. ಪರಿಣಾಮ ಗ್ರಾಮಕ್ಕೆ ಸೇತುವೆ ಮಂಜೂರಾಗಿತ್ತು. 2021 ರ ಮಾರ್ಚ್ನಲ್ಲಿ ಸೇತುವೆ ಕಾಮಗಾರಿ ಶುರುವಾಗಿತ್ತು. ಗುತ್ತಿಗೆದಾರ 2022 ರ ಜನವರಿಗೆ ಕಾಮಗಾರಿ ಮುಗಿಸಿದ್ದ.
ಕಾಳಿ ಅಡ್ಡವಾಗಿ ಸೇತುವೆ ನಿರ್ಮಾಣವಾದರೂ ಅಲ್ಲಿಂದ ಇಳಿದು ಊರಿಗೆ ತೆರಳಲು ಸಂಪರ್ಕ ರಸ್ತೆ ನಿರ್ಮಾಣವಾಗಿಲ್ಲ. ಸಂಪರ್ಕ ರಸ್ತೆ ನಿರ್ಮಾಣಕ್ಕೆ ಸ್ಥಳೀಯ ವಿಠ್ಠಲ ವಾರಕರ್ ಅವರ ಜಮೀನು ಬಳಕೆ ಮಾಡಿಕೊಳ್ಳಲೇಬೇಕಿದೆ. ಆದರೆ, ಅವರು ತಾವು ಜಮೀನು ನೀಡುವುದಿಲ್ಲ ಎಂದು ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಇದರಿಂದ 2022 ರಿಂದ ಇದುವರೆಗೂ ಸಂಪರ್ಕ ರಸ್ತೆ ನಿರ್ಮಾಣವಾಗಿಲ್ಲ ಎಂದು ಲೋಕೋಪಯೋಗಿ ಅಽಕಾರಿಯೊಬ್ಬರು ಮಾಹಿತಿ ನೀಡಿದರು.
ಹಲವು ದಶಕಗಳ ಬೇಡಿಕೆ ಈಡೇರಿ ಸೇತುವೆ ನಿರ್ಮಾಣವಾಗಿದ್ದರೂ ಗ್ರಾಮಸ್ಥರು ವಾಹನಗಳನ್ನು ಮನೆಯವರೆಗೆ ಕೊಂಡೊಯ್ಯುವ ಪರಿಸ್ಥಿತಿ ಇಲ್ಲ. ಸಂಪರ್ಕ ರಸ್ತೆ ನಿರ್ಮಾಣಕ್ಕೆ ಭೂ ಸ್ವಾಧೀನಕ್ಕೆ ಇದುವರೆಗೂ ಕ್ರಮವಾಗಿಲ್ಲ. ಅಧಿಕಾರಿಗಳು ನ್ಯಾಯಾಲಯಕ್ಕೆ ಸಮಸ್ಯೆ ಮನವರಿಕೆ ಮಾಡಿಕೊಡದೇ ದಿನ ದೂಡುತ್ತಿದ್ದಾರೆ ಎಂಬುದು ಗ್ರಾಮಸ್ಥರ ದೂರು. ಹಾಗಾಗಿ ಊರವರು ಹಣ ಸೇರಿಸಿಕೊಂಡು ಪ್ರತ್ಯೇಕ ವಕೀಲರನ್ನು ನೇಮಿಸಿಕೊಂಡು ನ್ಯಾಯಾಂಗ ಹೋರಾಟ ಮಾಡುತ್ತಿದ್ದಾರೆ.
ಉಮ್ಮಳೆಜೂಗ ಸೇತುವೆ ಸಂಪರ್ಕ ರಸ್ತೆಯ ವಿಚಾರ ನ್ಯಾಯಾಲಯದಲ್ಲಿದೆ. ಭೂ ಸ್ವಾಧೀನಕ್ಕೆ ಯಾವುದೇ ಪ್ರಸ್ತಾವನೆ ಬಂದಿಲ್ಲ.
ನಿಶ್ಚಲ ನರೋನಾ
ತಹಸೀಲ್ದಾರ್, ಕಾರವಾರ