ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್.
- ಅಧ್ಯಕ್ಷ ಜಯದೇವ ಯು. ನಿಲೇಕಣಿ ಮಾಹಿತಿ
- ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ವಾರ್ಷಿಕ ಸಭೆ
ರಾಜ್ಯದ ಪ್ರತಿಷ್ಠಿತ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ತನ್ನ ಕಾರ್ಯಕ್ಷೇತ್ರದ ವ್ಯಾಪ್ತಿಯನ್ನು ಸಂಪೂರ್ಣ ಕರ್ನಾಟಕಕ್ಕೆ ವಿಸ್ತರಿಸಿಕೊಂಡಿದೆ. ಮುಂಬರುವ ದಿನದಲ್ಲಿ ನೆರೆಯ ಗೋವಾ ರಾಜ್ಯಕ್ಕೂ ವಿಸ್ತರಿಸುವ ಕಾರ್ಯ ಯೋಜನೆ ಹೊಂದಿದೆ ಎಂದು ಅಧ್ಯಕ್ಷ ಜಯದೇವ ಯು. ನಿಲೇಕಣಿ ಹೇಳಿದರು.
ನಗರದಲ್ಲಿ ಭಾನುವಾರ ನಡೆದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಬ್ಯಾಂಕ್ ಸಂಸ್ಥಾಪಕ ದಿ. ರಾವ್‌ಬಹಾದ್ದೂರ್ ಪುಂಡಲೀಕರಾವ್ ನಾರಾಯಣ ಪಂಡಿತ್ ಹಾಗೂ ಶೇಷಗಿರಿ ನಾರಾಯಣ ಕೇಶವೈನ್ ಅವರ ಪ್ರತಿಮೆಗೆ ಪುಷ್ಪ ಹಾರ ಸಮರ್ಪಿಸಿ ಅವರು ಮಾತನಾಡಿದರು.
ಬ್ಯಾಂಕ್ ಒಟ್ಟೂ ವ್ಯವಹಾರವನ್ನು ಈಗ 2575 ಕೋಟಿ ರೂ.ಗಳಿಗೆ ದಾಖಲಿಸಿ ಹೊಸ ಮೈಲಿಗಲ್ಲು ದಾಟಿದೆ. ತನ್ನ ಒಟ್ಟು ಠೇವಣಿಯನ್ನು 1513.07 ಕೋಟಿ ರೂ.ಗಳಿಗೆ, ದುಡಿಯುವ ಬಂಡವಾಳವನ್ನು 1767.78 ಕೋಟಿ ರೂ.ಗಳಿಗೆ ಹೆಚ್ಚಿಸುವುದರೊಂದಿಗೆ 13.59 ಕೋಟಿ ರೂ. ನಿವ್ವಳ ಲಾಭ ದಾಖಲಿಸಿದೆ ಎಂದರು.
ಬ್ಯಾಂಕ್ ಸದಸ್ಯರ ಸಂಖ್ಯೆ 51,487 ದಾಟಿದ್ದು, ಸಂದಾಯಿತ ಷೇರು ಬಂಡವಾಳ 44.93 ಕೋಟಿ ರೂ. ತಲುಪಿದೆ. ಕಳೆದ ವರ್ಷದ 134.01 ಕೋಟಿ ರೂ. ಇದ್ದ ಆದಾಯವನ್ನು 149.61 ಕೋಟಿ ರೂ.ಗಳಿಗೆ ಹೆಚ್ಚಿಸಿಕೊಂಡಿದೆ. ಬ್ಯಾಂಕು ಕಳೆದ 5 ವರ್ಷಗಳಲ್ಲಿ ತನ್ನ ವ್ಯವಹಾರವನ್ನು 1,599 ಕೋಟಿ ರೂ.ಗಳಿಂದ 2,575 ಕೋಟಿ ರೂ.ಗಳಿಗೆ ಅಭಿವೃದ್ಧಿಗೊಳಿಸಿಕೊಂಡಿದೆ ಎಂದರು.
ಪ್ರಸ್ತುತ ಬ್ಯಾಂಕ್ ಒಟ್ಟು 22 ಶಾಖೆ ಹಾಗೂ 2 ವಿಸ್ತರಣಾ ಶಾಖೆ ಹೊಂದಿದ್ದು, ಇನ್ನೂ 3 ನೂತನ ಶಾಖೆಗಳು ರಾಣೆಬೆನ್ನೂರು, ಸಾಗರ ಹಾಗೂ ಉಡುಪಿಯಲ್ಲಿ ಮುಂದಿನ ತಿಂಗಳಲ್ಲಿ ಕಾರ್ಯಾರಂಭಗೊಳ್ಳಲಿವೆ. ಈ ಮೂಲಕ ಬ್ಯಾಂಕ್‌ನ ಒಟ್ಟು ಶಾಖೆಗಳ ಸಂಖ್ಯೆ 25ಕ್ಕೆ ತಲುಪಲಿದೆ.
1,500 ಕೋಟಿ ರೂ.ಗಿಂತಲೂ ಹೆಚ್ಚಿನ ಠೇವುಗಳು, 1 ಸಾವಿರ ಕೋಟಿ ರೂ. ಗಿಂತಲೂ ಹಚ್ಚಿನ ಸಾಲ-ಮುಂಗಡಗಳು, 1,700 ಕೋಟಿ ರೂ.ಗಿಂತಲೂ ಹೆಚ್ಚಿನ ದುಡಿಯುವ ಬಂಡವಾಳ ಹಾಗೂ 2,500 ಕೋಟಿ ರೂ. ಗಿಂತಲೂ ಹೆಚ್ಚಿನ ವ್ಯವಹಾರ ಹೊಂದಿದೆ ಎಂದರು.
ಸಿಇಒ ಆರತಿ ಎಸ್. ಶೆಟ್ಟರ್ ಬ್ಯಾಂಕಿನ ಪ್ರಗತಿಯ ಕುರಿತು ಸಭೆಗೆ ಮಾಹಿತಿ ನೀಡಿದರು. ಬ್ಯಾಂಕ್ ಉಪಾಧ್ಯಕ್ಷ ಸಂತೋಷ ಪಂಡಿತ್, ನಿರ್ದೇಶಕರು ಹಾಗೂ ಸಿಬ್ಬಂದಿ ಇದ್ದರು. ಸದಾನಂದ ನಾಯ್ಕ ವಂದಿಸಿದರು.
ಸಾಧಕರಿಗೆ ಸನ್ಮಾನ: ಸಾಧನೆಗೈದ ಬ್ಯಾಂಕ್‌ನ ದಾಂಡೇಲಿ ಶಾಖಾ ವ್ಯವಸ್ಥಾಪಕ ಹಾಗೂ ಸಿಬ್ಬಂದಿಗೆ ಅಭಿನಂದಿಸಿ ಪ್ರಶಸ್ತಿ ಪತ್ರ ನೀಡಲಾಯಿತು. ನಿವೃತ್ತಿ ಹೊಂದಿದ ಸಿಬ್ಬಂದಿ ದೀಪಕ ಜಿ. ಅಂಕೋಲೆಕರ, ಉಮೇಶ ಎನ್. ಶೆಟ್ಟಿ, ರಾಮಚಂದ್ರ ಎನ್. ಪೈ, ಜಗದೀಶ ಎಸ್. ಜೋಗಳೇಕರ, ಬಿಬಿಝಾಕಿರಾ ಮುಲ್ಲಾ, ಅನಿಲಕುಮಾರ ವಿ. ನಾಯ್ಕ, ನಾಸೀರ್ ಎ. ಖಾನ್ ಮತ್ತು ದತ್ತಾತ್ರೇಯ ಕೆ. ಭಟ್ ಅವರನ್ನು ಸನ್ಮಾನಿಸಲಾಯಿತು. ಬ್ಯಾಂಕ್‌ನ ಹಿರಿಯ ಸದಸ್ಯರಾದ ಸುನಂದಾ ಗೋಪಾಲಕೃಷ್ಣ ಬಾಡ, ದಿವಸ್ಪತಿ ವೆಂಕಟ್ರಮಣ ಹೆಗಡೆ, ವಾಲ್ಜಿ ದೇವಸಿ ಪಟೇಲ, ಗೀತಾ ಉದಯ ನಿಲೇಕಣಿ, ವಿಶ್ವನಾಥ ಪರಮೇಶ್ವರ ಹೆಗಡೆ, ಡಾ. ಮಹಾಬಲೇಶ್ವರ ಗಣಪತಿ ಹೆಗಡೆ ಮತ್ತು ಕೃಷ್ಣ ವಾಮನ ಮಹಾಲೆ ಅವರನ್ನು ಸನ್ಮಾನಿಸಲಾಯಿತು.
ನಿರ್ದೇಶಕ ಪ್ರೊ. ಕೆ.ಎನ್. ಹೊಸಮನಿ ಪರಿಚಯಿಸಿದರು. 25 ವರ್ಷಗಳ ಕಾಯಂ ಸೇವೆ ಸಲ್ಲಿಸಿ ಕಾರ್ಯ ನಿರ್ವಹಿಸುತ್ತಿರುವ ಬ್ಯಾಂಕ್‌ನ 18 ಸಿಬ್ಬಂದಿಗೆ ಪ್ರಶಂಸಾ ಪತ್ರ, ಕ ಹಾಗೂ ತಲಾ 10 ಸಾವಿರ ರೂ. ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.
2025-26ನೇ ಸಾಲಿನ ಎಸ್ಸೆಸ್ಸೆಲ್ಸಿ, ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಗಳಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಪಡೆದು ಪಾಸಾದ ಹಾಗೂ ಪದವಿ, ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ವಿಶ್ವವಿದ್ಯಾಲಯಕ್ಕೆ ರ‌್ಯಾಂಕ್ ಪಡೆದ 122 ಬ್ಯಾಂಕ್ ಸದಸ್ಯರ ಮಕ್ಕಳಿಗೆ ವಾರ್ಷಿಕ ಸರ್ವಸಾಧಾರಣ ಸಭೆಯ ಅಂಗವಾಗಿ 5,61,000 ರೂ. ಮೊತ್ತದ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ದೇಶದ ಅತ್ಯುನ್ನತ ಸಹಕಾರಿ ಎಂದು ಗುರುತಿಸುವ ಸಂಕಲ್ಪವನ್ನು ಬ್ಯಾಂಕ್ ಹೊಂದಿದೆ. ಈ ಎಲ್ಲ ಸಾಧನೆಗಳಿಗೆ ಬ್ಯಾಂಕಿನ ಗೌರವಾನ್ವಿತ ಸದಸ್ಯರು, ಗ್ರಾಹಕರ ಅಭೂತಪೂರ್ವ ವಿಶ್ವಾಸ, ಆಡಳಿತ ಮಂಡಳಿ ಹಾಗೂ ವ್ಯವಸ್ಥಾಪನಾ ಮಂಡಳಿಯ ಸೂಕ್ತ ಮಾರ್ಗದರ್ಶನ ಹಾಗೂ ಸಿಬ್ಬಂದಿಗಳ ನಿಷ್ಠಾಪೂರ್ಣ ಕರ್ತವ್ಯ ನಿರ್ವಹಣೆಯೇ ಇದಕ್ಕೆ ಕಾರಣ.
— ಜಯದೇವ ನೀಲೇಕಣಿ ಅಧ್ಯಕ್ಷ, ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್