ಕಾರವಾರ: ರಾಜರ ಕಾಲದಲ್ಲಿ ಹಲವು ದಶಕಗಳು ಕೂಡಿ ದೇವಸ್ಥಾನ, ಇಮಾರತುಗಳನ್ನು ನಿರ್ಮಾಣ ಮಾಡಿದ ಉದಾಹರಣೆಗಳಿವೆ. ಸಾಕಷ್ಟು ತಂತ್ರಜ್ಞಾನ ಮುಂದುವರಿದ ಕಾಲಘಟ್ಟದಲ್ಲೂ ಸೇತುವೆಯೊಂದು ನಿರ್ಮಾಣ ಶುರುವಾಗಿ ಹತ್ತು ವರ್ಷವಾಗುತ್ತ ಬಂದಿದ್ದು, ಇನ್ನೂ ಮುಕ್ತಾಯವಾಗುವ ಲಕ್ಷಣ ಕಾಣುತ್ತಿಲ್ಲ.
ಇಲ್ಲಿನ ಕೆರವಡಿ-ಉಳಗಾ ಸೇತುವೆ ನಿರ್ಮಾಣ ಪ್ರಾರಂಭವಾಗಿ 9 ವರ್ಷ ಕಳೆದಿದೆ. ಡಿಸೆಂಬರ್ ಬಂದರೆ ಸೇತುವೆ ಶಂಕುಸ್ಥಾಪನೆಯ 10 ನೇ ವರ್ಷ ಶುರುವಾಗುತ್ತದೆ. ಕಾರವಾರದ ಕೆರವಡಿ-ಉಳಗಾ ಸೇತುವೆ ನಿರ್ಮಾಣಕ್ಕೆ 2017 ರ ಡಿಸೆಂಬರ್‌ನಲ್ಲಿ ಆಗಿನ ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದ್ದರು. ಕಾಮಗಾರಿಯೂ ಶುರುವಾಗಿತ್ತು. ಆದರೆ, ಇದುವರೆಗೂ ಮುಕ್ತಾಯವಾಗಿಲ್ಲ. ಇನ್ನೂ 3 ಸ್ಪಾನ್‌ಗಳನ್ನು (ಕಂಬ) ಜೋಡಿಸಿ ದಡ ಮುಟ್ಟಿಸುವ ಕಾರ್ಯವಾಗಿಲ್ಲ. ಈಗ ಕೆಲಸ ಸ್ಥಗಿತವಾಗಿ ವರ್ಷಗಳೇ ಕಳೆದಿವೆ.
30 ಕೋಟಿ ರೂ. ಕಾಮಗಾರಿ ಇದಾಗಿದ್ದು, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮಕ್ಕೆ ಈ ಸೇತುವೆ ನಿರ್ಮಾಣದ ಜವಾಬ್ದಾರಿ ವಹಿಸಲಾಗಿತ್ತು. ಡಿಆರ್‌ಎನ್ ಎಂಬ ಕಂಪನಿ ಗುತ್ತಿಗೆ ಪಡೆದಿತ್ತು. ಆದರೆ, ಕಾಮಗಾರಿ ಸಾಕಷ್ಟು ವಿಳಂಬವಾಗಿದ್ದರಿಂದ ವೆಚ್ಚ ಹೆಚ್ಚಿದೆ. ಹೆಚ್ಚುವರಿ 6 ಕೋಟಿ ರೂ. ಬೇಕಾಗಿದ್ದು, ಅದಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ ಎನ್ನುತ್ತಿದ್ದಾರೆ ಅಽಕಾರಿಗಳು, ಆದರೆ, ಇದುವರೆಗೂ ಕಾಮಗಾರಿ ಮಾತ್ರ ಪ್ರಾರಂಭವಾಗಿಲ್ಲ. ಉಳಗಾ ಭಾಗದಲ್ಲಿ ಸೇತುವೆಯನ್ನು ಮುಖ್ಯ ರಸ್ತೆಗೆ ಜೋಡಿಸಲು ಸಂಪರ್ಕ ರಸ್ತೆ ನಿರ್ಮಾಣಕ್ಕೆ ಈ ಯೋಜನೆಯಲ್ಲಿ ಅನುದಾನ ಸೇರಿಸಿರಲಿಲ್ಲ. ಖಾಸಗಿ ಜಮೀನಿನ ಭೂ ಸ್ವಾಧೀನವನ್ನು ಲೆಕ್ಕವೇ ಹಾಕಿರಲಿಲ್ಲ. ರಸ್ತೆ ಅಭಿವೃದ್ಧಿ ನಿಗಮದ ಇಂಜಿನಿಯರ್‌ಗಳ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ಕೆಲಸದಿಂದ ಸರ್ಕಾರದ ಹಣ ಪೋಲಾಗುವಂತಾಗಿದೆ.
ಕಾಳಿ ನದಿಯ ಪಕ್ಕದ ಕೆರವಡಿ ಹಾಗೂ ಉಳಗಾ ನಡುವೆ ಕಣ್ಣಳತೆಯ ದೂರವಿದೆ. ಆದರೆ, ನಡುವೆ ಇರುವ ಕಾಳಿ ನದಿ ಎರಡು ಗ್ರಾಮದ ಜನ ಸುರಳೀಯವಾಗಿ ಓಡಾಡುವುದನ್ನು ತಡೆಯುತ್ತದೆ. ಬಾರ್ಜ್ ಒಂದನ್ನು ಹಾಕಲಾಗಿದ್ದು, ಅದರ ಮೇಲೆ ಅಪಾಯದಲ್ಲಿ ವಿದ್ಯಾರ್ಥಿಗಳು ಓಡಾಡುತ್ತಾರೆ. ಮಳೆಗಾಲ ಬಂಗಾದ ಬಾರ್ಜ್ ಓಡಾಟವೂ ಸ್ಥಗಿತವಾಗುತ್ತದೆ. ಉಳಗಾದದಲ್ಲಿ ಪಿಯು, ಪದವಿ ಕಾಲೇಜ್‌ಗಳಿವೆ. ಶಿಕ್ಷಣ ಸಂಸ್ಥೆಗಳಿಗೆ ಕೆರವಡಿ, ದೇವಳಮಕ್ಕಿ ಭಾಗದಿಂದ ಉಳಗಾಕ್ಕೆ ಹೋಗುವ ವಿದ್ಯಾರ್ಥಿಗಳು ಬಾರ್ಜ್ ಮೇಲೆ ಹೋಗಬೇಕು ಇಲ್ಲವೇ 35 ಕಿಮೀ ಸುತ್ತುವರಿದು ಬರಬೇಕಾಗಿದೆ. ಉಳಗಾ, ಹಳಗಾ, ಧೋಲ್ ಸೇರಿದಂತೆ ಹಲವು ಗ್ರಾಮಗಳಿಂದ ಕೈಗಾ ಅಣು ಸ್ಥಾವರಕ್ಕೆ ಕೆಲಸಕ್ಕೆ ಹೋಗುವವರಿಗೆ ಕೆರವಡಿ ಸೇತುವೆ ನಿರ್ಮಾಣವಾದರೆ ದೂರ 10 ಕಿಮೀ ಕಡಿಮೆಯಾಗಲಿದೆ. ಆದರೆ, ಸೇತುವೆ ಈವರೆಗೂ ನಿರ್ಮಾಣ ಆಗದ್ದರಿಂದ ತೊಂದರೆ ಉಂಟಾಗಿದೆ ಎಂದು ಕಲಾವಿದ ದೀಪಕ ಹಳದಿಪುರ ಬೇಸರ ವ್ಯಕ್ತಪಡಿಸುತ್ತಾರೆ.
2017 ರ ಡಿಸೆಂಬರ್‌ನಲ್ಲಿಯೇ ಶಂಕುಸ್ಥಾಪನೆ ನೆರವೇರಿದ ಮಂಜಗುಣಿ ಸೇತುವೆ ಕಾಮಗಾರಿ ಮುಕ್ತಾಯವಾಗಿದೆ. ನಮ್ಮ ಸೇತುವೆ ಏಕೆ ಮುಗಿದಿಲ್ಲ ಎಂಬುದು ಗ್ರಾಮಸ್ಥರ ಪ್ರಶ್ನೆ.
ನನ್ನ ಅವಧಿಯಲ್ಲಿ ಸೇತುವೆ ಮಂಜೂರು ಮಾಡಿಸಿದ್ದೆ. ನಡುವೆ ಐದು ವರ್ಷ ಕಾಮಗಾರಿ ಬಗ್ಗೆ ಕಾಳಜಿ ವಹಿಸಿಲ್ಲ. ಸಾಕಷ್ಟು ಫಾಲೋ ಅಪ್ ಮಾಡಿ ಹೆಚ್ಚುವರಿ ಅನುದಾನ ಮಂಜೂರಿಗೆ ಕ್ರಮ ವಹಿಸಿದ್ದೇನೆ. ಶೀಘ್ರ ಸೇತುವೆ ಕಾಮಗಾರಿ ಶುರುವಾಗಲಿದೆ.ಸತೀಶ ಸೈಲ್, ಕಾರವಾರ ಶಾಸಕ