ಶಿರಸಿ: ಮದುವೆಯ ದಿನವೇ ಮದು ಮಗಳು ತನ್ನ ಪ್ರಿಯಕರನೊಂದಿಗೆ ನಾಪತ್ತೆಯಾದ ಘಟನೆ ನಗರದಲ್ಲಿ ಶನಿವಾರ ನಡೆದಿದೆ.
ನಗರದ ಮುಸ್ಲಿಮಗಲ್ಲಿಯ ಎಂಬಿಬಿಎಸ್ ಓದುತ್ತಿದ್ದ ಯುವತಿ ಬೇರೆ ಯುವಕನನ್ನು ಪ್ರೀತಿಸುತ್ತಿದ್ದ ವಿಷಯ ತಿಳಿದ ಪಾಲಕರು ಇಂದಿರಾನಗರದ ಸಾಫ್ಟ್‌ವೇರ್ ಕಂಪನಿಯಲ್ಲಿ ಉದ್ಯೋಗದಲ್ಲಿರುವ ಯುವಕನೊಂದಿಗೆ ಏ.25ರಂದು ಉಸರಿ ರಸ್ತೆಯಲ್ಲಿರುವ ಕಲ್ಯಾಣ ಮಂಟಪದಲ್ಲಿ ಮದುವೆ ಏರ್ಪಡಿಸಿದ್ದರು. ಆದರೆ, ಶನಿವಾರ ಬೆಳಗ್ಗೆ 3 ಗಂಟೆ ವೇಳೆಗೆ ಯುವತಿ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ ಎನ್ನಲಾಗಿದೆ. ಇದರಿಂದ ಅಘಾತಕ್ಕೊಳಗಾದ ಯುವತಿಯ ಪಾಲಕರು ಮತ್ತು ಯುವಕನ ಪಾಲಕರು ಇಬ್ಬರೂ ಇದೀಗ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಕ್ಷೀಪ್ರ ಕಾರ್ಯಾಚರಣೆ ನಡೆಸಿ, ಮೀನುಮಾರುಕಟ್ಟೆ ಬಳಿಯಲ್ಲಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಯುವತಿ ತೆರಳುತ್ತಿರುವ ದೃಶ್ಯ ದಾಖಲಾಗಿದೆ. ಮದುವೆ ಸಮಾರಂಭದ ಪ್ರಯುಕ್ತ ಬಂಧು-ಬಳಗದವರಿಗಾಗಿ ಯುವಕನ ಮನೆಯವರು ಕ್ವಿಂಟಾಲ್‌ಗಳಷ್ಟು ಮಟನ್, ಚಿಕನ್ ಊಟಕ್ಕೆ ಸಿದ್ಧತೆ ಕೈಗೊಂಡಿದ್ದರು. ಆದರೆ ಹಸಮಣೆ ಏರಬೇಕಿದ್ದ ವಧು ಪರಾರಿಯಾಗಿರುವ ಕಾರಣ ಎಲ್ಲವೂ ವ್ಯರ್ಥವಾಗಿದೆ.