ಮದುವೆಯ wedding ಸಾಂದರ್ಭಿಕ ಚಿತ್ರ.
ಶಿರಸಿ: ಮದುವೆಯ wedding ದಿನವೇ ಮದು ಮಗಳು ಪ್ರಿಯಕರನೊಂದಿಗೆ ನಾಪತ್ತೆಯಾದ ಘಟನೆ ನಗರದಲ್ಲಿ ಶನಿವಾರ ನಡೆದಿದೆ.
ಎಂಬಿಬಿಎಸ್ ಓದುತ್ತಿದ್ದ ನಗರದ ಮುಸ್ಲಿಮಗಲ್ಲಿಯ ಯುವತಿ ಬೇರೆ ಯುವಕನನ್ನು ಪ್ರೀತಿಸುತ್ತಿದ್ದ ವಿಷಯ ತಿಳಿದ ಪಾಲಕರು ಸಾಫ್ಟ್‌ವೇರ್ ಕಂಪನಿಯಲ್ಲಿ ಉದ್ಯೋಗದಲ್ಲಿರುವ ಇಂದಿರಾನಗರದ ಯುವಕನೊಂದಿಗೆ ಏ.25ರಂದು ಉಸರಿ ರಸ್ತೆಯಲ್ಲಿರುವ ಕಲ್ಯಾಣ ಮಂಟಪದಲ್ಲಿ ಮದುವೆ ಏರ್ಪಡಿಸಿದ್ದರು. ಆದರೆ, ಶನಿವಾರ ಬೆಳಗ್ಗೆ 3 ಗಂಟೆ ವೇಳೆಗೆ ಯುವತಿ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ ಎನ್ನಲಾಗಿದೆ.
ಇದರಿಂದ ಅಘಾತಕ್ಕೊಳಗಾದ ಯುವತಿಯ ಪಾಲಕರು ಮತ್ತು ಯುವಕನ ಪಾಲಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಯುವತಿ ತೆರಳುತ್ತಿರುವ ದೃಶ್ಯ ಮೀನುಮಾರುಕಟ್ಟೆ ಬಳಿಯಲ್ಲಿರುವ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿರುವುದನ್ನು ಪತ್ತೆಹಚ್ಚಿದ್ದಾರೆ. ತನಿಖೆ ಮುಂದುವರಿದಿದೆ.
ಮದುವೆ ಸಮಾರಂಭದ ಪ್ರಯುಕ್ತ ಬಂಧು-ಬಳಗದವರಿಗಾಗಿ ಯುವಕನ ಮನೆಯವರು ಕ್ವಿಂಟಾಲ್‌ಗಳಷ್ಟು ಮಟನ್, ಚಿಕನ್ ಊಟಕ್ಕೆ ಸಿದ್ಧತೆ ಕೈಗೊಂಡಿದ್ದರು. ಯುವತಿ ಪಾಲಕರೂ ಅಗತ್ಯವಿರುವ ಎಲ್ಲ ಸಿದ್ಧತೆ ಮಾಡಿಕೊಂಡಿದ್ದರು.
ಆದರೆ ಹಸಮಣೆ ಏರಬೇಕಿದ್ದ ವಧು ಪರಾರಿಯಾಗಿರುವ ಕಾರಣ ಎಲ್ಲವೂ ವ್ಯರ್ಥವಾಗಿದೆ.